ಬೀದಿ ವ್ಯಾಪಾರಕ್ಕೆ ಮಕ್ಕಳ ಬಳಕೆ: ಪತ್ತೆ ಹಚ್ಚಿ ಅಗತ್ಯ ಕ್ರಮ ಜರುಗಿಸಲು ಹೈಕೋರ್ಟ್ ನಿರ್ದೇಶನ

Update: 2020-11-18 16:57 GMT

ಬೆಂಗಳೂರು, ನ.18: ನಗರದ ಪ್ರಮುಖ ರಸ್ತೆಗಳಲ್ಲಿ ಹಾಗೂ ಸಿಗ್ನಲ್‍ಗಳಲ್ಲಿ ಆಟಿಕೆ ಸಾಮಾನುಗಳು, ಹೂ ಮತ್ತಿತರೆ ವಸ್ತುಗಳನ್ನು ಮಾರಾಟ ಮಾಡಲು ಚಿಕ್ಕ ವಯಸ್ಸಿನ ಮಕ್ಕಳನ್ನು ಬಳಸಿಕೊಳ್ಳುತ್ತಿರುವುದು ಗಂಭೀರ ವಿಚಾರ ಎಂದಿರುವ ಹೈಕೋರ್ಟ್, ಈ ಸಂಬಂಧ ಸೂಕ್ತ ಕ್ರಮ ಜರುಗಿಸುವಂತೆ ಸರಕಾರ ಮತ್ತು ಬಿಬಿಎಂಪಿಗೆ ನಿರ್ದೇಶಿಸಿದೆ.

ಈ ಕುರಿತು ಲೆಟ್ಜ್ ಕಿಟ್ ಫೌಂಡೇಶನ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಕೆಲ ಕಾಲ ವಾದ ಪ್ರತಿವಾದ ಆಲಿಸಿದ ಪೀಠ, ಮಕ್ಕಳನ್ನು ರಸ್ತೆಗಳಲ್ಲಿ ವ್ಯಾಪಾರ ಮಾಡಲು ಬಳಸಿಕೊಳ್ಳುತ್ತಿರುವುದು ಅತ್ಯಂತ ಗಂಭೀರ ವಿಚಾರ ಹಾಗೂ ಸಂವಿಧಾನದ ವಿಧಿ 21 ರ ಉಲ್ಲಂಘನೆ.

ಆದ್ದರಿಂದ ಸರಕಾರ ಮತ್ತು ಬಿಬಿಎಂಪಿ ಇಂತಹ ಮಕ್ಕಳನ್ನು ಗುರುತಿಸಬೇಕು. ಎಲ್ಲಿ ಮತ್ತು ಎಷ್ಟು ಮಕ್ಕಳು ಹೀಗೆ ಬಳಕೆಯಾಗುತ್ತಿದ್ದಾರೆ ಎಂಬುದರ ನಿಖರ ಮಾಹಿತಿ ಸಂಗ್ರಹಿಸಬೇಕು. ಈ ಕಾರ್ಯಕ್ಕೆ ಎನ್ ಜಿಓ ಗಳ ನೆರವು ಪಡೆಯಬಹುದು. ಇಂತಹ ಮಕ್ಕಳನ್ನು ಗುರುತಿಸಿ ಅವರಿಗೆ ಸೂಕ್ತ ವ್ಯವಸ್ಥೆ ಮಾಡಲು ಅಗತ್ಯ ಕ್ರಮಗಳನ್ನು ಜರುಗಿಸಬೇಕು. ಸೂಕ್ತ ವ್ಯವಸ್ಥೆ ಕಲ್ಪಿಸುವ ಸಂಬಂಧ ಯೋಜನೆ ರೂಪಿಸಿ ಆ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ನಿರ್ದೇಶಿಸಿ ವಿಚಾರಣೆಯನ್ನು ನವೆಂಬರ್ 20ಕ್ಕೆ ಮುಂದೂಡಿತು.

ಅರ್ಜಿದಾರರ ಮನವಿ: ಬೆಂಗಳೂರಿನ ಪ್ರಮುಖ ಬೀದಿಗಳಲ್ಲಿ ಹಾಗೂ ರಸ್ತೆಗಳ ಸಿಗ್ನಲ್ ಗಳಲ್ಲಿ ಪೆನ್ನು, ಆಟಿಕೆ ಸಾಮಾನುಗಳು, ಹೂ ಮತ್ತಿತರೆ ವಸ್ತುಗಳನ್ನು ಮಾರಾಟ ಮಾಡಲು ಹಾಗೂ ಭಿಕ್ಷಾಟನೆಗೆ ಚಿಕ್ಕ ವಯಸ್ಸಿನ ಮಕ್ಕಳನ್ನು ಬಳಸಿಕೊಳ್ಳಲಾಗುತ್ತಿದೆ. ಅಲ್ಲದೇ, ಕೊರೋನ ಬಳಿಕ ಶಾಲೆ ಬಿಟ್ಟ ಸಾಕಷ್ಟು ಮಕ್ಕಳನ್ನು ಕಟ್ಟಡ ನಿರ್ಮಾಣ ಕಾರ್ಯಕ್ಕೆ ಕರೆದೊಯ್ಯಲಾಗುತ್ತಿದೆ. ಇದು ಬಾಲ ನ್ಯಾಯ ಕಾಯ್ದೆಯ ನಿಯಮಗಳ ಉಲ್ಲಂಘನೆ. ಅಲ್ಲದೇ, ಘನತೆಯಿಂದ ಜೀವಿಸುವ ಮತ್ತು ಕಡ್ಡಾಯ ಶಿಕ್ಷಣ ನೀಡಿರುವ ಸಂವಿಧಾನದ ವಿಧಿ 21ಕ್ಕೆ ವಿರುದ್ಧವಾದದು. ಆದ್ದರಿಂದ ಮಕ್ಕಳನ್ನು ಸಿಗ್ನಲ್ ಗಳಲ್ಲಿ ಮಾರಾಟ ಮಾಡುವ ಕೆಲಸಕ್ಕೆ ಬಳಸಿಕೊಳ್ಳದಂತೆ ಕ್ರಮ ಜರುಗಿಸಲು ಸರ್ಕಾರ ಮತ್ತು ಬಿಬಿಎಂಪಿಗೆ ನಿರ್ದೇಶಿಸಬೇಕು. ಇಂತಹ ಮಕ್ಕಳನ್ನು ಶಾಲೆಗೆ ದಾಖಲಿಸಿಕೊಳ್ಳಲು ಕ್ರಮ ಕೈಗೊಳ್ಳುವಂತೆ ಸರಕಾರ ಮತ್ತು ಶಿಕ್ಷಣ ಸಂಸ್ಥೆಗಳಿಗೆ ಆದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News