ಕೊರೋನ ಸೋಂಕಿತ ಮೃತರಲ್ಲಿ ಅಧಿಕ ರಕ್ತದೊತ್ತಡ, ಮಧುಮೇಹಿಗಳು ಹೆಚ್ಚು
ಬೆಂಗಳೂರು, ನ.17: ರಾಜಧಾನಿಯಲ್ಲಿ ಕೊರೋನ ಸೋಂಕಿನಿಂದ ಮೃತರಾದವರ ಪೈಕಿ ಅಧಿಕ ರಕ್ತದೊತ್ತಡ, ಮಧುಮೇಹಿಗಳು ಹೆಚ್ಚು ಎಂದು ಬೆಂಗಳೂರು ವೈದ್ಯಕೀಯ ಕಾಲೇಜು ಅಧ್ಯಯನ ತಿಳಿಸಿದೆ.
ನಗರದ ಸರಕಾರಿ ಆಸ್ಪತ್ರೆ ಲೇಡಿ ಕರ್ಜನ್ ಬೌರಿಂಗ್ ಕಾಲೇಜ್ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ನವೆಂಬರ್ 8ರವರೆಗೂ ಒಟ್ಟು 221 ಕೊರೋನ ಸೋಂಕಿತರು ಮೃತಪಟ್ಟಿದ್ದಾರೆ. ಇವರಲ್ಲಿ ಬಹುತೇಕ ಸೋಂಕಿತರು ಅಧಿಕ ರಕ್ತದೊತ್ತಡ ಸಮಸ್ಯೆ ಇರುವವರು ಅಥವಾ ಮಧುಮೇಹಿಗಳು ಎಂಬುದು ತಿಳಿದು ಬಂದಿದೆ.
ಮಧುಮೇಹ ಮತ್ತು ಅಧಿಕ ರಕ್ತದೊತ್ತಡ ರೋಗಿಗಳಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇದ್ದು, ದ್ವಿತೀಯ ಸೋಂಕಿಗೆ ಒಳಗಾಗುತ್ತಾರೆ. ಕೊರೋನದಂತಹ ಸೋಂಕಿಗೆ ಒಂದು ಬಾರಿ ತುತ್ತಾದರೆ ಅವರ ರಕ್ತದಲ್ಲಿನ ಸಕ್ಕರೆ ಪ್ರಮಾಣವು ಹೆಚ್ಚಾಗುತ್ತದೆ. ಅಲ್ಲದೇ ಅವರ ಶ್ವಾಸಕೋಶವು ಸೋಂಕಿನಿಂದ ಪ್ರಭಾವಿತವಾಗಿರುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಅವರು ಗುಣಮುಖರಾಗಲು ಸಾಧ್ಯವಿರುವುದಿಲ್ಲ ಎಂದು ಬೌರಿಂಗ್ ಆಸ್ಪತ್ರೆಯ ಡೀನ್ ಮತ್ತು ನಿರ್ದೇಶಕ ಡಾ. ಮನೋಜ್ ಕುಮಾರ್ ಹೇಳಿದ್ದಾರೆ.
ಅಧಿಕ ರಕ್ತದೊತ್ತಡ ಇರುವ ರೋಗಿಗಳಲ್ಲಿ ಹೃದಯದ ಮೇಲೆ ಪರಿಣಾಮ ಬೀರುತ್ತದೆ. ಕೊರೋನ ಸೋಂಕಿಗೆ ಒಳಪಟ್ಟ ರೋಗಿಗಳಲ್ಲಿ ಹೃದಯ ಸ್ನಾಯುಗಳಲ್ಲಿ ಉರಿಯೂತವಾಗಿ ಸಾವಿಗೆ ಕಾರಣವಾಗಿದೆ ಎಂದು ಅವರು ತಿಳಿಸಿದ್ದಾರೆ.
ಟೈಪ್ 1 ಮತ್ತು ಟೈಪ್ 2 ಮಧುಮೇಹ ಎರಡೂ ದೀರ್ಘಕಾಲದ ಕಾಯಿಲೆಗಳಾಗಿವೆ, ಅದು ರಕ್ತದಲ್ಲಿ ಹೆಚ್ಚಿನ ಸಕ್ಕರೆ ಮಟ್ಟವನ್ನು ಉತ್ಪಾದಿಸುತ್ತದೆ. ಮಧುಮೇಹಿಗಳಲ್ಲಿ ದೇಹವು ಗ್ಲೂಕೋಸ್ ಅನ್ನು ಶಕ್ತಿಯನ್ನಾಗಿ ಪರಿವರ್ತಿಸುವ ಇನ್ಸುಲಿನ್ ಉತ್ಪಾದನೆಯನ್ನು ಕಡಿಮೆ ಮಾಡುತ್ತದೆ. ಪರಿಣಾಮವಾಗಿ, ದೇಹದಲ್ಲಿ ಗ್ಲೂಕೋಸ್ ಹೆಚ್ಚಾಗುತ್ತದೆ ಎಂದು ಅಸ್ಟರ್ ಸಿಎಂಐ ಆಸ್ಪತ್ರೆಯ ಸಮಾಲೋಚಕ ವೈದ್ಯ ಡಾ. ಮಹೇಶ್ ಹೇಳುತ್ತಾರೆ.
ಕೊರೋನ ಸೋಂಕಿಗೆ ತುತ್ತಾದ ಬಹುತೇಕ ವೃದ್ಧರ ಸಾವಿಗೆ ಮಧುಮೇಹವೇ ಕಾರಣವಾಗಿದೆ. ರಕ್ತದಲ್ಲಿ ಸಕ್ಕರೆ ಪ್ರಮಾಣ ಮತ್ತು ಕಡಿಮೆ ರೋಗ ನಿರೋಧಕ ಶಕ್ತಿ ಇರುವುದು ಅಧ್ಯಯನದಲ್ಲಿ ತಿಳಿದುಬಂದಿದೆ. ಅಧಿಕ ರಕ್ತದೊತ್ತಡ ಸಮಸ್ಯೆಯೂ ಸಾವಿಗೆ ಕಾರಣವಾಗಿರಬಹುದು ಎಂದು ಡಾ. ಮಹೇಶ್ ತಿಳಿಸಿದ್ದಾರೆ.
ಬೌರಿಂಗ್ ಆಸ್ಪತ್ರೆಯಲ್ಲಿ 61 ರಿಂದ 70 ವರ್ಷದ 50 ರೋಗಿಗಳು, 51 ರಿಂದ 60 ವರ್ಷದೊಳಗಿನ 47 ರೋಗಿಗಳು, 71 ರಿಂದ 80 ವರ್ಷದೊಳಗಿನ 44 ರೋಗಿಗಳು, 41 ರಿಂದ 50 ವರ್ಷದೊಳಗಿನ 38 ರೋಗಿಗಳು, 31ರಿಂದ 40 ವರ್ಷದೊಳಗಿನ 17 ಸೋಂಕಿತರು, 21ರಿಂದ 30 ವರ್ಷದೊಳಗಿನ 8 ರೋಗಿಗಳು, 11 ರಿಂದ 20 ವರ್ಷದೊಳಗಿನ ಇಬ್ಬರು ಸಾವನ್ನಪ್ಪಿದ್ದಾರೆ. ಒಟ್ಟಾರೇ 221 ಸಾವಿನ ಪೈಕಿ 145 ಪುರುಷರು ಮತ್ತು 76 ಮಹಿಳೆಯರು ಆಗಿದ್ದಾರೆ.