ಟೊಯೋಟಾ ಕಿರ್ಲೋಸ್ಕರ್ ಕಾರ್ಖಾನೆ ಬಿಕ್ಕಟ್ಟು: 14ನೆ ದಿನಕ್ಕೆ ಕಾಲಿಟ್ಟ ಕಾರ್ಮಿಕರ ಪ್ರತಿಭಟನೆ

Update: 2020-11-21 14:18 GMT

ಬೆಂಗಳೂರು, ನ. 21: ರಾಮನಗರ ಜಿಲ್ಲೆ ಬಿಡದಿ ಕೈಗಾರಿಕಾ ಪ್ರದೇಶದಲ್ಲಿರುವ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ಸ್ ಕಾರ್ಖಾನೆಯ ಆಡಳಿತ ಮಂಡಳಿ ಸರಕಾರದ ಆದೇಶ ಉಲ್ಲಂಘಿಸಿ ‘ಅನಧಿಕೃತ ಲಾಕ್‍ಔಟ್’ ಮುಂದುವರಿಸಿದ್ದು, ಲಾಕ್‍ಔಟ್ ತೆರವು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಟಿಕೆಎಂಇಯು ಕಾರ್ಮಿಕರ ಹೋರಾಟ 14ನೆ ದಿನಕ್ಕೆ ಕಾಲಿಟ್ಟಿದೆ.

ಶನಿವಾರ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ಸ್ ಕಾರ್ಮಿಕರ ಹೋರಾಟಕ್ಕೆ ಟಿಯುಸಿಸಿ ರಾಜ್ಯಾಧ್ಯಕ್ಷ ಜಿ.ಶಿವಶಂಕರ್, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿಯವರ ಪರವಾಗಿ ಮಳವಳ್ಳಿ ಕ್ಷೇತ್ರದ ಶಾಸಕ ಕೆ.ಅನ್ನದಾನಿ ಹಾಗೂ ಕನ್ನಡಪರ ಸಂಘಟನೆಯ ಮುಖಂಡ ರೂಪೇಶ್ ರಾಜಣ್ಣ ಸೇರಿದಂತೆ ಇನ್ನಿತರರು ಬೆಂಬಲ ಘೋಷಿಸಿದ್ದು, ನ.23ರಿಂದ ಹೋರಾಟ ತೀವ್ರಗೊಳಿಸುವ ಎಚ್ಚರಿಕೆ ನೀಡಲಾಗಿದೆ.

ಕಾರ್ಖಾನೆ ಆಡಳಿತ ಮಂಡಳಿ ಘೋಷಿಸಿದ್ದ ಲಾಕ್‍ಔಟ್(ಬೀಗಮುದ್ರೆ) ಹಾಗೂ ಕಾರ್ಮಿಕರ ಪ್ರತಿಭಟನೆ ನಿಷೇಧಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ. ಆ ಹಿನ್ನಲೆಯಲ್ಲಿ ಕಾರ್ಮಿಕರ ಕರ್ತವ್ಯಕ್ಕೆ ಹಾಜರಾಗಲು ತೆರಳಿದರೆ ಕಾರ್ಮಿಕರನ್ನು ಆಡಳಿತ ಮಂಡಳಿ ಕಾರ್ಖಾನೆ ಒಳಗೆ ಬಿಟ್ಟುಕೊಳ್ಳುತ್ತಿಲ್ಲ. ಹೀಗಾಗಿ ಅನಧಿಕೃತವಾಗಿ ಲಾಕ್‍ಔಟ್ ಮುಂದುವರಿಸಿದ್ದು, ಸರಕಾರದ ಆದೇಶವನ್ನು ಉಲ್ಲಂಘಿಸಿದೆ ಎಂದು ಕಾರ್ಮಿಕ ಮುಖಂಡರು ಆರೋಪಿಸಿದ್ದಾರೆ.

ಜಪಾನ್ ಕಾನೂನು ಇಲ್ಲ ನಡೆಯುವುದಿಲ್ಲ: ಟೊಯೋಟಾ ಕಿರ್ಲೋಸ್ಕರ್ ಮೋಟಾರ್ಸ್ ಕಾರ್ಖಾನೆಯ ಆಡಳಿತ ಮಂಡಳಿ ಕಾನೂನುಗಳನ್ನು ಗಾಳಿಗೆ ತೂರಿ ಕಾರ್ಮಿಕರನ್ನು ಮನಸೋ ಇಚ್ಛೆ ದುಡಿಸಿಕೊಳ್ಳಲು ರಾಜ್ಯದಲ್ಲಿ ಅವಕಾಶವಿಲ್ಲ. ಜಪಾನ್ ಕಾನೂನುಗಳು ಕರ್ನಾಟಕ ರಾಜ್ಯದಲ್ಲಿ ನಡೆಯುವುದಿಲ್ಲ ಎಂದು ಕಾರ್ಮಿಕ ಮುಖಂಡ ಜಿ.ಶಿವಶಂಕರ್ ಎಚ್ಚರಿಸಿದರು.

ಟಿಕೆಎಂಇಯು ಕಾರ್ಮಿಕರ ಹೋರಾಟವನ್ನು ಬೆಂಬಲಿಸಿ ಮಾತನಾಡಿದ ಅವರು, ಕಾರ್ಖಾನೆ ಆಡಳಿತ ಮಂಡಳಿ ನೀಡುತ್ತಿರುವ ವೇತನವನ್ನು ದೊಡ್ಡದಾಗಿ ಬಿಂಬಿಸಲಾಗುತ್ತಿದೆ. ಆದರೆ, ಅವರು ನೀಡುತ್ತಿರುವ ಸಂಬಳವನ್ನು ಕೂಲಿ ಕಾರ್ಮಿಕರ ದುಡಿಯುತ್ತಾರೆ. ವೈಜ್ಞಾನಿಕವಾಗಿ ಅಧ್ಯಯನ ನಡೆಸಿ ಕಾರ್ಮಿಕರಿಂದ ಕೆಲಸ ಮಾಡಿಸಿಕೊಳ್ಳಬೇಕು ಎಂದು ಪ್ರತಿಪಾದಿಸಿದರು.

ಎಚ್‍ಡಿಕೆ ಬೆಂಬಲ: ಕಾರ್ಮಿಕರ ಹೋರಾಟಕ್ಕೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬೆಂಬಲ ನೀಡಿದ್ದಾರೆ. ಹೀಗಾಗಿಯೇ ನಾನು ಅವರ ಪ್ರತಿನಿಧಿಯಾಗಿ ಇಲ್ಲಿಗೆ ಬಂದಿದ್ದೇನೆ ಎಂದ ಶಾಸಕ ಅನ್ನದಾನಿ, ಟೊಯೋಟಾ ಕಿರ್ಲೋಸ್ಕರ್ ಕಾರ್ಖಾನೆ ರಾಜ್ಯದ ನೆಲ, ಜಲ, ವಿದ್ಯುತ್ ಸಹಿತ ರೈತರ ಭೂಮಿ ಹಾಗೂ ಕಾರ್ಮಿಕರ ಶ್ರಮವನ್ನು ಬಳಸಿಕೊಂಡು ಮುಂಚೂಣಿಗೆ ಬಂದಿದೆ. ಇದೀಗ ಕಾರ್ಮಿಕರನ್ನು ಬೀದಿಗೆ ತಳ್ಳಲು ಮುಂದಾದರೆ ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ರಾಜ್ಯ ಸರಕಾರ ಕೂಡಲೇ ಕಾರ್ಖಾನೆ ಆಡಳಿತ ಮಂಡಳಿಗೆ ಸೂಚನೆ ನೀಡಿ ಲಾಕ್‍ಔಟ್ ತೆರವು ಮಾಡಬೇಕು. ಕಾರ್ಮಿಕರಿಗೆ ಒತ್ತಡ-ಕಿರುಕುಳಗಳಿಲ್ಲದೆ ಮುಕ್ತವಾಗಿ ಕೆಲಸ ಮಾಡುವ ಅವಕಾಶ ಕಲ್ಪಿಸಬೇಕು ಎಂದು ಅನ್ನದಾನಿ ಆಗ್ರಹಿಸಿದರು. ಈ ವೇಳೆ ಕಾರ್ಮಿಕ ಸಂಘದ ಪದಾಧಿಕಾರಿಗಳು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News