ನ.23ರಂದು ಅರಣ್ಯ ಇಲಾಖೆ ಸಿಬ್ಬಂದಿಗೆ ಮುಖ್ಯಮಂತ್ರಿ ಪದಕ ಪ್ರದಾನ
ಬೆಂಗಳೂರು, ನ.19: ಕರ್ನಾಟಕ ಅರಣ್ಯ ಇಲಾಖೆಯಲ್ಲಿ ಅರಣ್ಯ ಸಂರಕ್ಷಣೆ, ಅಕ್ರಮ ಕಡಿತಲೆ, ವನ್ಯಜೀವಿ ಸಂರಕ್ಷಣೆ, ಅರಣ್ಯ ಪ್ರದೇಶವನ್ನು ಒತ್ತುವರಿದಾರರಿಂದ ತೆರವುಗೊಳಿಸುವುದು ಇತ್ಯಾದಿ ಕೆಲಸಗಳ ಮೂಲಕ ಸಾಧನೆ ಮಾಡಿದ 25 ಅರಣ್ಯ ಇಲಾಖೆ ಅಧಿಕಾರಿ, ಸಿಬ್ಬಂದಿಗಳಿಗೆ ನ.23ರಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ಮುಖ್ಯಮಂತ್ರಿಗಳು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಸರಕಾರದ ಆದೇಶದಲ್ಲಿ ಪದಕ ನೀಡಲು ಅಧಿಕಾರಿ, ಸಿಬ್ಬಂದಿಗಳನ್ನು ಸರಕಾರಕ್ಕೆ ಶಿಫಾರಸು ಮಾಡಲು ಇಲಾಖೆಯಲ್ಲಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಅಧ್ಯಕ್ಷತೆಯಲ್ಲಿ ವೃತ್ತವಾರು ಸಮಿತಿ ಹಾಗೂ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ(ಅರಣ್ಯ ಪಡೆ ಮುಖ್ಯಸ್ಥರು) ಅವರ ಅಧ್ಯಕ್ಷತೆಯಲ್ಲಿ ರಾಜ್ಯಮಟ್ಟದ ಸಮಿತಿ ಸಭೆ ರಚಿಸಲು ಆದೇಶಿಸಲಾಗಿದೆ.
ಅದರಂತೆ ಪ್ರತಿ ಸಾಲಿನಲ್ಲಿಯೂ ವೃತ್ತಮಟ್ಟದ ಸಮಿತಿಯಿಂದ ಶಿಫಾರಸಾಗಿ ಬಂದ ಅರ್ಜಿಗಳನ್ನು ಕ್ರೋಡೀಕರಿಸಿ ರಾಜ್ಯಮಟ್ಟದ ಸಮಿತಿ ಕೂಲಂಕಷವಾಗಿ ಪರಿಶೀಲಿಸಿ ಅಂತಿಮ ಶಿಫಾರಸುಗಳುಳ್ಳ ಪ್ರಸ್ತಾವನೆಯನ್ನು ಸರಕಾರಕ್ಕೆ ಸಲ್ಲಿಸಲಾಗಿದೆ. ಅದರಂತೆ ಈಗಾಗಲೇ ಸರಕಾರದ 2017, 2018 ಹಾಗೂ 2019ರ ಆದೇಶಗಳಲ್ಲಿ ಒಟ್ಟು 75 ಅಧಿಕಾರಿ, ಸಿಬ್ಬಂದಿಗಳಿಗೆ ಮುಖ್ಯಮಂತ್ರಿಗಳ ಪದಕ ನೀಡಲು ಸೂಚಿಸಲಾಗಿದೆ.