ಡಿಸೆಂಬರ್ ಅಂತ್ಯದ ವೇಳೆಗೆ ಕೊರೋನ ಲಸಿಕೆ ನಿರೀಕ್ಷೆ: ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್

Update: 2020-11-18 17:50 GMT

ಬೆಂಗಳೂರು, ನ.18: ಡಿಸೆಂಬರ್ ಅಂತ್ಯದ ವೇಳೆಗೆ ಕೊರೋನ ಲಸಿಕೆ ಬರಲಿದ್ದು, ನಗರದಲ್ಲಿರುವ 94 ಸಾವಿರ ಕೊರೋನ ವಾರಿಯರ್ಸ್‍ಗಳಿಗೆ ಮೊದಲ ಹಂತದಲ್ಲಿ ಲಸಿಕೆ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೊದಲ ಹಂತದಲ್ಲಿ ಒಟ್ಟು 94 ಸಾವಿರ ಜನರಿಗೆ ವ್ಯಾಕ್ಸಿನ್ ದೊರೆಯಲಿದೆ. ಬಿಬಿಎಂಪಿ ಆಸ್ಪತ್ರೆ ಹಾಗೂ ಸರಕಾರಿ ಆಸ್ಪತ್ರೆಗಳ 8 ಸಾವಿರ ಜನರಿಗೆ, ಡೆಂಟಲ್, ಮೆಡಿಕಲ್, ಪ್ಯಾರ ಮೆಡಿಕಲ್ ಸ್ಟಾಫ್ 74 ಸಾವಿರ ಜನರಿಗೆ, ಖಾಸಗಿ ಆಸ್ಪತ್ರೆಗಳ 4,350 ಸಿಬ್ಬಂದಿಗಳಿಗೆ, 1,800 ಅಂಗನವಾಡಿ ಸಿಬ್ಬಂದಿಗಳಿಗೆ ವ್ಯಾಕ್ಸಿನ್ ನೀಡಲು ಎಲ್ಲರ ಮಾಹಿತಿ ಕಲೆಹಾಕಲಾಗಿದೆ ಎಂದು ವಿವರಣೆ ನೀಡಿದರು.

ಮೊದಲ ಹಂತದಲ್ಲಿ ವ್ಯಾಕ್ಸಿನ್ ಪಡೆಯಲಿರುವ ಫಲಾನುಭವಿಗಳ ಸಂಪೂರ್ಣ ಮಾಹಿತಿ ಕಲೆ ಹಾಕಲಾಗುತ್ತಿದೆ. ನಾವು ನೀಡಿದ ಮಾಹಿತಿ ಅನುಸಾರ ಕೇಂದ್ರ ಸರಕಾರ ವ್ಯಾಕ್ಸಿನ್ ಬಿಡುಗಡೆ ಮಾಡಲಿದೆ. ವಾಕ್ಸಿನ್ ಸ್ಟೋರೇಜ್ ನಂತರ ಯಾವ ರೀತಿ ವ್ಯಾಕ್ಸಿನ್ ಅನ್ನು ಫಲಾನುಭವಿಗಳಿಗೆ ತಲುಪಿಸಬೇಕು ಎಂಬುದರ ಬಗ್ಗೆ ಸಹ ಚರ್ಚೆ ಮಾಡಲಾಗುತ್ತಿದೆ ಎಂದು ಹೇಳಿದರು.

ನಗರದ ದಾಸಪ್ಪ ಆಸ್ಪತ್ರೆಯಲ್ಲಿ ವ್ಯಾಕ್ಸಿನ್ ಸ್ಟೋರೇಜ್‍ಗೆ ಸಿದ್ಧತೆ ಮಾಡಲಾಗಿದೆ. ಮತ್ತಷ್ಟು ಸ್ಥಳದ ಅವಶ್ಯಕತೆಯಿದೆ ಎನ್ನಲಾಗುತ್ತಿದೆ. ಬಿಬಿಎಂಪಿ ಜೊತೆಗೆ ಆರೋಗ್ಯ ಇಲಾಖೆ, ಪಶುಸಂಗೋಪನೆ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗಳು ಒಟ್ಟಿಗೆ ಸೇರಿ ವ್ಯಾಕ್ಸಿನ್ ನೀಡುವುದಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News