ತೀವ್ರವಾದಿಗಳೊಂದಿಗೆ ಉಕ್ಕಿನ ಹಸ್ತದಿಂದ ವ್ಯವಹಾರ: ಸೌದಿ ಯುವರಾಜ ಎಚ್ಚರಿಕೆ

Update: 2020-11-13 17:58 GMT

ರಿಯಾದ್ (ಸೌದಿ ಅರೇಬಿಯ), ನ. 13: ತೀವ್ರವಾದಿಗಳೊಂದಿಗೆ ಉಕ್ಕಿನ ಹಸ್ತದಿಂದ ವ್ಯವಹರಿಸಲಾಗುವುದು ಎಂದು ಸೌದಿ ಅರೇಬಿಯದ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್ ಗುರುವಾರ ಹೇಳಿದ್ದಾರೆ. ಸೌದಿ ಅರೇಬಿಯದ ಜಿದ್ದಾ ನಗರದಲ್ಲಿ ಇತ್ತೀಚೆಗೆ ನಡೆದ ಪಾಶ್ಚಾತ್ಯ ರಾಜತಾಂತ್ರಿಕರ ಸಮಾವೇಶವನ್ನು ಗುರಿಯಾಗಿಸಿ ನಡೆದ ಬಾಂಬ್ ದಾಳಿಯ ಹೊಣೆಯನ್ನು ಐಸಿಸ್ ಉಗ್ರಗಾಮಿ ಸಂಘಟನೆ ವಹಿಸಿಕೊಂಡ ಒಂದು ದಿನದ ಬಳಿಕ ಅವರು ಈ ಎಚ್ಚರಿಕೆ ನೀಡಿದ್ದಾರೆ.

 ಜಿದ್ದಾದ ಮುಸ್ಲಿಮೇತರ ಸ್ಮಶಾನದಲ್ಲಿ ಬುಧವಾರ, ಮೊದಲ ಜಾಗತಿಕ ಯುದ್ಧ ಕೊನೆಗೊಂಡ ವಾರ್ಷಿಕ ದಿನವನ್ನು ಆಚರಿಸಲು ಪಾಶ್ಚಾತ್ಯ ರಾಜತಾಂತ್ರಿಕರು ಸೇರಿದ್ದರು. ಅವರನ್ನು ಗುರಿಯಾಗಿಸಿ ಬಾಂಬ್ ದಾಳಿ ನಡೆಸಲಾಗಿತ್ತು. ಪ್ರವಾದಿ ಮುಹಮ್ಮದ್‌ರ ವ್ಯಂಗ್ಯಚಿತ್ರಗಳ ಪ್ರಕಟನೆಗೆ ಫ್ರಾನ್ಸ್ ಅಧ್ಯಕ್ಷ ಇಮಾನುಯೆಲ್ ಮ್ಯಾಕ್ರೋನ್ ಬೆಂಬಲ ನೀಡಿರುವುದಕ್ಕೆ ಸಂಬಂಧಿಸಿ ಈ ದಾಳಿ ನಡೆದಿದೆ ಎಂದು ಭಾವಿಸಲಾಗಿದೆ.

ಭಯೋತ್ಪಾದಕ ಕೃತ್ಯಗಳನ್ನು ನಡೆಸುವವರನ್ನು ತೀವ್ರ ಶಿಕ್ಷೆಗೆ ಗುರಿಪಡಿಸಲಾಗುವುದು ಎಂಬುದಾಗಿ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್ ಎಚ್ಚರಿಸಿದ್ದಾರೆ.

ನೆದರ್‌ಲ್ಯಾಂಡ್ಸ್: ಸೌದಿ ರಾಯಭಾರ ಕಚೇರಿ ಮೇಲೆ ಗುಂಡಿನ ದಾಳಿ

ದ ಹೇಗ್ (ನೆದರ್‌ಲ್ಯಾಂಡ್ಸ್), ನ. 13: ನೆದರ್‌ಲ್ಯಾಂಡ್ಸ್‌ನ ದ ಹೇಗ್ ನಗರದಲ್ಲಿರುವ ಸೌದಿ ಅರೇಬಿಯದ ರಾಯಭಾರ ಕಚೇರಿಯ ಮೇಲೆ ಗುರುವಾರ ದುಷ್ಕರ್ಮಿಗಳು ಹಲವು ಸುತ್ತು ಗುಂಡು ಹಾರಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ರಾಯಭಾರ ಕಚೇರಿಯ ಕಟ್ಟಡಕ್ಕೆ ಹಾನಿಯಾಗಿದೆ, ಆದರೆ ಯಾರೂ ಗಾಯಗೊಂಡಿಲ್ಲ ಎಂದು ಅವರು ಹೇಳಿದ್ದಾರೆ.

ಕಟ್ಟಡದ ಕಿಟಿಕಿಗಳು ಗುಂಡೇಟಿನಿಂದ ಒಡೆದಿವೆ ಎಂದು ಎಎಫ್‌ಪಿ ಸುದ್ದಿ ಸಂಸ್ಥೆ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News