ಬಲವಂತದ ಬಂದ್‍ಗೆ ಅವಕಾಶ ನೀಡುವುದಿಲ್ಲ: ಮುಖ್ಯಮಂತ್ರಿ ಯಡಿಯೂರಪ್ಪ ಎಚ್ಚರಿಕೆ

Update: 2020-11-21 11:35 GMT

ಬೆಂಗಳೂರು, ನ. 21: 'ಮರಾಠಾ ಅಭಿವೃದ್ಧಿ ನಿಗಮ' ವಿರೋಧಿಸಿ ನಡೆಸುವ ಶಾಂತಿಯುತ ಪ್ರತಿಭಟನೆಗೆ ನಮ್ಮ ಆಕ್ಷೇಪವಿಲ್ಲ. ಆದರೆ, ಚಳವಳಿ ನೆಪದಲ್ಲಿ ಅನವಶ್ಯಕ ಬಂದ್ ಮಾಡಿದರೆ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಇಂದಿಲ್ಲಿ ಕನ್ನಡಪರ ಸಂಘಟನೆಗಳಿಗೆ ಎಚ್ಚರಿಕೆ ನೀಡಿದ್ದಾರೆ.

ಶನಿವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮರಾಠಾ ಅಭಿವೃದ್ಧಿ ನಿಗಮ ರಚನೆ ವಿರೋಧಿಸಿ ಕನ್ನಡ ಪರ ಸಂಘಟನೆಗಳ ಪ್ರತಿಭಟನೆಗೆ ಸರಕಾರದ ವಿರೋಧವಿಲ್ಲ. ಶಾಂತಿಯುತ ಪ್ರತಿಭಟನೆ ನಡೆಸಲಿದೆ. ಆದರೆ, ಅನಗತ್ಯ ಬಂದ್ ಮಾಡಿದರೆ ಸರಕಾರ ಸಹಿಸುವುದಿಲ್ಲ ಎಂದು ತಿಳಿಸಿದರು.

ಕನ್ನಡಪರ ಸಂಘಟನೆಗಳ ಪ್ರತಿಭಟನೆಯನ್ನು ನಾನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ. ಪ್ರತಿಕೃತಿ ದಹನ, ಬಂದ್ ಕರೆ ನೀಡುವುದು ಸರಿಯಲ್ಲ. ಶಾಂತಿಯುತವಾಗಿ ಪ್ರತಿಭಟನೆ ನಡೆಸಲು ಅವಕಾಶವಿದೆ. ಆದರೆ, ಕೆಲವರು ಪ್ರತಿಭಟನೆ ನೆಪದಲ್ಲಿ ಕಾನೂನು ಮೀರಿ ವರ್ತಿಸಿದರೆ ಸರಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿದೆ ಎಂದು ಯಡಿಯೂರಪ್ಪ ಎಚ್ಚರಿಕೆ ನೀಡಿದರು.

ಅನಗತ್ಯವಾಗಿ ಬಂದ್ ಕರೆ ನೀಡುವುದು ಸರಿಯಲ್ಲ. ಇದಕ್ಕೆ ರಾಜ್ಯದ ಜನತೆ ಬೆಂಬಲ ನೀಡುವುದಿಲ್ಲ. ಬಲವಂತದ ಬಂದ್ ಮಾಡಲು ಸರಕಾರ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಎಂದ ಎಚ್ಚರಿಸಿದ ಯಡಿಯೂರಪ್ಪ, ಕನ್ನಡಪರ ಸಂಘಟನೆಗಳು ಪ್ರತಿಭಟನೆಗೆ ಬೇರೆ ಸ್ವರೂಪ ಕೊಡುವುದು ಬೇಡ ಎಂದ ಕೋರಿದರು.

ನಾನು ಕನ್ನಡಿಗರ, ಕನ್ನಡದ ಪರವಾಗಿ ಇರುವವನು. ಕನ್ನಡಿಗರಿಗೆ ಏನೇನು ಸೌಲಭ್ಯಗಳ ಅಗತ್ಯವಿದೆಯೋ ಅವುಗಳನ್ನು ನೀಡಲು ಸಿದ್ಧನಿದ್ದೇನೆ. ಆದರೆ, ಬೇರೊಂದು ಕಾರಣವನ್ನು ಮುಂದಿಟ್ಟುಕೊಂಡು ಬಂದ್ ಕರೆ ನೀಡುವುದನ್ನು ಜನತೆ ಮೆಚ್ಚುವುದಿಲ್ಲ. ನಾವು ಎಲ್ಲ ವರ್ಗದ ಜನರಿಗೆ ನ್ಯಾಯ ಒದಗಿಸಲು ಸರಕಾರ ಪ್ರಾಮಾಣಿಕ ಕೆಲಸ ಮಾಡುತ್ತಿದೆ. ಇದರಲ್ಲಿ ನಾವು ಯಾವುದೇ ಭೇದ-ಭಾವವನ್ನು ಮಾಡುವುದಿಲ್ಲ ಎಂದು ಹೇಳಿದರು.

ಕನ್ನಡಪರ ಸಂಘಟನೆಗಳ ಮುಖಂಡರು ಡಿ.5ಕ್ಕೆ ಕರೆ ನೀಡಿರುವ ಬಂದ್ ಹಿಂಪಡೆಯಬೇಕು. ಚಳವಳಿಗಾರರು ಸರಕಾರಕ್ಕೆ ಸಹಕಾರ ನೀಡಬೇಕು ಎಂದು ಅವರಲ್ಲಿ ಪ್ರಾರ್ಥಿಸುತ್ತೇನೆ ಎಂದ ಅವರು, ಮರಾಠಾ ಅಭಿವೃದ್ಧಿ ನಿಗಮ ರಚನೆ ನಿರ್ಧಾರದಿಂದ ಸರಕಾರ ಯಾವುದೇ ಕಾರಣಕ್ಕೂ ಹಿಂದೆ ಸರಿಯುವುದಿಲ್ಲ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News