"ಅಲ್ ಖೈದಾ ಜತೆ ನಂಟಿದೆ ಎಂಬುದಕ್ಕೆ ಯಾವುದೇ ಪುರಾವೆಯಿಲ್ಲ"

Update: 2020-11-17 15:45 GMT

ರಾಂಚಿ : ಉಗ್ರ ಸಂಘಟನೆ ಅಲ್ ಖೈದಾ ಜತೆ ನಂಟು ಹೊಂದಿದ ಆರೋಪದ ಮೇಲೆ ಅಕ್ರಮ ಚಟುವಟಿಕೆಗಳ ನಿಯಂತ್ರಣ ಕಾಯಿದೆಯಡಿ ಪ್ರಕರಣ ಎದುರಿಸುತ್ತಿದ್ದ, ಒಂದು ವರ್ಷಕ್ಕೂ ಹೆಚ್ಚಿನ ಸಮಯದಿಂದ ಜೈಲಿನಲ್ಲಿದ್ದ ಮೌಲಾನ ಕಲೀಮುದ್ದೀನ್ ಮುಝಾಹಿರಿ ಅವರಿಗೆ ಜಾರ್ಖಂಡ್ ಹೈಕೋರ್ಟ್ ನವೆಂಬರ್ 3ರಂದು ಜಾಮೀನು ನೀಡಿದೆ.

"ಅಪೀಲುದಾರರು ಅಲ್ ಖೈದಾ ಸಂಘಟನೆಯ ಯಾವುದೇ ಚಟುವಟಿಕೆಗಳಲ್ಲಿ ಶಾಮೀಲಾಗಿದ್ದಾರೆಂಬುದಕ್ಕೆ ಯಾವುದೇ ಪುರಾವೆ ಒದಗಿಸಲಾಗಿಲ್ಲ. ಅಷ್ಟೇ ಅಲ್ಲದೆ ಅಕ್ರಮ ಹಾಗೂ ದೇಶ ವಿರೋಧಿ ಚಟುವಟಿಕೆಗಳಲ್ಲಿ  ತೊಡಗಿಸಿಕೊಂಡಿರುವ ಯಾವುದೇ ಸಂಘಟನೆ ಅಪೀಲುದಾರರಿಗೆ ಹಣ ಒದಗಿಸಿದೆ ಎಂಬುದಕ್ಕೆ ಯಾವುದೇ ಸಾಕ್ಷಿಯನ್ನೂ ತನಿಖಾಧಿಕಾರಿ ಸಂಗ್ರಹಿಸಿಲ್ಲ'' ಎಂದು ಜಸ್ಟಿಸ್ ಕೈಲಾಶ್ ಪ್ರಸಾದ್ ದೇವ್ ಅವರ ನೇತೃತ್ವದ ಪೀಠ ಜಾಮೀನು ಮಂಜೂರುಗೊಳಿಸಿ ಹೊರಡಿಸಿದ ಆದೇಶದಲ್ಲಿ ತಿಳಿಸಿದೆ.

"ಅಪೀಲುದಾರರು ಯಾವುದೇ ಕ್ರಿಮಿನಲ್ ಹಿನ್ನೆಲೆಯಿಲ್ಲದ ಮೌಲಾನ ಆಗಿರುವುದನ್ನೂ ಪರಿಗಣಿಸಿ ಅವರಿಗೆ ಜಾಮೀನು ನೀಡಲು ನಿರ್ಧರಿಸಲಾಗಿದೆ,'' ಎಂದು ನ್ಯಾಯಾಲಯ ಹೇಳಿದೆ. ಪ್ರಕರಣವನ್ನು ರಾಷ್ಟ್ರೀಯ ತನಿಖಾ ಏಜನ್ಸಿ ತನಿಖೆ ನಡೆಸಿಲ್ಲ ಬದಲಾಗಿ ಸ್ಥಳೀಯ ಪೊಲೀಸರು ತನಿಖೆ ನಡೆಸಿದ್ದರೆಂಬ ಅಂಶವನ್ನೂ ನ್ಯಾಯಾಲಯ ಗಣನೆಗೆ ತೆಗೆದುಕೊಂಡಿದೆ.

ಪ್ರಕರಣದ ಸಹ ಆರೋಪಿಗಳಾದ ಅಹ್ಮದ್ ಮಸೂದ್ ಅಕ್ರಮ್ ಎಸ್ ಕೆ ಹಾಗೂ ಅಬ್ದುಲ್ ರಹ್ಮಾನ್ ಕಟ್ಕಿ ಎಂಬವರು ಮೌಲಾನ ಅವರ ಸಕ್ಚಿ ಮದರಸಾದಲ್ಲಿರುವ ಮನೆಯಲ್ಲಿ ಅವರನ್ನು ಭೇಟಿಯಾಗಿದ್ದರು ಹಾಗೂ ದೇಶವಿರೋಧಿ ಕಾರ್ಯದಲ್ಲಿ ತೊಡಗಲು ಅವರಿಗೆ ಗುಜರಾತ್‍ನಿಂದ ಸ್ವಲ್ಪ ಹಣ ದೊರಕಿತ್ತು ಎಂದು ಆರೋಪಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News