ಶೀಘ್ರದಲ್ಲೇ ಸಚಿವ ಸಂಪುಟ ವಿಸ್ತರಣೆ: ಮುಖ್ಯಮಂತ್ರಿ ಯಡಿಯೂರಪ್ಪ
ಬೆಂಗಳೂರು, ನ. 19: ಸಚಿವ ಸಂಪುಟ ವಿಸ್ತರಣೆ ಮಾಡುವ ಸಂಬಂಧ ವರಿಷ್ಠರು ಒಂದೆರಡು ದಿನಗಳಲ್ಲಿ ತಮ್ಮ ನಿರ್ಧಾರ ತಿಳಿಸಲಿದ್ದು, ಆ ಬಳಿಕ ಸಂಪುಟ ವಿಸ್ತರಣೆಗೆ ಸ್ಪಷ್ಟ ಚಿತ್ರಣ ದೊರೆಯಲಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಇಂದಿಲ್ಲಿ ಸ್ಪಷ್ಟಣೆ ನೀಡಿದ್ದಾರೆ.
ಗುರುವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಿನ್ನೆ ಹೊಸದಿಲ್ಲಿಯಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡ ಅವರನ್ನು ಭೇಟಿಯಾಗಿ ಪ್ರಸಕ್ತ ರಾಜಕೀಯ ವಿದ್ಯಮಾನಗಳ ಬಗ್ಗೆ ಸಮಾಲೋಚನೆ ನಡೆಸಿದ್ದೇನೆ. ಸಂಪುಟ ವಿಸ್ತರಣೆಗೆ ಅಧ್ಯಕ್ಷರಿಂದ ಸಕಾರಾತ್ಮಕವಾದ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಸ್ಪಷ್ಟಪಡಿಸಿದರು.
ಸಚಿವ ಸಂಪುಟ ವಿಸ್ತರಣೆ ಮಾಡಬೇಕೊ ಅಥವಾ ಪುನಾರಚನೆ ಮಾಡಬೇಕೋ ಎಂಬುದು ವರಿಷ್ಠರ ತೀರ್ಮಾನದ ಮೇಲೆ ನಿಂತಿದೆ. ನಾನು ಅವರಿಗೆ ರಾಜ್ಯದಲ್ಲಿರುವ ವಸ್ತುಸ್ಥಿತಿಯನ್ನು ವಿವರಿಸಿದ್ದೇನೆ. ದಿಲ್ಲಿಯ ನಾಯಕರು ಕೈಗೊಳ್ಳುವ ನಿರ್ಧಾರದ ಮೇಲೆ ಎಲ್ಲವೂ ನಿರ್ಧಾರವಾಗಲಿದೆ ಎಂದು ಯಡಿಯೂರಪ್ಪ ತಿಳಿಸಿದರು.
ಸಚಿವರ ಪಟ್ಟಿಯನ್ನು ಎರಡು-ಮೂರು ದಿನದಲ್ಲಿ ಹೈಕಮಾಂಡ್ ಅಂತಿಮಗೊಳಿಸಿ ರವಾನಿಸಲಿದ್ದು, ಆ ಬಳಿಕ ಸಂಪುಟದ ಬಗ್ಗೆ ಕ್ರಮ ವಹಿಸಲಾಗುವುದು. ಪಕ್ಷ ಮತ್ತು ಸರಕಾರದ ಬೆಳವಣಿಗೆ ಕುರಿತಂತೆ ಮಾಹಿತಿ ನೀಡಿದ್ದೇನೆ. ಅವರಿಗೂ ರಾಜ್ಯದಲ್ಲಿನ ಬೆಳವಣಿಗೆಗಳ ಬಗ್ಗೆ ಸಂಪೂರ್ಣ ಮಾಹಿತಿ ಇದೆ. ಹೀಗಾಗಿ ಅವರು ಸೂಕ್ತ ತೀರ್ಮಾನ ಕೈಗೊಳ್ಳುವ ವಿಶ್ವಾಸವಿದೆ ಎಂದರು.