ದರೋಡೆಗೆ ಹೊಂಚು ಆರೋಪ: ನಾಲ್ವರ ಬಂಧನ

Update: 2020-11-14 17:08 GMT

ಬೆಂಗಳೂರು, ನ.14: ರಾಜ್ಯ ಹೆದ್ದಾರಿಗಳ ಬಳಿ ದರೋಡೆಗೆ ಹೊಂಚು ಹಾಕುತ್ತಿದ್ದ ಆರೋಪದಡಿ ನಾಲ್ವರನ್ನು ಬಂಧಿಸುವಲ್ಲಿ ನೆಲಮಂಗಲ ಗ್ರಾಮಾಂತರ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ.

ನೆಲಮಂಗಲದ ಗಿರೀಶ್(23), ಬಿ.ಎಸ್ ಗೋವಿಂದರಾಜು(22), ಅನೂಪ್ ಮೋಹನ್(23) ಹಾಗೂ ಹೆಚ್.ಪಿ.ಪುನೀತ್ ಕುಮಾರ್ ಬಂಧಿತ ಆರೋಪಿಗಳಾಗಿದ್ದು, ಮತ್ತೊಬ್ಬ ಆರೋಪಿ ರಘು ಕುಮಾರ್(23) ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ನೆಲಮಂಗಲದ ಮಲ್ಲರಬಾಣವಾಡಿಯಿಂದ ಸೊಂಡೇಕೊಪ್ಪ ಮುಖ್ಯ ರಸ್ತೆಯಲ್ಲಿ ಸಂಚಾರ ಮಾಡುವ ಜನರಿಗೆ ಮಾರಕಾಸ್ತ್ರಗಳನ್ನು ತೋರಿಸಿ ಬೆದರಿಕೆ ಹಾಕಿ ದರೋಡೆ ಮಾಡುತ್ತಿದ್ದರು. ಈ ಕುರಿತು ಸ್ಥಳೀಯರು ನೆಲಮಂಗಲ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದರು.

ದೂರನ್ನು ಆಧರಿಸಿ ಕಾರ್ಯಾಚರಣೆ ನಡೆಸಿದ ವೃತ್ತ ನಿರೀಕ್ಷಕ ಎ.ವಿ.ಕುಮಾರ್ ಹಾಗೂ ಎಸ್‍ಐ ಟಿ.ಹೆಚ್.ವಸಂತ್ ನೇತೃತ್ವದ ತಂಡ ನಾಲ್ಕು ಮಂದಿ ದರೋಡೆಕೋರರನ್ನು ಬಂಧಿಸಿದ್ದು ಒಬ್ಬ ಆರೋಪಿ ಪೊಲೀಸರಿಂದ ತಪ್ಪಿಸಿಕೊಂಡಿದ್ದಾನೆ.

ಬಂಧಿತರಿಂದ ಕೃತ್ಯಕ್ಕೆ ಬಳಸುತ್ತಿದ್ದ 6 ಬೈಕ್‍ಗಳು, 1 ಕಾರು, 7 ವಿವಿಧ ಬಗೆಯ ಮಾರಕಾಸ್ತ್ರಗಳು ಹಾಗೂ 4 ಮೊಬೈಲ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News