ಮಗು ಅಪಹರಣ ಪ್ರಕರಣ ಭೇದಿಸಿದ ಪೊಲೀಸರು: ಇಬ್ಬರು ಮಹಿಳೆಯರು ಸೇರಿ ನಾಲ್ವರ ಬಂಧನ

Update: 2020-11-20 17:08 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ನ.20: ನಗರದ ವಾಣಿ ವಿಲಾಸ ಆಸ್ಪತ್ರೆಯಿಂದ ನವಜಾತ ಶಿಶು ಅಪಹರಿಸಿದ್ದ ಆರೋಪ ಸಂಬಂಧ ಇಬ್ಬರು ಮಹಿಳೆಯರು ಸೇರಿ ನಾಲ್ವರನ್ನು ವಿವಿ ಪುರಂ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಮಗು ಅಪಹರಿಸಿದ್ದ ಮಹಿಳೆ, ಇದಕ್ಕೆ ಸಹಕರಿಸಿದ ವ್ಯಕ್ತಿ ಮತ್ತು ಮಗುವನ್ನು ಪಡೆದಿದ್ದ ದಂಪತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಏನಿದು ಪ್ರಕರಣ?: ಅಬ್ದುಲ್ ರಶೀದ್ ಮತ್ತು ಆರ್ಷಿಯಾ ದಂಪತಿಗೆ ಜನಿಸಿದ ಮಗುವಿಗೆ ಅನಾರೋಗ್ಯವಾದ್ದರಿಂದ ನ.9ರಂದು ವಾಣಿ ವಿಲಾಸ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ನ.11ರಂದು ಮಗುವಿನ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದರಿಂದ ಮಗುವನ್ನು ಕರೆದೊಯ್ಯುವಂತೆ ಆಸ್ಪತ್ರೆಯ ಸಿಬ್ಬಂದಿ ಸೂಚಿಸಿದ್ದರು.

ಆದರೆ, ಇದನ್ನೇ ಬಂಡವಾಳ ಮಾಡಿಕೊಂಡ ಆರೋಪಿಗಳು, ಮಗುವನ್ನು ಪಡೆದುಕೊಂಡು ತಾಯಿ ಬಳಿ ಕರೆದೊಯ್ಯುವುದಾಗಿ ಆಸ್ಪತ್ರೆ ಸಿಬ್ಬಂದಿಗೆ ಹೇಳಿದ್ದಾರೆ. ಕೆಲ ಸಮಯದ ಬಳಿಕ ಮಗುವನ್ನು ಪಡೆಯಲು ಪೋಷಕರು ಬಂದಾಗ ಕೃತ್ಯ ಬೆಳಕಿಗೆ ಬಂದಿದೆ.

ಈ ಸಂಬಂಧ ದೂರು ದಾಖಲಿಸಿಕೊಂಡು ತನಿಖೆ ನಡೆಸಿದ ವಿವಿ ಪುರಂ ಠಾಣಾ ಪೊಲೀಸರು, ಆಸ್ಪತ್ರೆಯಲ್ಲಿನ ಸಿಸಿ ಟಿವಿ ಪರಿಶೀಲಿಸಿದಾಗ ಮಹಿಳೆಯೊಬ್ಬಳು ಮಗುವನ್ನು ಅಪಹರಿಸಿಕೊಂಡು ಹೋಗುತ್ತಿದ್ದ ದೃಶ್ಯ ಸೆರೆಯಾಗಿರುವುದು ಕಂಡುಬಂದಿದೆ.

ಈ ದೃಶ್ಯಾವಳಿ ಆಧರಿಸಿದ ಮಗು ಅಪಹರಿಸಿದ್ದ ಮಹಿಳೆಯನ್ನು ಬಂಧಿಸಿ ತೀವ್ರ ವಿಚಾರಣೆಗೆ ಒಳಪಡಿಸಿದಾಗ ಮಗುವನ್ನು 80 ಸಾವಿರ ರೂ.ಗೆ ಮಾರಾಟ ಮಾಡಿರುವುದಾಗಿ ಗೊತ್ತಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News