ಮಹಾರಾಷ್ಟ್ರ ನಾಯಕರ ಹೇಳಿಕೆಗೆ ಕಿಮ್ಮತ್ತು ಕೊಡೋದಿಲ್ಲ : ಸಚಿವ ಎಸ್ ಟಿ ಸೋಮಶೇಖರ್

Update: 2020-11-18 09:23 GMT

ಬೆಳಗಾವಿ : ನಾಡು - ನುಡಿ - ಭಾಷೆ ವಿಷಯದಲ್ಲಿ ಕರ್ನಾಟಕ ಸರ್ಕಾರ ಎಂದಿಗೂ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ. ಮಹಾ ರಾಷ್ಟ್ರ ನಾಯಕರ ಹೇಳಿಕೆಗೆ ಕಿಮ್ಮತು ಕೊಡಬೇಕಾಗಿಯೂ ಇಲ್ಲ. ಗಡಿ ವಿಷಯದಲ್ಲಿ ಕಾಲು ಕೆದರಿಕೊಂಡು ಬರುವ ಮಹಾರಾಷ್ಟ್ರ ನಾಯಕರು ಸಾಮರಸ್ಯ ಕದಡಲು ಯತ್ನಿಸುತ್ತಿದ್ದಾರೆ. ಇದಕ್ಕೆ ನಾವು ಸೊಪ್ಪು ಹಾಕುವುದಿಲ್ಲ ಎಂದು ಸಹಕಾರ ಸಚಿವ ಎಸ್. ಟಿ. ಸೋಮಶೇಖರ್ ತಿರುಗೇಟು ನೀಡಿದರು.

 ಬುಧವಾರ ಬೆಳಗಾವಿ, ಕಾರವಾರ ಮತ್ತು ನಿಪ್ಪಾಣಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು ಎಂಬ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಹೇಳಿಕೆಗೆ ಬೆಳಗಾವಿಯಲ್ಲಿ ತಿರುಗೇಟು ನೀಡಿದ ಸೋಮಶೇಖರ್, ಮಹಾರಾಷ್ಟ್ರದಲ್ಲಿ ಈಗ ಯಾವುದೋ ಚುನಾವಣೆ ಬಂದಿರಬೇಕು. ಈ ಕಾರಣಕ್ಕೆ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಇಂತಹ ಅಸಂಬದ್ಧ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಅವರ ಇಂಥ ಹೇಳಿಕೆಗಳಿಗೆ ಕರ್ನಾಟಕ ಸೊಪ್ಪು ಹಾಕುವುದಿಲ್ಲ ಎಂದರು. ಬೆಳಗಾವಿ ಜಿಲ್ಲೆ ದೊಡ್ಡ ಜಿಲ್ಲೆಯಾಗಿದೆ. ಹೆಚ್ಚಿನ ನಾಯಕರು, ಮಂತ್ರಿಗಳು ಇದೇ ಜಿಲ್ಲೆಯವರಿದ್ದಾರೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಇಲ್ಲಿನ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಯಾವ ಕಾಲಕ್ಕೆ ಯಾವ ತೀರ್ಮಾನ ತೆಗೆದುಕೊಳ್ಳಬೇಕೋ ಅದನ್ನು ತೆಗೆದುಕೊಳ್ಳುತ್ತಾರೆ. ನಾಡು - ನುಡಿ - ಗಡಿ ವಿಷಯ ಬಂದಾಗ ಅವರು ದಿಟ್ಟ ಕ್ರಮಗಳನ್ನು ತೆಗೆದುಕೊಂಡೇ ತೆಗೆದುಕೊಳ್ಳುತ್ತಾರೆ. ಈ ಬಗ್ಗೆ ಯಾವುದೇ ಸಂಶಯ ಬೇಡ ಎಂದು ಸಚಿವ ಸೋಮಶೇಖರ್ ಅವರು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News