ಕೊರೋನ ವಾರಿಯರ್ಸ್ ಸೇವೆ ಅಮೋಘವಾದದ್ದು: ಮೌಲಾನ ಸಗೀರ್ ಅಹ್ಮದ್ ರಶಾದಿ

Update: 2020-11-21 17:03 GMT

ಬೆಂಗಳೂರು, ನ.21: ಕೋವಿಡ್ ಸಂಕಷ್ಟದ ಕಾಲದಲ್ಲಿ ನಾಗರಿಕ ಸಮಾಜಕ್ಕೆ ಕೊರೋನ ವಾರಿಯರ್ ಗಳು ಸಲ್ಲಿಸಿರುವ ನಿಸ್ವಾರ್ಥ ಸೇವೆ ಅಮೋಘವಾದದ್ದು. ಈ ಸೋಂಕಿನ ವಿರುದ್ಧದ ಹೋರಾಟದಲ್ಲಿ ಪ್ರತಿಯೊಬ್ಬರಲ್ಲಿಯೂ ಸೇವಾ ಮನೋಭಾವನೆ ಜಾಗೃತಗೊಂಡಿದೆ ಎಂದು ಅಮೀರೆ ಶರೀಅತ್ ಮೌಲಾನ ಸಗೀರ್ ಅಹ್ಮದ್ ಖಾನ್ ರಶಾದಿ ತಿಳಿಸಿದ್ದಾರೆ.

ಶನಿವಾರ ನಗರದ ಗೋವಿಂದಪುರದಲ್ಲಿರುವ ದಾರೂಲ್ ಉಲೂಮ್ ಸಬೀಲುರ್ರಶಾದ್(ಅರೇಬಿಕ್ ಕಾಲೇಜು)ನಲ್ಲಿ ಆಲ್ ಇಂಡಿಯಾ ಮಿಲ್ಲಿ ಕೌನ್ಸಿಲ್ ವತಿಯಿಂದ ಕೊರೋನ ವಾರಿಯರ್ಸ್‍ಗಳಿಗೆ ಏರ್ಪಡಿಸಿದ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕೋವಿಡ್ ಲಾಕ್‍ಡೌನ್ ಸಂದರ್ಭದಲ್ಲಿ ಬಡವರು, ಶ್ರೀಮಂತರು ಸೇರಿದಂತೆ ಸಮಾಜದ ಎಲ್ಲ ವರ್ಗಗಳ ಜನರು ಸಂಕಷ್ಟಕ್ಕೆ ಸಿಲುಕಿದ್ದರು. ಆದರೆ, ತಮ್ಮ ಆರೋಗ್ಯ, ಕುಟುಂಬವನ್ನು ಲೆಕ್ಕಿಸದೆ ನಾಗರಿಕ ಸಮಾಜಕ್ಕೆ ಸೇವೆ ಸಲ್ಲಿಸಬೇಕು ಎಂಬ ಏಕೈಕ ಉದ್ದೇಶದಿಂದ ಎಲ್ಲ ಸಮುದಾಯಗಳು, ಜಾತಿಗಳು, ಧರ್ಮದ ಜನರು ತಮ್ಮಿಂದ ಸಾಧ್ಯವಾದ ಸೇವೆಯನ್ನು ಮಾಡಿದ್ದಾರೆ ಎಂದು ಅವರು ಹೇಳಿದರು.

ಆಹಾರದ ಪೊಟ್ಟಣ ಹಂಚಿಕೆ, ರೇಷನ್ ಕಿಟ್ ಹಂಚಿಕೆ, ಕುಡಿಯುವ ನೀರು, ಆರೋಗ್ಯ ಸೇವೆ ಸೇರಿದಂತೆ ಪ್ರತಿಯೊಂದು ಮೂಲಭೂತ ಅಗತ್ಯಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವಲ್ಲಿ ಕೊರೋನ ವಾರಿಯರ್ಸ್‍ಗಳು ಶ್ರಮಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನಮ್ಮಿಂದ ಸಾಧ್ಯವಾದಷ್ಟು ಮಟ್ಟಿಗೆ ಕೊರೋನ ವಾರಿಯರ್ಸ್‍ಗಳನ್ನು ಗುರುತಿಸಿ ಗೌರವಿಸಿದ್ದೇವೆ ಎಂದು ಸಗೀರ್ ಅಹ್ಮದ್ ತಿಳಿಸಿದರು.

ಯಾವುದೋ ಒಂದು ಸಮುದಾಯದವರನ್ನಷ್ಟೇ ಇಲ್ಲಿಗೆ ಆಹ್ವಾನಿಸಲಾಗಿಲ್ಲ. ಇಲ್ಲಿ ಮುಸ್ಲಿಮರು, ಹಿಂದುಗಳು, ಕ್ರೈಸ್ತರು, ಸಿಖ್ಖರು ಎಲ್ಲರೂ ಇದ್ದಾರೆ. ವೈದ್ಯರು, ಸ್ವಯಂಸೇವಕರು, ಸಮಾಜ ಸೇವಕರು, ಪತ್ರಕರ್ತರು, ವಕೀಲರು ಅಷ್ಟೇ ಅಲ್ಲದೆ, ಮನೆ ಮನೆಗೆ ಹಾಲನ್ನು ಹಾಕುವಂತ ಚಿಕ್ಕ ಹುಡುಗರನ್ನು ಗುರುತಿಸಿ ಗೌರವಿಸಲಾಗಿದೆ. ನಾಗರಿಕ ಸಮಾಜಕ್ಕೆ ಸಲ್ಲಿಸಿರುವ ಈ ಸೇವಾ ಮನೋಭಾವನೆಯನ್ನು ಪ್ರತಿಯೊಬ್ಬರೂ ತಮ್ಮ ಜೀವನಪರ್ಯಂತ ಉಳಿಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.

ಪ್ರವಾದಿ ಮುಹಮ್ಮದ್(ಸ) ನಮಗೆ ಬೋಧಿಸಿರುವ ಸೇವಾ ಮನೋಭಾವನೆಯ ಮಹತ್ವವನ್ನು ಅರ್ಥ ಮಾಡಿಕೊಳ್ಳಬೇಕು. ಪ್ರೀತಿ, ಸಹೋದರತೆ, ಕರುಣೆಯನ್ನು ನಾವು ಬೆಳೆಸಿಕೊಳ್ಳಬೇಕು. ಮತ್ತೊಬ್ಬರ ಸಂಕಷ್ಟಕ್ಕೆ ನೆರವಾಗಲು ಸದಾ ಸಿದ್ಧವಾಗಿರಬೇಕು ಎಂದು ಸಗೀರ್ ಅಹ್ಮದ್ ಹೇಳಿದರು.

ಈ ಸಂದರ್ಭದಲ್ಲಿ ಆಲ್ ಇಂಡಿಯಾ ಮಿಲ್ಲಿ ಕೌನ್ಸಿಲ್‍ನ ಪ್ರಮುಖರಾದ ಮೌಲಾನ ಮುಸ್ತಫಾ ರಿಫಾಯಿ, ಮೌಲಾನ ಸಯ್ಯದ್ ಬಾಖರ್ ಅರ್ಶದ್, ಸಯ್ಯದ್ ಶಾಹಿದ್ ಅಹ್ಮದ್, ಸುಲೇಮಾನ್ ಖಾನ್, ಆಗಾ ಸುಲ್ತಾನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News