ಜೆಡಿಎಸ್ ಮುಖಂಡ ಎಚ್.ಪಿ.ಸುಬ್ಬಾರೆಡ್ಡಿ ಕಾಂಗ್ರೆಸ್ ಸೇರ್ಪಡೆ

Update: 2020-11-18 14:17 GMT

ಬೆಂಗಳೂರು, ನ.18: ಈಗಾಗಲೇ 128 ಹಳ್ಳಿಗಳಿಗೆ ಭೇಟಿ ನೀಡಿ, ಜನರ ಕಷ್ಟಸುಖಗಳನ್ನು ಆಲಿಸಿದ್ದೇನೆ. ಬಿಜೆಪಿಯ ಯಾವ ಮುಖಂಡರು ಬಂದರೂ ಏನೂ ಆಗಲ್ಲ. ನಾನು ನಮ್ಮ ಅಭ್ಯರ್ಥಿಯನ್ನ ಗೆಲ್ಲಿಸಿಕೊಂಡು ಬರುತ್ತೇನೆ. ಅಲ್ಲಿಯವರೆಗೂ ಈ ಕಡೆಗೆ ಬರುವುದಿಲ್ಲ ಎಂದು ಕಾಂಗ್ರೆಸ್ ಸೇರ್ಪಡೆಯಾದ ಬಸವಕಲ್ಯಾಣದ ಎಚ್.ಪಿ.ಸುಬ್ಬಾರೆಡ್ಡಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬುಧವಾರ ನಗರದ ಕೆಪಿಸಿಸಿ ಕಚೇರಿಯಲ್ಲಿ ಅಧಿಕೃತವಾಗಿ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿ ಮಾತನಾಡಿದ ಅವರು, ನಾನು ಯಾವುದೇ ಆಕಾಂಕ್ಷೆಯಿಲ್ಲದೇ ಕಾಂಗ್ರೆಸ್ ಸೇರ್ಪಡೆಯಾಗಿದ್ದೇನೆ. ಬಸವಕಲ್ಯಾಣ ಕ್ಷೇತ್ರದಲ್ಲಿ ಸಂಘಟನೆ ಮಾಡಿದ್ದೇನೆ. ಹಳ್ಳಿಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿದ್ದೇನೆ ಎಂದರು.

ಬಿ.ನಾರಾಯಣರಾವ್ ನಿಧನದ ಅನುಕಂಪ ಕ್ಷೇತ್ರದಲ್ಲಿ ಇದೆ. ಅವರ ಕುಟುಂಬ ಸದಸ್ಯರಿಗೆ ಟಿಕೆಟ್ ನೀಡಿದರೆ ಅಭ್ಯಂತರವಿಲ್ಲ. ಬದಲಿ ಅಭ್ಯರ್ಥಿ ಹುಡುಕಾಟವೇನಾದರೂ ನಡೆದಿದ್ದಲ್ಲಿ ನಾನು ಕೂಡ ಪ್ರಬಲ ಆಕಾಂಕ್ಷಿ. ಟಿಕೆಟ್ ಸಿಕ್ಕರೆ ಗೆದ್ದು ಬರುವ ಸಾಮರ್ಥ್ಯ ನನಗಿದೆ. ನನಗೇ ಟಿಕೆಟ್ ನೀಡಿದರೆ ಇಲ್ಲವೇ ಬೇರೆ ಒಮ್ಮತದ ಅಭ್ಯರ್ಥಿಗೆ ಟಿಕೆಟ್ ನೀಡಿದರೆ ಕನಿಷ್ಠ 40 ಸಾವಿರ ಮತಗಳ ಅಂತರದಿಂದ ಗೆಲ್ಲಿಸಿಕೊಂಡು ಬರುವ ಶಕ್ತಿ ನನಗಿದೆ ಎಂದರು.

ಈ ವೇಳೆ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಬಸವಕಲ್ಯಾಣ ಕ್ಷೇತ್ರದಲ್ಲಿಯೇ ಇದ್ದು ಜನರ ಸೇವೆ ಮಾಡಿರುವ ಸುಬ್ಬಾರೆಡ್ಡಿ ಕಾಂಗ್ರೆಸ್ ಸೇರ್ಪಡೆ ಆಗಿದ್ದಾರೆ. ಒಂದು ಬಾರಿ ವಿಧಾನಪರಿಷತ್ ಚುನಾವಣೆಗೆ ಸ್ಪರ್ಧಿಸಿದ ಅನುಭವವಿದೆ. ಈಗ ಸ್ವಯಂ ಪ್ರೇರಣೆಯಿಂದ ಯಾವುದೇ ಷರತ್ತಿಲ್ಲದೇ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಪಕ್ಷದ ತತ್ವಾದರ್ಶ ಒಪ್ಪಿ ಬಂದಿದ್ದಾರೆ. ಪಕ್ಷದ ರಾಜ್ಯ ನಾಯಕರನ್ನು ಭೇಟಿಯಾಗಿ ಅವರ ಸಮ್ಮತಿ ಪಡೆದು ಸೇರ್ಪಡೆ ಆಗಿದ್ದು, ಬಸವ ಕಲ್ಯಾಣದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಇನ್ನಷ್ಟು ಬಲ ಲಭಿಸಲಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News