ಟಿಪ್ಪು ಸುಲ್ತಾನ್ ಎಂದು ಸೋಶಿಯಲ್ ಮೀಡಿಯಾದಲ್ಲಿ ಕೇಸರಿ ಟ್ರೋಲ್ ಗಳು ಪೋಸ್ಟ್ ಮಾಡಿರುವ ಫೋಟೋ ಅಸಲಿಗೆ ಯಾರದ್ದು?

Update: 2020-11-21 10:42 GMT

ಹೊಸದಿಲ್ಲಿ: ಟಿಪ್ಪು ಸುಲ್ತಾನ್ ಅವರ ಚಿತ್ರವೆಂದು ಸಾಮಾಜಿಕ ಜಾಲತಾಣಗಳಲ್ಲಿ ಕೆಲ ಬಿಜೆಪಿ ನಾಯಕರ ಸಹಿತ ಕೇಸರಿ ಟ್ರೋಲ್ ಗಳು ಕೆಲ ವರ್ಷಗಳಿಂದ ಒಂದು ಫೋಟೋ ಪೋಸ್ಟ್ ಮಾಡುತ್ತಿದ್ದಾರೆ. ಕಳೆದ ವರ್ಷ ಕೂಡ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಕಚೇರಿಯ ಅಧಿಕೃತ ಟ್ವಿಟರ್ ಹ್ಯಾಂಡಲ್ ಫಾಲೋ ಮಾಡುವ ಮಾಧವ್ ಎಂಬಾತ ಈ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ. ಈ ತಿಂಗಳು ಕೂಡ ಅದೇ ಚಿತ್ರ ಮತ್ತೆ ಸಾಮಾಜಿಕ ಜಾಳತಾಣದಲ್ಲಿ ಕಾಣಿಸಿಕೊಂಡಿದೆಯಲ್ಲದೆ ಅದನ್ನು ಪೋಸ್ಟ್ ಮಾಡಿದವರು 'ನಿಜ ಟಿಪ್ಪು ಸುಲ್ತಾನ ಹುಲಿಯಂತೆ ಕಾಣುತ್ತಿಲ್ಲ,' ಎಂದು ವ್ಯಂಗ್ಯವಾಡಿದ್ದರು.

ಈ ನಿರ್ದಿಷ್ಟ ಚಿತ್ರ ಟಿಪ್ಪು ಸುಲ್ತಾನರದ್ದೇ ಅಥವಾ ಅಲ್ಲವೇ ಎಂದು ತಿಳಿಯಲು ಹಲವಾರು ಮಾಧ್ಯಮ ಸಂಸ್ಥೆಗಳು ಪ್ರಯತ್ನಿಸಿದ್ದವು ಹಾಗೂ ಅವುಗಳಲ್ಲಿ ಕೆಲವು ಈ ಚಿತ್ರ ಟಿಪ್ಪು ಸುಲ್ತಾನರದ್ದಲ್ಲ, ಇದು ಟಿಪ್ಪು ಟಿಪ್ ಅಥವಾ ಟಿಪ್ಪು ಟಿಬ್ ಎಂಬ 19ನೇ ಶತಮಾನದ ತಾಂಜಾನಿಯಾದ ಗುಲಾಮರ ವ್ಯಾಪಾರಿ ಎಂದು ಹೇಳಿದ್ದವು. ಈ ವ್ಯಕ್ತಿಯ ಮೊದಲ ಫೋಟೋವನ್ನು 1826 ಅಥವಾ 1827ರಲ್ಲಿ ಕ್ಲಿಕ್ಕಿಸಿರುವ ಸಾಧ್ಯತೆಯಿದೆ. ಆದರೆ 1799ರಲ್ಲಿ ಸಾವನ್ನಪ್ಪಿದ್ದ ಟಿಪ್ಪು ಸುಲ್ತಾನರ ಚಿತ್ರ ಇದಲ್ಲ.

ಇದೇ ಚಿತ್ರ 'ಗೆಟ್ಟಿ ಇಮೇಜಸ್‍'ನಲ್ಲೂ ಇದ್ದು ಅದರಲ್ಲಿ ಆತನ ಹೆಸರು ಟಿಪ್ಪು ಟಿಬ್ ಹಾಗೂ ಆತ ಹಮೀದ್ ಬಿನ್ ಮೊಹಮ್ಮದ್ ಎಂದೂ ಕರೆಯಲ್ಪಡುತ್ತಾನೆ ಹಾಗೂ ಝನ್ಝಿಬರ್ ನ ಅತ್ಯಂತ ಯಶಸ್ವಿ ಸ್ವಾಹಿಲಿ-ಅರಬ್ ಗುಲಾಮರ ವ್ಯಾಪಾರಿ ಎಂದು ಬಣ್ಣಿಸಲಾಗಿದೆ. ಈ ಫೋಟೋವನ್ನು ಬೋಜನ್ ಬ್ರೆಕೆಲ್ಜ್ ಎಂಬಾತ ಕ್ಲಿಕ್ಕಿಸಿದ್ದ. ಗೆಟ್ಟಿ ಇಮೇಜಸ್‍ನಲ್ಲಿ ಟಿಪ್ಪು ಹೆಸರಿನ ಇನ್ನೊಬ್ಬ ವ್ಯಕ್ತಿಯ ಚಿತ್ರವಿದ್ದರೂ ಈ ಚಿತ್ರಕ್ಕೂ ಮೊದಲಿನ ಚಿತ್ರಕ್ಕೂ ಬಹಳಷ್ಟು ವ್ಯತ್ಯಾಸಗಳಿವೆ.

ಟಿಪ್ಪು ಸುಲ್ತಾನ ಎಂದು ಹೇಳಿಕೊಂಡು ಹಲವರು ಪೋಸ್ಟ್ ಮಾಡಿದ್ದ ಚಿತ್ರದ ಕುರಿತು 'The Quint' ಈ ಹಿಂದೆ ಪೋಸ್ಟ್ ಮಾಡಿದ್ದ ಸತ್ಯಶೋಧನಾ ವರದಿಗೆ ಪ್ರತಿಕ್ರಿಯೆಯಾಗ ಬಂದ ಟ್ವೀಟ್  ಒಂದರಲ್ಲಿ ಆ ಚಿತ್ರದಲ್ಲಿರುವವ ಟಿಪ್ಪು ಟಿಪ್ ಅಲ್ಲ ರುಮಾಲಿಝಾ ಎಂದು ಕರೆಯಲ್ಪಡುವ ಮೊಹಮ್ಮದ್ ಬಿನ್ ಖಲ್ಫಾನ್ ಎಬಾತನಾಗಿದ್ದು ಈತ 19ನೇ ಶತಮಾನದ ಝೆನ್ಝಿಬರ್ ಎಂಬಲ್ಲಿನ ಕ್ಯಾತ ಗುಲಾಮರ ವ್ಯಾಪಾರಿ ಎಂದು ಬರೆಯಲಾಗಿತ್ತು.

ಆನ್‍ಲೈನ್‍ನಲ್ಲಿ ರುಮಾಲಿಝಾ ಎಂಬಾತನ ಹಲವು ಚಿತ್ರಗಳು altnews.inಗೆ ದೊರಕಿವೆ. ಈ ಚಿತ್ರಕ್ಕೂ ಟಿಪ್ಪು ಟಿಪ್ ಎಂದು ಕರೆಯಲ್ಪಡುವ ವ್ಯಕ್ತಿಗೂ ಸಾಮ್ಯತೆ ಇರುವುದು ತಿಳಿದು ಬಂತು. ಎರಡೂ ಚಿತ್ರಗಳಲ್ಲಿರುವಾತನ ಮುಖಚಹರೆ ಒಂದೇ ರೀತಿ, ಧರಿಸಿದ ಬಟ್ಟೆಯೂ ಒಂದೇ ವಿನ್ಯಾಸದ್ದು ಹಾಗೂ ನಿಲುವಂಗಿಯಲ್ಲಿ ಸಿಲುಕಿಸಲಾದ ಕತ್ತಿಯೂ ಒಂದೇ ಆಗಿದೆ.

ಆದುದರಿಂದ ಟಿಪ್ಪು ಸುಲ್ತಾನರ ಚಿತ್ರ ಎಂದು ಅಂತರ್ಜಾಲದಲ್ಲಿ ಹಲವರು ಪೋಸ್ಟ್ ಮಾಡಿರುವ ಚಿತ್ರ ವಾಸ್ತವವಾಗಿ ಟಿಪ್ಪು ಸುಲ್ತಾನರದಲ್ಲ ಹಾಗೂ ಟಿಪ್ಪು ಟಿಪ್ ಎಂಬ ವ್ಯಕ್ತಿಯದ್ದೂ ಅಲ್ಲ, ಬದಲಾಗಿ ಅದು ತಾಂಜಾನಿಯಾದ ಝನ್ಝಿಬರ್ ಎಂಬಲ್ಲಿನ ಗುಲಾಮರ ವ್ಯಾಪಾರಿ ರುಮಾಲಿಝಾನ ಚಿತ್ರಕ್ಕೆ ಬಹಳಷ್ಟು ಹೋಲಿಕೆಯಾಗುತ್ತದೆ.

ಕೃಪೆ: altnews.in

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News