ದಾಖಲೆಗಳಿಲ್ಲದ ಮೂರು ಕೋಟಿ ರೂ. ಮೌಲ್ಯದ ಚಿನ್ನಾಭರಣ ವಶ: ಇಬ್ಬರ ಬಂಧನ

Update: 2020-11-21 11:37 GMT

ಬೆಂಗಳೂರು, ನ.21: ಸೂಕ್ತ ದಾಖಲೆಗಳಿಲ್ಲದೆ ದ್ವಿಚಕ್ರ ವಾಹನದಲ್ಲಿ ಸಾಗಿಸುತ್ತಿದ್ದ ಸುಮಾರು 3 ಕೋಟಿ ರೂ. ಮೌಲ್ಯದ 6 ಕೆಜಿ ತೂಕದ ಚಿನ್ನಾಭರಣಗಳನ್ನು ಸಿಟಿ ಮಾರ್ಕೆಟ್ ಠಾಣೆ ಪೊಲೀಸರು ವಶಪಡಿಸಿಕೊಂಡು ಇಬ್ಬರನ್ನು ಬಂಧಿಸಿದ್ದಾರೆ.

ಮುಂಬೈ ಮೂಲದ ದಲಪತ್ ಸಿಂಗ್(34) ಮತ್ತು ರಾಜಸ್ತಾನ ಮೂಲದ ವಿಕಾಸ್(35) ಬಂಧಿತ ಆರೋಪಿಗಳು. ಬಂಧಿತರು ಶುಕ್ರವಾರ ತಡರಾತ್ರಿ ಸಿಟಿ ಮಾರ್ಕೆಟ್ ಪೊಲೀಸ್ ಠಾಣೆ ವ್ಯಾಪ್ತಿಯ ದೊಡ್ಡಪೇಟೆ ಸರ್ಕಲ್ ಬಳಿ ದ್ವಿಚಕ್ರ ವಾಹನದಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿರುವಾಗ ಪೊಲೀಸರು ವಿಚಾರಿಸಿ, ನಂತರ ಠಾಣೆಗೆ ಕರೆತಂದಿದ್ದಾರೆ.

ನಂತರ ಸಿಟಿ ಮಾರ್ಕೆಟ್ ಠಾಣೆ ಇನ್‍ಸ್ಪೆಕ್ಟರ್ ಕುಮಾರಸ್ವಾಮಿ ಅವರು ಎರಡು ಬ್ಯಾಗ್‍ಗಳಲ್ಲಿದ್ದ 65 ನೆಕ್ಲೇಸ್, 7 ಸೆಟ್ ಬಳೆಗಳು, 150 ಗ್ರಾಂ ತೂಕದ 6 ಜತೆ ಕಿವಿ ಓಲೆಗಳನ್ನು ಪರಿಶೀಲಿಸಿ ಆಭರಣಗಳ ಬಗ್ಗೆ ವಿಚಾರಿಸಿದಾಗ ಅಂಗಡಿಯಿಂದ ಮನೆಗೆ ತೆಗೆದುಕೊಂಡು ಹೋಗುತ್ತಿರುವುದಾಗಿ ತಿಳಿಸಿದ್ದಾರೆ. ಆದರೆ, ಈ ಬಗ್ಗೆ ಅವರ ಬಳಿ ಯಾವುದೇ ದಾಖಲೆಗಳು ಇಲ್ಲದ್ದನ್ನು ಗಮನಿಸಿ, ಇಬ್ಬರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.

ಈ ಕುರಿತು ಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News