ಬೆಂಗಳೂರಿನಲ್ಲಿ ಶೀಘ್ರದಲ್ಲೆ ‘ಮೀನು ಕ್ವಾರಂಟೈನ್ ಘಟಕ’ ಆರಂಭ: ಸಿಎಂ ಯಡಿಯೂರಪ್ಪ

Update: 2020-11-21 12:32 GMT

ಬೆಂಗಳೂರು, ನ. 21: ಮೀನುಗಾರಿಕೆ ಕ್ಷೇತ್ರದಲ್ಲಿ ರಫ್ತು ವಹಿವಾಟು ಉತ್ತೇಜಿಸುವ ಉದ್ದೇಶದಿಂದ ಶೀಘ್ರದಲ್ಲೆ ಬೆಂಗಳೂರು ಹೊರ ವಲಯದ ಹೆಸರಘಟ್ಟದಲ್ಲಿನ ಮೀನುಮರಿ ಉತ್ಪಾದನಾ ಕೇಂದ್ರದಲ್ಲಿ 1 ಕೋಟಿ ರೂ.ವೆಚ್ಚದಲ್ಲಿ ಸುಸಜ್ಜಿತ ಆಲಂಕಾರಿಕ ವಿದೇಶಿ ಮೀನು ಕ್ವಾರಂಟೈನ್ ಕೇಂದ್ರವನ್ನು ಆರಂಭಿಸಲಾಗುವುದು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಇಂದಿಲ್ಲಿ ಪ್ರಕಟಿಸಿದ್ದಾರೆ.

ಶನಿವಾರ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ಮೀನುಗಾರಿಕೆ ಇಲಾಖೆ ವತಿಯಿಂದ ಏರ್ಪಡಿಸಿದ್ದ ಮತ್ಸ್ಯ ಸಂಪದ ಯೋಜನೆ ಉದ್ಘಾಟನೆ ಹಾಗೂ ಮತ್ಸ್ಯ ಸಿರಿ ಖಾದ್ಯಗಳ ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ರಾಜ್ಯದಲ್ಲಿ ಆಲಂಕಾರಿಕ ಮೀನು ಉತ್ಪಾದನೆ ಹಾಗೂ ಮಾರಾಟ ಚಟುವಟಿಕೆಯು ಇತ್ತೀಚೆಗೆ ಪ್ರವರ್ಧಮಾನಕ್ಕೆ ಬರುತ್ತಿದೆ. ಆ ಹಿನ್ನೆಲೆಯಲ್ಲಿ ವಿದೇಶಿ ಮೀನು ಮರಿಗಳನ್ನು ಆಮದು ಮಾಡಿಕೊಂಡು ಅವುಗಳನ್ನು ಪ್ರತ್ಯೇಕವಾಗಿಟ್ಟು ರೋಗ ನಿರೋಧಕವೆಂದು ಖಚಿತಪಡಿಸಿಕೊಂಡ ನಂತರ ಸಾಕಾಣಿಕೆ ಮಾಡಲಾಗುವುದು. ತಮಿಳುನಾಡಿನ ಚೆನ್ನೈನಲ್ಲಿ ಮಾತ್ರ ಇಂತಹ ಕ್ವಾರಂಟೈನ್ ಘಟಕವಿದ್ದು, ಇದೀಗ ರಾಜ್ಯದಲ್ಲಿಯೂ ಆರಂಭಿಸಲಾಗುತ್ತಿದೆ ಎಂದು ಹೇಳಿದರು.

ಮೀನುಗಾರರ ಸುರಕ್ಷತೆಗೆ ಆದ್ಯತೆ: ಅತ್ಯಾಧುನಿಕ ತಂತ್ರಜ್ಞಾನ ಅಳವಡಿಕೆಯ ಮೂಲಕ ಮೀನುಗಾರರ ಸುರಕ್ಷತೆ ಹಾಗೂ ಮೀನುಗಾರರ ಆದಾಯ ಹೆಚ್ಚಳ ಮಾಡುವುದು ನಮ್ಮ ಸರಕಾರದ ಆದ್ಯತೆಯಾಗಿದೆ ಎಂದ ಅವರು, ಕರ್ನಾಟಕ ರಾಜ್ಯವು 320 ಕಿ.ಮೀ. ಉದ್ದದ ಕರಾವಳಿ ತೀರ ಹಾಗೂ 8 ಸಾವಿರ ಹೆಕ್ಟೇರ್ ಗಳಿಗೂ ಅಧಿಕ ಹಿನ್ನೀರು ಪ್ರದೇಶದೊಂದಿಗೆ ದೇಶದ ಮೀನುಗಾರಿಕಾ ವಲಯಕ್ಕೆ ಗಣನೀಯ ಕೊಡುಗೆ ನೀಡುತ್ತಿದೆ ಎಂದು ತಿಳಿಸಿದರು.

ವಿಶ್ವ ಮೀನುಗಾರಿಕೆ ದಿನಾಚರಣೆಯ ಈ ಸಂದರ್ಭದಲ್ಲಿ ಪ್ರಧಾನಮಂತ್ರಿಗಳ ಮತ್ಸ್ಯ ಸಂಪದ ಯೋಜನೆಯ ಅನುಷ್ಠಾನದ ಮೂಲಕ ಈ ದಿನಾಚರಣೆಯನ್ನು ಮತ್ತಷ್ಟು ಅರ್ಥಪೂರ್ಣವಾಗಿಸಿದೆ ಎಂದ ಅವರು, ಪ್ರಪಂಚದಾದ್ಯಂತ ಈ ದಿನಾಚರಣೆಯನ್ನು ರ‍್ಯಾಲಿಗಳು, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಆಚರಿಸುತ್ತಿದ್ದು ನಮ್ಮ ರಾಜ್ಯವು ಇದನ್ನು ಈ ಕಾರ್ಯಾಗಾರದ ಮುಖಾಂತರ ಅತ್ಯಂತ ವಿಶಿಷ್ಟವಾಗಿ ಆಚರಿಸುತ್ತಿದೆ ಎಂದರು.

ಇತ್ತೀಚಿನ ತಂತ್ರಜ್ಞಾನಗಳನ್ನು ಮೀನುಗಾರಿಕಾ ಕ್ಷೇತ್ರದ ಪಾಲುದಾರರಿಗೆ ಹಾಗೂ ಅಧಿಕಾರಿಗಳಿಗೆ ತಿಳಿಸಿಕೊಡುವುದರ ಜೊತೆಗೆ ಮೀನುಗಾರಿಕೆ ಕ್ಷೇತ್ರದ ಔದ್ಯಮಿಕ ಅವಕಾಶಗಳನ್ನು ಪರಿಚಯಿಸಿಕೊಡಲು ಈ ಕಾರ್ಯಾಗಾರವನ್ನು ಆಯೋಜಿಸುತ್ತಿರುವುದು ನನಗೆ ಸಂತಸವನ್ನುಂಟು ಮಾಡಿದೆ ಎಂದ ಅವರು, ಕರಾವಳಿ ಯಾಂತ್ರೀಕೃತ ಮೀನುಗಾರಿಕೆ ಪ್ರೋತ್ಸಾಹಕ್ಕಾಗಿ ಪ್ರತಿವರ್ಷವು 135ಕೋಟಿ ರೂ.ಗಳನ್ನು ಮೀನುಗಾರಿಕೆ ದೋಣಿಗಳು ಬಳಸುವ ಡೀಸೆಲ್‍ಗೆ ಸಹಾಯಧನವನ್ನಾಗಿ ನೀಡಲಾಗುತ್ತಿದೆ ಎಂದು ಹೇಳಿದರು.

ಪ್ರಧಾನಮಂತ್ರಿಗಳ ‘ಮತ್ಸ್ಯ ಸಂಪದ ಯೋಜನೆ’ಯಡಿ ಪ್ರಸ್ತುತ ರಾಜ್ಯದ 137 ಕೋಟಿ ರೂ.ಗಳ ಕ್ರಿಯಾ ಯೋಜನೆ ಅನುಮೋದನೆಯಾಗಿದೆ. ಕೇಂದ್ರದ ಪಾಲಿನ ಮೊದಲನೇ ಕಂತಿನ ಅನುದಾನ 21 ಕೋಟಿ ರೂ. ಬಿಡುಗಡೆಯಾಗಿದ್ದು, ರಾಜ್ಯದಲ್ಲಿ ಮೀನುಗಾರಿಕಾ ಕ್ಷೇತ್ರದ ಅಭಿವೃದ್ದಿ ಸರಕಾರ ವಿಶೇಷ ಆಸ್ಥೆ ವಹಿಸಿದೆ ಎಂದು ತಿಳಿಸಿದರು.

ಪರಿಹಾರದ ಚೆಕ್ ವಿತರಣೆ: ಇದೇ ಸಂದರ್ಭದಲ್ಲಿ ನಾಪತ್ತೆಯಾದ ಸುವರ್ಣ ತ್ರಿಭುಜ ಬೋಟ್‍ನಲ್ಲಿದ್ದ ಏಳು ಮಂದಿ ಮೀನುಗಾರರ ಕುಟುಂಬದ ಸದಸ್ಯರಿಗೆ ತಲಾ 10 ಲಕ್ಷ ರೂ.ಮೊತ್ತದ ಪರಿಹಾರದ ಚೆಕ್ ಅನ್ನು ಮುಖ್ಯಮಂತ್ರಿ ಯಡಿಯೂರಪ್ಪ ಹಸ್ತಾಂತರ ಮಾಡಿದರು.

ಕಾರ್ಯಕ್ರಮದಲ್ಲಿ ಮೀನುಗಾರಿಕಾ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಕಂದಾಯ ಸಚಿವ ಆರ್.ಅಶೋಕ್, ಶಾಸಕರಾದ ರಘುಪತಿ ಭಟ್, ಕುಮಾರ್ ಬಂಗಾರಪ್ಪ, ಮೀನುಗಾರಿಕಾ ಇಲಾಖೆ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ, ನಿರ್ದೇಶಕ ರಾಮಾಚಾರ್ಯ ಸೇರಿದಂತೆ ಇನ್ನಿತರರು ಹಾಜರಿದ್ದರು.

ಬಾಯಿ ನೀರೂರಿಸುವ ಸಿಗಡಿ ಚಟ್ನಿ-ರೊಟ್ಟಿ: ಮೀನಿನ ಖಾದ್ಯ ಪ್ರಿಯರಿಗಾಗಿ ಬಾಯಿ ನೀರೂರಿಸಿರುವ ಇದೇ ಮೊದಲ ಬಾರಿಗೆ ಮೀನು ಸಿಗಡಿ ಚಟ್ನಿ, ಚಟ್ನಿಪುಡಿ, ಚಿಪ್ಸ್, ಸಿರಿಧಾನ್ಯಗಳ ರೊಟ್ಟಿ, ಕರಾವಳಿಯ ಅಕ್ಕಿ ರೊಟ್ಟಿ ಉತ್ಪನ್ನಗಳನ್ನು ಬಿಡುಗಡೆ ಮಾಡಲಾಯಿತು. ಮೇಲ್ಕಂಡ ಉತ್ಪನ್ನಗಳನ್ನು  ಮಂಗಳೂರಿನ ಮೀನು ಸಂಸ್ಕರಣಾ ಮತ್ತು ತಾಂತ್ರಿಕ ವಿಭಾಗ ಮೀನುಗಾರಿಕಾ ಮಹಾವಿದ್ಯಾಲಯದವರು ತಯಾರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News