ಜಾತಿಗೊಂದು ಅಭಿವೃದ್ಧಿ ನಿಗಮ/ಪ್ರಾಧಿಕಾರ ಬೇಕಿತ್ತೇ?

Update: 2020-11-20 19:30 GMT

ಜಾತಿ ಒಂದು ರೀತಿ ಬಿಟ್ಟರೂ ಬಿಡೆನೆಂಬ ಮಾಯೆ. ಧರ್ಮದಲ್ಲಿ ರಾಜಕಾರಣವೋ ಅಥವಾ ರಾಜಕಾರಣದಲ್ಲಿ ಧರ್ಮವೋ ಎಂದು ತಿಳಿಯುತ್ತಿಲ್ಲ. ಚುನಾವಣೆಗಳು ಬಂತೆಂದರೆ ಹೊಸ ಪ್ರಾಧಿಕಾರಗಳಿಗೆ, ನಿಗಮಗಳಿಗೆ, ಮಠ-ಮಂದಿರಗಳಿಗೆ, ಸುವರ್ಣ ಕಾಲ ಎನ್ನಬಹುದು. ಯಾವುದೇ ಪಕ್ಷ ಇರಲಿ, ಅದರಲ್ಲೂ ಅಧಿಕಾರದಲ್ಲಿರುವ ಪಕ್ಷ ತಮ್ಮನ್ನು ಬೆಂಬಲಿಸುವ ಮಠ ಮತ್ತು ಜಾತಿ ಸಂಘಟನೆಗಳಿಗೆ ಧಾರಾಳವಾಗಿ ನೆರವು ನೀಡುತ್ತದೆ. ನಿಜ ಹೇಳಬೇಕಾದರೆ ಇಂದು ಭಾರತದಲ್ಲಿರುವ ಹೆಚ್ಚು ಕಡಿಮೆ ಎಲ್ಲಾ ಜಾತಿಗಳಿಗೂ ಮಠವಿದೆ ಮತ್ತು ಮಠಾಧೀಶರು ಇದ್ದಾರೆ. ಇಂದು ದೇಶದಲ್ಲಿ ಜಾತಿಗೊಂದು ನಿಗಮ ಅಥವಾ ಪ್ರಾಧಿಕಾರ ಹುಟ್ಟಿಕೊಂಡಿವೆ. ಸಮಸ್ಯೆಯೆಂದರೆ ಕೆಲವು ಮಠಾಧೀಶರು ಸಮಾಜ ಸೇವೆಯನ್ನು ಬಿಟ್ಟು ಉಳಿದೆಲ್ಲ ಕೆಲಸವನ್ನು ಮಾಡುತ್ತಾರೆ. ಕೆಲವು ಮಠಾಧೀಶರು ಪೂರ್ಣಕಾಲಿಕ ರಾಜಕಾರಣಿಗಳಾಗಿ ಮತ್ತು ಕೆಲವರು ರಾಜಕಾರಣಿಗಳಿಗೆ ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಾರೆ. ಮಠಾಧೀಶರ ಮಧ್ಯೆ ಭಿನ್ನಾಭಿಪ್ರಾಯಗಳು ಹೊಸದೇನಲ್ಲ.

ಬಜೆಟ್‌ನಲ್ಲಿ ಪ್ರತಿಯೊಂದು ಮಠ ಮತ್ತು ಸಂಘಟನೆಗೆ ಇಂತಿಷ್ಟು ಅನುದಾನ ಸಹ ನಿಗದಿಪಡಿಸಲಾಗಿದೆ! ಈ ಮಧ್ಯೆ ಸಾಕಷ್ಟು ಮಠಮಾನ್ಯಗಳು ಒಂದು ಸರಕಾರ ಮಾಡದಿರುವ ಅತ್ಯುತ್ತಮ ಕೆಲಸವನ್ನು ಮಾಡುತ್ತಿವೆ ಎನ್ನುವುದನ್ನು ಮರೆಯಬಾರದು. ಭಾರತದ ಸಮಾಜ ಜಾತಿಯಾಧಾರಿತ ಶ್ರೇಣೀಕೃತ ವ್ಯವಸ್ಥೆ. ಇದು ರಾಜಕಾರ ಣಿಗಳಿಗೆ ಒಂದು ರೀತಿಯ ವರ ಮತ್ತು ಶಾಪ. ಭಾರತೀಯ ಸಮಾಜದಲ್ಲಿ ಜಾತಿವ್ಯವಸ್ಥೆ ಹಾಸುಹೊಕ್ಕಾಗಿರುವುದರಿಂದ ರಾಜಕಾರಣ ಸಹ ಇಂದು ಸಂಪೂರ್ಣ ಜಾತಿಮಯವಾಗಿದೆ. ಇಲ್ಲಿ ಜಾತಿ ಹೆಸರಿನಲ್ಲಿ ಪ್ರತಿಯೊಂದೂ ನಡೆಯುತ್ತದೆ ಮತ್ತು ಜಾತಿ ಹೆಸರಿನಲ್ಲಿ ಏನು ಬೇಕಾದರೂ ಮಾಡಿ ದಕ್ಕಿಸಿಕೊಳ್ಳಬಹುದು ಎನ್ನುವ ವಾತಾವರಣ ಇದೆ. ಒಬ್ಬ ಆರೋಪಿ ರಾಜಕಾರಣಿ ಅಥವಾ ಅಧಿಕಾರಿ ಯಾವುದಾದರೂ ಒಂದು ಪ್ರಬಲವಾದ ಜಾತಿಗೆ ಸೇರಿದ್ದರೆ ಸಾಕು. ಮುಂದಿನ ಎಲ್ಲವನ್ನೂ ಆತನ ಜಾತಿ/ಮಠ ನೋಡಿಕೊಳ್ಳುತ್ತದೆ! ಆರೋಪಿ ಜಾತಿಯೆಂಬ ಟ್ರಂಪ್ ಕಾರ್ಡನ್ನು ಹಾಗೆ ಹೀಗೆ ಆಡಿಸುತ್ತಿದ್ದರೆ ಸಾಕು. ಆಡಳಿತ ಪಕ್ಷ ಮತ್ತು ವಿರೋಧ ಪಕ್ಷ ಎರಡು ಸಹ ಸಂಬಂಧಪಟ್ಟವರ ರಕ್ಷಣೆಗೆ ನಿಂತುಬಿಡುತ್ತವೆ. ನಿಗಮ ಮತ್ತು ಪ್ರಾಧಿಕಾರಗಳ ರಚನೆ ಆರಂಭವಾಗಿದ್ದು 2003ರಲ್ಲಿ.

ಕಾಯ್ದೆಯ ಮೂಲಕ ಕೇಂದ್ರ ಅಥವಾ ರಾಜ್ಯ ಸರಕಾರದಲ್ಲಿ ಎಷ್ಟು ಜನ ಮಂತ್ರಿಗಳು ಇರಬೇಕು ಎಂದು ಸಂಖ್ಯೆಗಳ ಮಿತಿಯನ್ನು ಹೇರಿದ ನಂತರ. ಮಂತ್ರಿಮಂಡಲದಲ್ಲಿ ಮಂತ್ರಿಗಿರಿ ಸಿಗದವರಿಗೆ ಪ್ರಾಧಿಕಾರಗಳ ಅಧ್ಯಕ್ಷ ಸ್ಥಾನ ನೀಡುವುದು ಎಲ್ಲಾ ಪಕ್ಷಗಳು ರೂಢಿಸಿಕೊಂಡು ಬಂದಿರುವ ವ್ಯವಸ್ಥೆಯಾಗಿದೆ. ಈಗಾಗಲೇ ರಾಜ್ಯದಲ್ಲಿ ಜಾತಿ-ಮತ-ಪಂಥ ಆಧಾರಿತ ಸುಮಾರು 20 ಅಭಿವೃದ್ಧಿ ಪ್ರಾಧಿಕಾರಗಳು ಕಾರ್ಯನಿರ್ವಹಿಸುತ್ತಿವೆ. ಕರ್ನಾಟಕದ ಮೂರು ದೊಡ್ಡ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಚುನಾವಣಾ ಯಶಸ್ಸನ್ನು ಗಳಿಸುವ ಸಲುವಾಗಿ ವಿವಿಧ ಸಮುದಾಯಗಳನ್ನು ಓಲೈಸಲು ನಿಗಮಗಳ ಮೂಲಕ ಪ್ರಯತ್ನಿಸಿವೆ. 2018-19ರಲ್ಲಿ ಅಂದಿನ ಮುಖ್ಯಮಂತ್ರಿ ಕುಮಾರಸ್ವಾಮಿ ‘ಬ್ರಾಹ್ಮಣ ಅಭಿವೃದ್ಧಿ ಮಂಡಳಿ’ (25 ಕೋಟಿ ರೂ. ವಿನಿಯೋಗದೊಂದಿಗೆ) ಮತ್ತು ‘ಆರ್ಯ ವೈಶ್ಯ ಅಭಿವೃದ್ಧಿ ಮಂಡಳಿ’ (10 ಕೋಟಿ ರೂ.) ರಚಿಸಿದ್ದರು. ಅದಕ್ಕೂ ಮೊದಲು ಕಾಂಗ್ರೆಸ್ ಸರಕಾರ ಲಿಂಗಾಯತರಿಗೆ ಧಾರ್ಮಿಕ ಅಲ್ಪಸಂಖ್ಯಾತ ಸ್ಥಾನಮಾನವನ್ನು ನೀಡಲು ಶಿಫಾರಸು ಮಾಡಿತ್ತು. ಭೋವಿ ಜನಾಂಗದ ಅನುಕೂಲಕ್ಕಾಗಿ ಸಿದ್ದರಾಮಯ್ಯ ಸರಕಾರವು ‘ಭೋವಿ ಅಭಿವೃದ್ಧಿ ನಿಗಮ’ವನ್ನು ರಚಿಸಿತ್ತು. ಮಾದಿಗ ಜನಾಂಗದ ಅಭಿವೃದ್ಧಿಗೆ ‘ಬಾಬು ಜಗಜೀವನ್ ರಾಮ್ ಅಭಿವೃದ್ಧಿ ನಿಗಮ’, ಲಂಬಾಣಿ ಜನರ ಅಭಿವೃದ್ಧಿಗೆ ‘ಕರ್ನಾಟಕ ತಾಂಡಾ ಡೆವಲಪ್‌ಮೆಂಟ್ ಕಾರ್ಪೊರೇಶನ್’ ರಚನೆ ಮಾಡಲಾಯಿತು. ಹಿಂದುಳಿದ ವರ್ಗದ ಗುಂಪುಗಳಿಗೆ ವಿಶ್ವಕರ್ಮ, ಉಪ್ಪಾರ ಮತ್ತು ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮವು ಸಹ ಆರಂಭವಾದವು. ಈ ನಿಗಮ ಮತ್ತು ಪ್ರಾಧಿಕಾರಗಳು ರಾಜಕಾರಣಿಗಳಿಗೆ ಒಂದು ರೀತಿಯ ಗಂಜಿ ಕೇಂದ್ರಗಳು ಅಥವಾ ಪುನರ್ವಸತಿ ಕೇಂದ್ರ ಎಂದರೂ ತಪ್ಪಲ್ಲ.

ಹೊಸ ನಿಗಮ ಮತ್ತು ಪ್ರಾಧಿಕಾರಗಳು ಸುಮ್ಮಸುಮ್ಮನೆ ಆಗುವುದಿಲ್ಲ. ಜಾತಿಯಾಧಾರಿತ ನಿಗಮ ಮತ್ತು ಪ್ರಾಧಿಕಾರಗಳು ಒಂದು ನಿರ್ದಿಷ್ಟ ಜಾತಿಯ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗೆ ರಚನೆಯಾದರೂ ಅದರ ಹಿಂದೆ ಸಾಕಷ್ಟು ರಾಜಕಾರಣ ಮತ್ತು ದೂರದೃಷ್ಟಿ ಕೆಲಸ ಮಾಡಿರುತ್ತದೆ. ಸಂಬಂಧಪಟ್ಟ ನಿಗಮದ ವ್ಯಾಪ್ತಿಗೆ ಬರುವ ಜಾತಿಗಳು ಮತ್ತು ಆಳುವ ಪಕ್ಷಕ್ಕೆ ಆಗುವ ಅನುಕೂಲ, ಅನನುಕೂಲ ಇವೆಲ್ಲವೂ ಸಹ ಅಲ್ಲಿ ಲೆಕ್ಕಚಾರಕ್ಕೆ ಒಳಪಟ್ಟಿರುತ್ತವೆ. ಶಿರಾ ಉಪಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ‘ಕಾಡುಗೊಲ್ಲ ಅಭಿವೃದ್ಧಿ ನಿಗಮ’ ಸ್ಥಾಪಿಸಿ ನಂತರ ಬಸವಕಲ್ಯಾಣ ಕ್ಷೇತ್ರದ ಉಪಚುನಾವಣೆಯ ಗಮನದಲ್ಲಿಟ್ಟುಕೊಂಡು ಕೇವಲ 30 ಸಾವಿರ ಮತಗಳಿಗಾಗಿ ‘ಮರಾಠಾ ಅಭಿವೃದ್ಧಿ ನಿಗಮ’ವನ್ನು ಸ್ಥಾಪಿಸಲಾಗಿದೆ. ಈ ಮಧ್ಯೆ ದಿಢೀರ್ ಎಂದು ಬೋನಸ್ ರೂಪದಲ್ಲಿ ‘ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮ’ ರಚಿಸಲಾಗಿದೆ. ಇದೇ ಸಮಯವೆಂದು ಉಳಿದ ಜಾತಿ ಮತ್ತು ಧರ್ಮದ ಮುಖಂಡರು ತಮ್ಮ ತಮ್ಮ ಜಾತಿಗೊಂದು ನಿಗಮ ಸ್ಥಾಪಿಸುವಂತೆ ಒತ್ತಾಯಿಸುತ್ತಿದ್ದಾರೆ!. ಇದೇ ಆಧಾರದ ಮೇಲೆ ಮುಂದೆ ತೆಲುಗು, ತಮಿಳು ಜನರು ನಿಗಮ ಕೇಳಿದರೂ ಆಶ್ಚರ್ಯವಿಲ್ಲ. ಇದು ಒಂದು ರೀತಿಯ ಅಡಕತ್ತರಿಯ ಸನ್ನಿವೇಶ. ಜಾತಿಗೊಂದು ನಿಗಮ/ಪ್ರಾಧಿಕಾರ ನೀಡುತ್ತಾ ಹೋದರೆ ಸುಮಾರು 4,000 ನಿಗಮ ಅಥವಾ ಪ್ರಾಧಿಕಾರಗಳನ್ನು ರಾಜ್ಯದಲ್ಲಿ ರಚಿಸಬೇಕಾಗುತ್ತದೆ! ಅಷ್ಟು ಅಧಿಕೃತ ಜಾತಿಗಳಿವೆ ನಮ್ಮಲ್ಲಿ.

ಅತಿ ಹಿಂದುಳಿದ ಜಾತಿ-ಮತ-ಧರ್ಮಗಳ ಅಭಿವೃದ್ಧಿಗೆ ನಿಗಮಗಳನ್ನು ಸ್ಥಾಪಿಸುವುದು ತಪ್ಪಲ್ಲ. ಆದರೆ ಈಗಾಗಲೇ ಸ್ಥಾಪಿತವಾಗಿರುವ ಇಂತಹ ನಿಗಮ ಮತ್ತು ಪ್ರಾಧಿಕಾರಗಳ ಕೆಲಸದಿಂದ ಸಂಬಂಧಪಟ್ಟ ಸಮುದಾಯಗಳು ಎಷ್ಟರ ಮಟ್ಟಿಗೆ ಸಮಾಜದ ಮುಖ್ಯವಾಹಿನಿಗೆ ಬಂದಿವೆ ಎನ್ನುವುದು ಪ್ರಶ್ನೆ. ಈಗಾಗಲೇ ಇಂತಹ ಅನೇಕ ನಿಗಮ ಮತ್ತು ಪ್ರಾಧಿಕಾರಗಳು ಸೂಕ್ತ ಅನುದಾನವಿಲ್ಲದೆ ಸೊರಗಿವೆ. ಇವುಗಳಿಗೆ ಅಧ್ಯಕ್ಷರಿಗೆ ಸಂಪುಟ ದರ್ಜೆ ಸ್ಥಾನಮಾನ ಮತ್ತು ಸದಸ್ಯರ ವೇತನ, ಸಾರಿಗೆ ಸೌಲಭ್ಯ, ಇತ್ಯಾದಿ ಖರ್ಚು ವೆಚ್ಚವೆಲ್ಲವೂ ಸರಕಾರಕ್ಕೆ ಒಂದು ರೀತಿಯ ಹೊರೆ. ಕಷ್ಟಪಟ್ಟು ದಿನಪೂರ್ತಿ ಬಸ್ ಓಡಿಸುವ ಸಾರಿಗೆ ನೌಕರರಿಗೆ ಇಂದು ಸಂಬಳ ಸಿಗುತ್ತಿಲ್ಲ. ಸಮಾಜ ಕಲ್ಯಾಣ ಇಲಾಖೆಯೇ ಇರುವಾಗ ಜಾತಿಗೊಂದು ನಿಗಮ ಬೇಕಾಗಿತ್ತೇ ಅನ್ನುವುದು ಇಲ್ಲಿನ ಪ್ರಶ್ನೆ. ಬಡತನವೆಂಬುದು ಜಾತಿ ಮತ ಧರ್ಮಗಳನ್ನು ಮೀರಿದ್ದು. ಇಂದು ಎಲ್ಲ ಜಾತಿಗಳಲ್ಲೂ ಬಡವರು ಮತ್ತು ಶ್ರೀಮಂತರು ಇರುವುದರಿಂದ ರಾಜಕೀಯ ಕಾರಣಗಳಿಗಾಗಿ ನಿಗಮ, ಪ್ರಾಧಿಕಾರಗಳ ರಚನೆ ಸರಿಯಲ್ಲ.

ಕೋಟ್ಯಂತರ ಅನುದಾನವನ್ನು ಪಡೆಯುವ ಇಲಾಖೆಗಳೇ ಸರಿಯಾಗಿ ಕಾರ್ಯನಿರ್ವಹಿಸದೆ ಇರುವಾಗ ಇನ್ನು ಈ ನಿಗಮಗಳ ಕಥೆಯೇನು? ಹೊಸ ನಿಗಮಗಳಿಗೆ ಬೇಕಾಗುವ ಹಣವನ್ನು ಈ ಕೊರೋನ ಸಮಸ್ಯೆ ಮಧ್ಯೆ ಎಲ್ಲಿಂದ ತರುವುದು? ಹೆಚ್ಚು ಕಡಿಮೆ ಎರಡು ಹೊಸ ಪ್ರಾಧಿಕಾರ/ನಿಗಮಗಳನ್ನು ಒಂದೇ ದಿನ ಘೋಷಣೆ ಮಾಡಿದ್ದು ಸರಕಾರದಲ್ಲಿ ಪರ ಮತ್ತು ವಿರೋಧ ಎರಡೂ ಉಂಟಾಗಿದೆ. ಆದರೆ ವಿರೋಧ ಪಕ್ಷ ಇವುಗಳನ್ನು ವಿರೋಧಿಸುವ ಸ್ಥಿತಿಯಲ್ಲಂತೂ ಇಲ್ಲ. ಎರಡು ಹೊಸ ನಿಗಮಗಳ ಬಗ್ಗೆ ಋಣಾತ್ಮಕ ಪ್ರಚಾರ ನಡೆದಷ್ಟು ಆಡಳಿತ ಪಕ್ಷಕ್ಕೆ ಲಾಭ. ಮಹಾರಾಷ್ಟ್ರ ಬೆಳಗಾವಿ ವಿಚಾರದಲ್ಲಿ ಬಹಳ ವರ್ಷಗಳಿಂದ ಕರ್ನಾಟಕ ವಿರುದ್ಧ ಹೋರಾಡುತ್ತಿರುವುದರಿಂದ ಹೊಸ ಮರಾಠಾ ಅಭಿವೃದ್ಧಿ ನಿಗಮ ಬೆಂಕಿಗೆ ಮತ್ತಷ್ಟು ತುಪ್ಪಸುರಿದಂತೆ. ಆದರೆ ಕನ್ನಡ ಪರ ಸಂಘಟನೆಗಳ ಹೋರಾಟ ಒಂದು ಚುನಾವಣಾ ವಸ್ತುವಾಗಿ ರಾಜ್ಯದಲ್ಲಿ ನಿಂತಿರುವುದಕ್ಕೆ ಇತಿಹಾಸದಲ್ಲಿ ಉದಾಹರಣೆಯಿಲ್ಲ.

ಯಾವುದೇ ಒಂದು ಸಮುದಾಯದ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿಗಳ ಬಗ್ಗೆ ಅಧ್ಯಯನವಾಗದೆ ಅಭಿವೃದ್ಧಿ ನಿಗಮಗಳನ್ನು ರಚಿಸುವುದು ಎಷ್ಟರ ಮಟ್ಟಿಗೆ ಸರಿ ಎನ್ನುವುದು ಈಗಿನ ಪ್ರಶ್ನೆ. ಈಗ ಹೊಸದಾಗಿ ರಚನೆಯಾಗಿರುವ ಮರಾಠಾ ಮತ್ತು ಲಿಂಗಾಯತ-ವೀರಶೈವ ಜನಾಂಗದ ಬಗ್ಗೆ ಇದುವರೆಗೂ ಸರಿಯಾದ ಯಾವುದೇ ಅಧ್ಯಯನಗಳು ನಡೆದಿಲ್ಲ. ಈ ಜನಾಂಗದಲ್ಲಿರುವ ನಿಜವಾದ ಬಡವರ ಸಂಖ್ಯೆ ಮತ್ತು ಅವರ ಸ್ಥಿತಿಗತಿಗಳ ಬಗ್ಗೆ ಯಾರಿಗೂ ಸರಿಯಾದ ಮಾಹಿತಿ ಇಲ್ಲ. ಧರ್ಮ ಮತ್ತು ಜಾತಿ ಆಧಾರಿತ ನಿಗಮ ಹಾಗೂ ಪ್ರಾಧಿಕಾರಗಳ ಘೋಷಣೆಯಿಂದ ಸಮಾಜದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬುದರ ಕುರಿತು ಸದ್ಯಕ್ಕೆ ಯಾರಿಗೂ ಅರಿವಿಲ್ಲ. ಕೆಲವು ವರ್ಷಗಳ ಹಿಂದೆ ಕಲಬುರಗಿಯಲ್ಲಿ ಲಿಂಗಾಯತ ಅನುಯಾಯಿಗಳು ಮತ್ತು ವೀರಶೈವ ಅನುಯಾಯಿಗಳು ಹೊಡೆದಾಡಿಕೊಂಡಿದ್ದರು. ಅಂದಿನ ಸರಕಾರ ಲಿಂಗಾಯತ ಸಮುದಾಯಕ್ಕೆ ಪ್ರತ್ಯೇಕ ಧರ್ಮದ ಶಿಫಾರಸಿಗಾಗಿ ರಾಜ್ಯ ಸಚಿವ ಸಂಪುಟ ನೀಡಿದ್ದ ಅನುಮೋದನೆಯ ವಿಜಯ ಆಚರಿಸಲು ಲಿಂಗಾಯತ ಅನುಯಾಯಿಗಳು ಬಂದಿದ್ದರು, ವೀರಶೈವ ಅನುಯಾಯಿಗಳು ಇದನ್ನು ವಿರೋಧಿಸಲು ಅಲ್ಲಿ ಸೇರಿದ್ದರು. ಆದರೆ ಇಂದು ಈ ಎರಡು ಸಮುದಾಯಗಳನ್ನು ಸೇರಿಸಿ ಒಂದು ಅಭಿವೃದ್ಧಿ ಪ್ರಾಧಿಕಾರ ರಚಿಸಲಾಗಿದೆ. ಆಶ್ಚರ್ಯವೆಂದರೆ ಇದಕ್ಕೆ ಈ ಎರಡೂ ಸಮುದಾಯಗಳ ವಿರೋಧವಿಲ್ಲ!. ಇಡೀ ದೇಶದಲ್ಲಿ ಪ್ರತಿಯೊಂದು ಮಠ ಮತ್ತು ಜಾತಿಯು ಒಂದೊಂದು ರಾಜಕೀಯ ಪಕ್ಷಕ್ಕೆ ಬೆನ್ನೆಲುಬಾಗಿ ನಿಂತಿರುವುದು ಸತ್ಯ. ಅಮೆರಿಕದ ಮಾಜಿ ಅಧ್ಯಕ್ಷ ಒಬಾಮಾ ಕೂಡಾ ತಮ್ಮ ಇತ್ತೀಚಿನ ಪುಸ್ತಕದಲ್ಲಿ ಭಾರತದ ಬಗ್ಗೆ ಇದನ್ನೇ ಬರೆದಿದ್ದಾರೆ. ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ ಮಠಗಳು ಮತ್ತು ಜಾತಿಗಳು ಒಂದು ಸರಕಾರದ ರಿಮೋಟ್ ಕಂಟ್ರೋಲ್ ಆಗಿ ಕಾರ್ಯನಿರ್ವಹಿಸುತ್ತವೆ. ಸರಕಾರ ಹೇಗೆ ನಡೆಯಬೇಕು, ಹೇಗಿರಬಾರದು ಎನ್ನುವುದನ್ನು ಸಹ ಅವೇ ನಿರ್ಧರಿಸುತ್ತವೆ. ಸರಕಾರದಲ್ಲಿ ಹಸ್ತಕ್ಷೇಪ ಮಾಡಿ ತಮಗೆ ಬೇಕಾದ ಹಾಗೆ ನೀತಿ ನಿರೂಪಣೆಗಳನ್ನು ಮಾಡಿಕೊಳ್ಳುತ್ತವೆ. ಈ ರೀತಿಯ ಬೆಳವಣಿಗೆಯಿಂದ ಸಣ್ಣಪುಟ್ಟ ಸೂಕ್ಷ್ಮಾತಿಸೂಕ್ಷ್ಮ ಜಾತಿಗಳು ಮತ್ತು ಅಲ್ಪಸಂಖ್ಯಾತರು ಎಲ್ಲಾ ರೀತಿಯ ಸಾಂವಿಧಾನಿಕ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ.

Writer - ಡಾ. ಡಿ. ಸಿ. ನಂಜುಂಡ

contributor

Editor - ಡಾ. ಡಿ. ಸಿ. ನಂಜುಂಡ

contributor

Similar News