ರಾಜಧಾನಿಯಲ್ಲಿ ಮತ್ತೆ ಗುಂಡಿನ ಮೊರೆತ: ಇಬ್ಬರು ಆರೋಪಿಗಳಿಗೆ ಗುಂಡಿಕ್ಕಿ ಬಂಧಿಸಿದ ಪೊಲೀಸರು
Update: 2020-11-18 18:38 IST
ಬೆಂಗಳೂರು, ನ.18: ಸಿಲಿಕಾನ್ ಸಿಟಿಯಲ್ಲಿ ಮತ್ತೊಮ್ಮೆ ಪೊಲೀಸರ ಬಂದೂಕು ಸದ್ದು ಮಾಡಿದೆ. ಬುಧವಾರ ಬೆಳಗ್ಗೆ ಎರಡು ಕಡೆ ಪೊಲೀಸರು ಫೈರಿಂಗ್ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಖಚಿತ ಮಾಹಿತಿಯ ಮೇರೆಗೆ ಸಿಸಿಬಿ ಪೊಲೀಸರು ನಾರಾಯಣ ನಗರ ಡಬಲ್ ರೋಡ್ ಬಳಿ, 23 ಪ್ರಕರಣದಲ್ಲಿ ಆರೋಪಿಯಾಗಿದ್ದ ಮಂಜನ ಬಂಧನಕ್ಕೆ ತೆರಳಿದ್ದಾರೆ. ಈ ವೇಳೆ ಪೊಲೀಸರ ಮೇಲೆ ಹಲ್ಲೆ ನಡೆಸಿ, ಪರಾರಿಯಾಗಲು ಆರೋಪಿ ಮಂಜ ಯತ್ನಿಸಿದ್ದಾನೆ. ಹೀಗಾಗಿ ಪೊಲೀಸರು ಆತನ ಕಾಲಿಗೆ ಗುಂಡು ಹೊಡೆದು ಬಂಧಿಸಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ ಬ್ಯಾಡರಹಳ್ಳಿ ಬ್ರಹ್ಮದೇವರ ಬೆಟ್ಟದ ಬಳಿ, ಕೊಲೆ ಪ್ರಕರಣ ಆರೋಪಿಯಾಗಿದ್ದ ವಿಶ್ವ ಎಂಬಾತನನ್ನು ಬಂಧಿಸಲು ತೆರಳಿದ್ದಾರೆ. ಈ ವೇಳೆ ಪೊಲೀಸರ ಮೇಲೆ ದಾಳಿ ನಡೆಸಲು ಯತ್ನಿಸಿದ ಆರೋಪಿ ವಿಶ್ವ ಎಂಬಾತನ ಮೇಲೆ ಫೈರಿಂಗ್ ಮಾಡಿ, ಬಂಧಿಸಿದ್ದಾರೆ. ಈ ಮೂಲಕ ಸಿಲಿಕಾನ್ ಸಿಟಿಯಲ್ಲಿ ಪೊಲೀಸರ ಗುಂಡಿನ ಸದ್ದು ಮತ್ತೆ ಸದ್ದು ಮಾಡಿ, ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.