ನ.29ಕ್ಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೊದಲ ಸುತ್ತಿನ ಸೀಟು ಹಂಚಿಕೆ

Update: 2020-11-21 16:39 GMT

ಬೆಂಗಳೂರು, ನ.21: ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ)ವು ಸಾಮಾನ್ಯ ಪ್ರವೇಶ ಪರೀಕ್ಷೆ–2020ರ ಅಡಿ ಮೊದಲನೇ ಸುತ್ತಿನ ಸೀಟು ಹಂಚಿಕೆಯ ವೇಳಾಪಟ್ಟಿ ಪ್ರಕಟಿಸಿದ್ದು, ನ.29ಕ್ಕೆ ಮೊದಲ ಪಟ್ಟಿ ಪ್ರಕಟವಾಗಲಿದೆ.

ಪ್ರಾಧಿಕಾರದ ವೆಬ್‍ಸೈಟ್‍ನಲ್ಲಿ ಶುಲ್ಕದ ವಿವರ ಹಾಗೂ ಸೀಟು ಮ್ಯಾಟ್ರಿಕ್ಸ್ ವಿವರಗಳನ್ನು ಪ್ರಕಟಿಸಲಾಗಿದೆ. ವಿದ್ಯಾರ್ಥಿಗಳು ಸೇರಬಯಸುವ ಕೋರ್ಸ್‍ಗಳು ಅಂದರೆ ಇಂಜಿನಿಯರಿಂಗ್, ಪಶುಸಂಗೋಪನೆ, ವಾಸ್ತುಶಿಲ್ಪ ಶಾಸ್ತ್ರ, ಕೃಷಿ ವಿಜ್ಞಾನ, ಬಿ.ಫಾರ್ಮಾದ ಆಯ್ಕೆಯನ್ನು ಆದ್ಯತಾ ಕ್ರಮದಲ್ಲಿ ದಾಖಲಿಸಬೇಕು. ನ.22ರ ಮಧ್ಯಾಹ್ನ 2ರಿಂದ 25ರ ಬೆಳಿಗ್ಗೆ 11ರವರೆಗೆ ಈ ಆಯ್ಕೆಯನ್ನು ಮಾಡಿಕೊಳ್ಳಬೇಕು.

ಅಣಕು ಅಥವಾ ಪ್ರಾಯೋಗಿಕ ಸೀಟುಗಳ ಹಂಚಿಕೆ ಫಲಿತಾಂಶವನ್ನು ನ.26 ರ ಮಧ್ಯಾಹ್ನ 2 ರ ಬಳಿಕ ಪ್ರಕಟಿಸಲಾಗುವುದು. ಅದನ್ನು ಪರಿಶೀಲಿಸದ ಬಳಿಕ ವಿದ್ಯಾರ್ಥಿಗಳು 26 ರ ಸಂಜೆ 4ರಿಂದ 28 ರ ಬೆಳಗ್ಗೆ 11 ರವರೆಗೆ ತಮ್ಮ ಆಯ್ಕೆಗಳನ್ನು ಬದಲಿಸಿಕೊಳ್ಳುವ ಅಥವಾ ಸೇರಿಸುವ, ಇಲ್ಲವೇ ತೆಗೆದು ಹಾಕಲು ಅವಕಾಶ ಕಲ್ಪಿಸಲಾಗಿದೆ.

ನ.29ರ ಸಂಜೆ 4ರ ನಂತರ ಮೊದಲ ಸುತ್ತಿನ ಸೀಟು ಹಂಚಿಕೆಯ ಫಲಿತಾಂಶ ಪ್ರಕಟಿಸಲಾಗುತ್ತದೆ. ಇದನ್ನು ನೋಡಿದ ನಂತರ, ಪೋಷಕರ ಜೊತೆ ಚರ್ಚಿಸಿ ಸೂಕ್ತ ಆಯ್ಕೆ ಮಾಡಿಕೊಳ್ಳಲು ನ.30ರಿಂದ ಡಿ.1ರವರೆಗೆ ಅವಕಾಶ ಕಲ್ಪಿಸಲಾಗಿದೆ. ಮೊದಲ ಆಯ್ಕೆ (ಚಾಯ್ಸ್ 1) ಮಾಡಿದ ಅಭ್ಯರ್ಥಿಗಳು ನ.30ರಿಂದ ಡಿ.2ರ ಅವಧಿಯಲ್ಲಿ ಶುಲ್ಕವನ್ನು ಪಾವತಿ ಮಾಡಬೇಕು. ಎಲ್ಲ ಮೂಲ ದಾಖಲೆಗಳೊಂದಿಗೆ ಡಿ.2ರ ಸಂಜೆ 5.30ರೊಳಗೆ ಕಾಲೇಜುಗಳಲ್ಲಿ ಪ್ರವೇಶ ಪಡೆಯಬೇಕು ಎಂದು ಕೆಇಎ ಪ್ರಕಟಣೆ ತಿಳಿಸಿದೆ.

ಪೋಷಕರೊಂದಿಗೆ ಚರ್ಚಿಸಿ: ವಿದ್ಯಾರ್ಥಿಗಳು ದಾಖಲಿಸುವ ಆಯ್ಕೆಗಳನ್ನು ಪರಿಗಣಿಸಿ ಮೆರಿಟ್ ಆಧಾರದ ಮೇಲೆ ಸೀಟು ಹಂಚಿಕೆ ಮಾಡಲಾಗುತ್ತದೆ. ಈ ವೇಳೆ ವಿದ್ಯಾರ್ಥಿಗಳು ನೇರವಾಗಿ ಆಯ್ಕೆಗಳನ್ನು ದಾಖಲಿಸದೆ, ತಮಗೆ ಇಷ್ಟ್ಟವಿರುವ ಕೋರ್ಸುಗಳು ಮತ್ತು ಕಾಲೇಜುಗಳ ಒಂದು ಪಟ್ಟಿ ಮಾಡಿಕೊಳ್ಳಬೇಕು. ಈ ಬಗ್ಗೆ ಪೋಷಕರೊಂದಿಗೆ ಚರ್ಚಿಸಬೇಕು. ನಂತರವೇ ಆಯ್ಕೆಗಳನ್ನು ಪ್ರಾಧಿಕಾರದ ವೆಬ್‍ಸೈಟ್ http://kea.kar.nic.in ನಲ್ಲಿನ ನಿಗದಿತ ಲಿಂಕ್ ಮೂಲಕ ದಾಖಲಿಸಬೇಕು’ ಎಂದೂ ಪ್ರಾಧಿಕಾರ ಸೂಚಿಸಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News