ಮಕ್ಕಳ ಹಕ್ಕುಗಳ ಸಪ್ತಾಹಕ್ಕೆ ಚಾಲನೆ

Update: 2020-11-14 15:40 GMT

ಬೆಂಗಳೂರು, ನ.14: ಕರ್ನಾಟಕ ಮಕ್ಕಳ ಹಕ್ಕುಗಳ ನಿಗಾ ಕೇಂದ್ರ, ಬಾಲ ಕಾರ್ಮಿಕ ಪದ್ಧತಿ ವಿರೋಧಿ ಆಂದೋಲನ ಹಾಗೂ ಆರ್‍ಟಿಇ ಕಾರ್ಯಪಡೆ ವತಿಯಿಂದ ಮಕ್ಕಳ ಹಕ್ಕುಗಳ ಸಪ್ತಾಹವನ್ನು ಉದ್ಘಾಟಿಸಲಾಯಿತು.

ಮಕ್ಕಳ ಹಕ್ಕುಗಳ ರಕ್ಷಣೆಗಾಗಿ, ಕೆಲಸ ಮಾಡುವವರಿಗೆ ನ.14 ರಂದು ದೇಶದ ಮಕ್ಕಳ ದಿನಾಚರಣೆಯಾದರೆ ನ.20 ರಂದು ಅಂತರ್‍ರಾಷ್ಟ್ರೀಯ ಮಕ್ಕಳ ಹಕ್ಕುಗಳ ದಿನವಾಗಿ ಆಯೋಜಿಸಲಾಗುತ್ತದೆ. ಸದ್ಯದ ಪರಿಸ್ಥಿತಿಯಲ್ಲಿ ಕೊರೋನ ಕಾರಣದಿಂದಾಗಿ ಮಕ್ಕಳು, ಹಿರಿಯರನ್ನು ಒಂದು ಕಡೆ ಸೇರಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಆನ್‍ಲೈನ್‍ನಲ್ಲಿ ಮಾಡಲಾಗುತ್ತಿದ್ದು, ಇಂದು ಕಾರ್ಯಕ್ರಮವನ್ನು ಉದ್ಘಾಟಿಸಲಾಗಿದೆ.

ನ.15 ಕ್ಕೆ ವಿಶ್ವ ಮಕ್ಕಳ ಹಕ್ಕುಗಳ ಬಗ್ಗೆ ರಸಪ್ರಶ್ನೆ, ಸ್ವಯಂ ಸೇವಾ ಸಂಸ್ಥೆಗಳ ಸದಸ್ಯರಿಗೆ ರಸಪ್ರಶ್ನೆ ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತದೆ. ನ.16 ಕ್ಕೆ ವಿಶ್ವ ಸಹಿಷ್ಣುತೆ ದಿನದ ಅಂಗವಾಗಿ ಸಿಕ್ರಂ ಸಂಸ್ಥೆಯ ಮಾರ್ಗರೇಟ್ ಸಂಪತ್‍ರಿಂದ ಮಕ್ಕಳ ಮೇಲಾಗುವ ತಾರತಮ್ಯ/ತಾತ್ಸಾರ ವಿಚಾರಗಳ ಬಗ್ಗೆ ಮಾಹಿತಿ ನೀಡಲಿದ್ದಾರೆ. ನ.17 ರಂದು ಮಕ್ಕಳು ಮತ್ತು ಪರಿಸರ/ವಾತಾವರಣ ತಮ್ಮ ಶಾಲೆಯಲ್ಲಿ ಗಿಡಮರ ಬೆಳೆಸಿ ‘ಹಸಿರು ಶಾಲೆ’ ಎಂದು ಪ್ರಖ್ಯಾತವಾದ ಗದುಗಿನ ಹಿರೇಕೊಪ್ಪದ ಸರಕಾರಿ ಶಾಲೆಯ ಮಕ್ಕಳ ಮತ್ತು ಶಿಕ್ಷಕರ ಅನುಭವ ಹಂಚಿಕೆ, ಮಧ್ಯಾಹ್ನ ಅಂಕಣಕಾರ ನಾಗೇಶ್ ಹೆಗಡೆ ಮಕ್ಕಳು ಮತ್ತು ಪರಿಸರದ ಕುರಿತು ಮಾಹಿತಿ ನೀಡಲಿದ್ದಾರೆ.

ನ.18 ರಂದು ರಾಜ್ಯದ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಜೊತೆ ಮಕ್ಕಳು ಚರ್ಚಿಸುವ ‘ಮಕ್ಕಳ ಹಕ್ಕುಗಳ ಸಂಸತ್’ ಕಾರ್ಯಕ್ರಮದ ಪೂರ್ವಭಾವಿ ಸಭೆ ನಡೆಯಲಿದೆ. ನ.19 ಕ್ಕೆ ವಿಶ್ವ ಶೌಚಾಲಯದ ದಿನದ ಅಂಗವಾಗಿ ಪ್ರಸನ್ನ ಸಾಲಿಗ್ರಾಮ ಅವರಿಂದ ಮಕ್ಕಳಲ್ಲಿ ಶುಚಿತ್ವ ಆರೋಗ್ಯ ವಿಚಾರದ ಕುರಿತು ಚರ್ಚಿಸಲಿದ್ದಾರೆ. ನ.20 ರಂದು ‘ಮಕ್ಕಳ ಹಕ್ಕುಗಳ ಸಂಸತ್’ನಲ್ಲಿ ಉಪ ಮುಖ್ಯಮಂತ್ರಿ ಮಕ್ಕಳ ಸಮಸ್ಯೆಗಳ ಕುರಿತು ಚರ್ಚಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News