ಡಿಎಂಕೆಯ ಹಿರಿಯ ನಾಯಕ ಕೆಪಿ ರಾಮಲಿಂಗಂ ಬಿಜೆಪಿಗೆ ಸೇರ್ಪಡೆ

Update: 2020-11-21 11:58 GMT
ಫೋಟೊ:ಎಎನ್‌ಐ

ಚೆನ್ನೈ: ಈ ವರ್ಷದ ಮಾರ್ಚ್‌ನಲ್ಲಿ ಡಿಎಂಕೆ ಪಕ್ಷದಿಂದ ಅಮಾನತುಗೊಂಡಿದ್ದ ಮಾಜಿ ಸಂಸದ ಕೆಪಿ ರಾಮಲಿಂಗಂ ಶನಿವಾರ ಬಿಜೆಪಿಗೆ ಸೇರ್ಪಡೆಯಾದರು. ಮಾಜಿ ಮುಖ್ಯಮಂತ್ರಿ ಕರುಣಾನಿಧಿ ಪುತ್ರ ಎಂಕೆ ಅಳಗಿರಿಗೆ ಆಪ್ತರಾಗಿರುವ ರಾಮಲಿಂಗಂ ಅವರು ಅಳಗಿರಿಯನ್ನು ಬಿಜೆಪಿಗೆ ಕರೆತರುವ ಪ್ರಯತ್ನ ನಡೆಸುವುದಾಗಿ ಹೇಳಿದ್ದಾರೆ.

ರಾಮಲಿಂಗಂ ಅವರು ತಮಿಳುನಾಡಿನ ಬಿಜೆಪಿಯ ಉಸ್ತುವಾರಿ ಸಿಟಿ ರವಿ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ಎಲ್.ಮುರುಗನ್ ಸಮ್ಮುಖದಲ್ಲಿ ಪಕ್ಷ ಸೇರಿದರು. ರಾಮಲಿಂಗಂ ಬಿಜೆಪಿ ಸೇರುವ ಕಾರ್ಯಕ್ರಮದಲಿ ಪೊನ್ ರಾಮಕೃಷ್ಣನ್ ಹಾಗೂ ಎಚ್.ರಾಜಾ ಕೂಡ ಇದ್ದರು.

ಮಾರ್ಚ್ ತಿಂಗಳಲ್ಲಿ ರಾಮಲಿಂಗಂರನ್ನು ಶಿಸ್ತುಕ್ರಮದ ಭಾಗವಾಗಿ ಡಿಎಂಕೆ ಮುಖ್ಯಸ್ಥ ಎಂಕೆ ಸ್ಟಾಲಿನ್ ಅಮಾನತುಗೊಳಿಸಿದ್ದರು. ಕೊರೋನ ವೈರಸ್ ವಿಚಾರಕ್ಕೆ ಸಂಬಂಧಿಸಿ ಸ್ಟಾಲಿನ್ ಇಟ್ಟ ಪ್ರಸ್ತಾವದ ವಿರುದ್ಧ ಮಾತನಾಡಿದ್ದಕ್ಕೆ ಈ ಕ್ರಮ ಕೈಗೊಳ್ಳಲಾಗಿತ್ತು.

  ಕಳೆದ 30 ವರ್ಷಗಳಿಂದ ಡಿಎಂಕೆಯಲ್ಲಿದ್ದ ರಾಮಲಿಂಗಂ 1996ರಲ್ಲಿ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿದ್ದರು. 2010ರಲ್ಲಿ ಡಿಎಂಕೆ ಮೂಲಕ ರಾಜ್ಯಸಭೆ ಪ್ರವೇಶಿಸಿದ್ದರು. ಡಿಎಂಕೆಗೆ ಬರುವ ಮೊದಲು 1980 ಹಾಗೂ 84ರ ನಡುವೆ ಎಐಎಡಿಎಂಕೆ ಶಾಸಕನಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News