ಕೊರೋನ ಸೋಂಕಿತರಿಗೆ ಇನ್ನು ಮುಂದೆ ಸರಕಾರಿ ಆಸ್ಪತ್ರೆಗಳಲ್ಲೇ ಚಿಕಿತ್ಸೆ

Update: 2020-11-18 16:56 GMT

ಬೆಂಗಳೂರು, ನ.19: ಬಿಬಿಎಂಪಿ ವ್ಯಾಪ್ತಿಯಲ್ಲಿ ಈ ಹಿಂದೆ ಖಾಸಗಿ ಆಸ್ಪತ್ರೆಗಳಲ್ಲಿ ಕೊರೋನ ಸೋಂಕಿತರಿಗೆ ಕಡ್ಡಾಯವಾಗಿ ಶೇ.50ರಷ್ಟು ಬೆಡ್ ಮೀಸಲಿಡಬೇಕು ಎಂದು ಹೊರಡಿಸಿದ್ದ ಆದೇಶವನ್ನು ಬಿಬಿಎಂಪಿ ಬುಧವಾರ ಪರಿಷ್ಕರಿಸಿದೆ.

ಕೊರೋನ ಸೋಂಕಿತರನ್ನು ಸರಕಾರ ಅಥವಾ ಬಿಬಿಎಂಪಿ ಶಿಫಾರಸಿನ ಮೇರೆಗೆ ಚಿಕಿತ್ಸೆಗೆ ದಾಖಲಿಸಲು ಸರಕಾರಿ ಆಸ್ಪತ್ರೆ ಅಥವಾ ಸರಕಾರಿ ವೈದ್ಯಕೀಯ ಕಾಲೇಜುಗಳ ಆಸ್ಪತ್ರೆಗಳನ್ನೇ ಆಯ್ಕೆ ಮಾಡುವಂತೆ ಸೂಚಿಸಿ ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್ ಸುತ್ತೋಲೆ ಹೊರಡಿಸಿದ್ದಾರೆ.

ಸಾಮಾನ್ಯ ಮತ್ತು ಎಚ್‍ಡಿಯು ಬೆಡ್‍ಗಳನ್ನು ಸರಕಾರಿ ಆಸ್ಪತ್ರೆಗಳು ಮತ್ತು ಸರಕಾರಿ ವೈದ್ಯಕೀಯ ಕಾಲೇಜುಗಳಿಗೆ ಮಾತ್ರ ಸೀಮಿತಗೊಳಿಸಲಾಗುವುದು. ಸರಕಾರಿ ಆಸ್ಪತ್ರೆ ಮತ್ತು ಸರಕಾರಿ ವೈದ್ಯಕೀಯ ಕಾಲೇಜ್‍ಗಳಲ್ಲಿ ಸಾಮಾನ್ಯ ಮತ್ತು ಎಚ್‍ಡಿಯು ಹಾಸಿಗೆಗಳ ಒಟ್ಟಾರೆ ಲಭ್ಯತೆಯು ಶೇ.10ಕ್ಕಿಂತ ಕಡಿಮೆಯಾಗುವವರೆಗೆ ಇದನ್ನು ಅನುಸರಿಸಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ನಗರದ ಆಸ್ಪತ್ರೆಗಳಲ್ಲಿನ ಹಾಸಿಗೆಗಳ ಕೇಂದ್ರೀಕೃತ ನಿರ್ವಹಣೆ ವ್ಯವಸ್ಥೆ (ಸಿಎಚ್‍ಬಿಎಂಎಸ್) ಆಧಾರದಲ್ಲಿ ಕೊರೋನ ರೋಗಿಗಳನ್ನು ಚಿಕಿತ್ಸೆಗೆ ದಾಖಲಿಸುವಾಗ ಪಾಲಿಸುತ್ತಿರುವ ನಿಯಮಗಳನ್ನು ಪುನರ್ ಪರಿಶೀಲಿಸುವಂತೆ ಕೋರಿ ಎಸ್‍ಎಎಸ್‍ಟಿ ಮುಖ್ಯಸ್ಥರು ಇತ್ತೀಚೆಗೆ ಸರಕಾರದ ಮುಖ್ಯ ಕಾರ್ಯದರ್ಶಿಗೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಹಾಗೂ ಬಿಬಿಎಂಪಿ ಆಯುಕ್ತರಿಗೆ ಪತ್ರ ಬರೆದಿದ್ದರು. ಈ ಹಿನ್ನೆಯಲ್ಲಿ ಆದೇಶವನ್ನು ಪರಿಷ್ಕರಿಸಿ ನೂತನ ಆದೇಶ ಹೊರಡಿಸಲಾಗಿದೆ.

ಹೊಸ ನಿಯಮ: ಬಿಬಿಎಂಪಿ ವಲಯಗಳ ಕಮಾಂಡ್ ಮತ್ತು ನಿಯಂತ್ರಣ ಕೇಂದ್ರಗಳು ಕೊರೋನ ರೋಗಿಗಳಿಗೆ ಚಿಕಿತ್ಸೆ ನೀಡಲು ಸಿಎಚ್‍ಬಿಎಂಎಸ್‍ನಲ್ಲಿ ಸರಕಾರಿ ಆಸ್ಪತ್ರೆಗಳ ಸಾಮಾನ್ಯ ವಾರ್ಡ್‍ಗಳು ಹಾಗೂ ಎಚ್‍ಡಿ ಘಟಕಗಳ ಹಾಸಿಗೆಗಳನ್ನೇ ಆಯ್ಕೆ ಮಾಡಬೇಕು. ಸರಕಾರಿ ಆಸ್ಪತ್ರೆಗಳ ಸಾಮಾನ್ಯ ವಾರ್ಡ್‍ಗಳು ಹಾಗೂ ಎಚ್‍ಡಿ ಘಟಕಗಳ ಹಾಸಿಗೆಗಳ ಲಭ್ಯತೆ ಪ್ರಮಾಣ ಶೇ.10ಕ್ಕಿಂತ ಕಡಿಮೆಯಾಗುವವರೆಗೂ ಈ ನಿಯಮ ಪಾಲಿಸಬೇಕು. ಐಸಿಯು ಮತ್ತು ವೆಂಟಿಲೇಟರ್ ವ್ಯವಸ್ಥೆ ಇರುವ ಹಾಸಿಗೆಗಳ ಅವಶ್ಯಕತೆ ಇದ್ದರೆ ಸರಕಾರಿ ಆಸ್ಪತ್ರೆಗಳಲ್ಲಿರುವ ಈ ಸೌಲಭ್ಯವನ್ನೇ ಬಳಸಿಕೊಳ್ಳಬೇಕು. ತೀರಾ ಗಂಭೀರ ಪ್ರಕರಣಗಳಲ್ಲಿ ಮಾತ್ರ ಖಾಸಗಿ ಆಸ್ಪತ್ರೆಗಳಲ್ಲಿನ ಈ ಸೌಲಭ್ಯಗಳನ್ನು ಬಳಸಬಹುದು.

ನಗರದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಬರುವ ಅನ್ಯ ಜಿಲ್ಲೆಗಳ ರೋಗಿಗಳಿಗೆ ಹಾಸಿಗೆ ಕಾಯ್ದಿರಿಸುವಾಗಲೂ ಇದೇ ನಿಯಮ ಅನುಸರಿಸಬೇಕು. ಸರಕಾರಿ ಆಸ್ಪತ್ರೆಗಳ ಹಾಸಿಗೆ ಲಭ್ಯತೆ ಪ್ರಮಾಣ ಶೇ.90 ಮೀರಿದ ಬಳಿಕವಷ್ಟೇ ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಚಿಕಿತ್ಸೆಗೆ ಗೊತ್ತುಪಡಿಸಿದ ಹಾಸಿಗೆಗಳನ್ನು ಕಾಯ್ದಿರಿಸಬೇಕು. ಜೆಡ್‍ಸಿಸಿಸಿಗಳು ಈ ನಿಯಮಗಳಿಗೆ ಹೊರತಾಗಿ ನಿರ್ಧಾರ ಕೈಗೊಳ್ಳುವ ಅನಿವಾರ್ಯ ಎದುರಾದರೆ, ಅದಕ್ಕೆ ಬಿಬಿಎಂಪಿ ಆಯುಕ್ತರ ಪೂರ್ವಾನುಮತಿ ಪಡೆಯಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News