ಹಿಂದಿ, ಸಂಸ್ಕೃತ ಕಲಿಯಲು ಪ್ರೋತ್ಸಾಹಿಸುತ್ತಿರುವುದು ಕ್ರಮವಲ್ಲ: ಟಿ.ಎಸ್.ನಾಗಾಭರಣ

Update: 2020-11-18 11:22 GMT

ಬೆಂಗಳೂರು, ನ.18: ರಾಜ್ಯದಲ್ಲಿರುವ ಕೇಂದ್ರೀಯ ವಿದ್ಯಾಲಯಗಳಲ್ಲಿ ಕನ್ನಡವನ್ನು ಕಡೆಗಣಿಸಲಾಗುತ್ತಿದೆ. ವಿದ್ಯಾಲಯಕ್ಕೆ ಸೇರುವ ಮಕ್ಕಳಲ್ಲಿ ಕನ್ನಡ ಕಲಿಯುವ ಆಸಕ್ತಿಯಿದ್ದರೂ ಬಲವಂತವಾಗಿ ಹಿಂದಿ, ಸಂಸ್ಕೃತ ಕಲಿಯಲು ಪ್ರೋತ್ಸಾಹಿಸುತ್ತಿರುವುದು ಸರಿಯಾದ ಕ್ರಮವಲ್ಲ. ಇನ್ನು ಮುಂದೆ ಹೀಗಾಗದಂತೆ ಎಚ್ಚರ ವಹಿಸುವಂತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ, ಕೇಂದ್ರೀಯ ವಿದ್ಯಾಲಯ ಸಂಘಟನೆಗೆ ತಾಕೀತು ಮಾಡಿದರು.

ಆಡಳಿತದಲ್ಲಿನ ಸಂಪೂರ್ಣ ಕನ್ನಡ ಅನುಷ್ಟಾನ ಕುರಿತು ವಿಧಾನಸೌಧದಲ್ಲಿಂದು ಕೇಂದ್ರೀಯ ವಿದ್ಯಾಲಯ ಸಂಘಟನೆಯೊಂದಿಗೆ ಜಾಲ ಸಂಪರ್ಕ ಸಭೆ ನಡೆಸಿದ ಅವರು, ಕರ್ನಾಟಕದಲ್ಲಿರುವ ವಿದ್ಯಾ ಸಂಸ್ಥೆಯೊಂದು ಕನ್ನಡವನ್ನು ಕಡೆಗಣಿಸುವುದು ಸರಿಯಲ್ಲ. ಕೇಂದ್ರೀಯ ವಿದ್ಯಾಲಯವು ಸೇರಿದಂತೆ ರಾಜ್ಯದಲ್ಲಿರುವ ಎಲ್ಲ ಶೈಕ್ಷಣಿಕ ಸಂಸ್ಥೆಗಳು 2015ರ ಕನ್ನಡ ಭಾಷಾ ಕಲಿಕಾ ಅಧಿನಿಯಮದನ್ವಯ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಬೇಕಿರುವುದು ನಿಮ್ಮ ಜವಾಬ್ದಾರಿಯಾಗಿದ್ದು, ಕೂಡಲೇ ಕನ್ನಡವನ್ನು ದ್ವಿತೀಯ ಭಾಷೆಯಾಗಿ ಬೋಧಿಸುವಂತೆ ಸೂಚಿಸಿದರು.

ಪ್ರಾಧಿಕಾರ ನಡೆಸುವ ಮುಖ್ಯವಾದ ಕನ್ನಡ ಅನುಷ್ಟಾನ ಪರಿಶೀಲನಾ ಸಭೆಗೆ ಮುಖ್ಯವಾಗಿ ಆಯುಕ್ತರು ಪಾಲ್ಗೊಂಡು ಕನ್ನಡದ ಅನುಷ್ಟಾನ, ನೇಮಕಾತಿ ಇತ್ಯಾದಿಗಳ ಬಗ್ಗೆ ಚರ್ಚಿತವಾಗುವ ವಿಷಯಗಳ ಅನುಪಾಲನೆ ಮಾಡುವಲ್ಲಿ ತುರ್ತು ಕ್ರಮಗಳನ್ನು ಕೈಗೊಳ್ಳಬೇಕಾಗಿರುವುದು ಅವರ ಗುರುತರ ಜವಾಬ್ದಾರಿಯೂ ಆಗಿತ್ತು. ಅವರ ಅನುಪಸ್ಥಿತಿಯ ಬಗ್ಗೆ ಸೂಕ್ತ ಮಾಹಿತಿಯನ್ನು ಪ್ರಾಧಿಕಾರಕ್ಕೆ ತಿಳಿಸುವಂತೆ ಹೇಳಿದರು.

ಶಿಕ್ಷಣ ತಜ್ಞ ಡಾ.ವಿ.ಪಿ.ನಿರಂಜನಾರಾಧ್ಯ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ.ಕೆ.ಮುರಳಿಧರ, ಕೇಂದ್ರೀಯ ವಿದ್ಯಾಲಯ ಸಂಘಟನೆಯ ಉಪ ಆಯುಕ್ತ ಡಾ.ಎನ್.ವಸಂತ್, ಅಧ್ಯಕ್ಷರ ಅಪ್ತ ಕಾರ್ಯದರ್ಶಿ ಡಾ.ವೀರಶೆಟ್ಟಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News