ಇತಿಹಾಸದ ಪುಟಗಳಲ್ಲಿ ಮರೆಮಾಚಲಾದ ದಲಿತ ವೀರಾಂಗನೆ ಝಲಕರಿಬಾಯಿ

Update: 2020-11-21 19:30 GMT

ಭಾರತದ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸದಲ್ಲಿ ಮಿಂಚಿ ಹೋದ ಸ್ವಾತಂತ್ರ್ಯಸೇನಾನಿಗಳ ಶೌರ್ಯ, ಸಾಹಸ ಮತ್ತು ತ್ಯಾಗಗಳನ್ನು ದಾಖಲಿಸುವಲ್ಲಿ ತೋರಿದ ನಿರ್ಲಕ್ಷ್ಯಕ್ಕೆ ಹತ್ತು ಹಲವು ನಿದರ್ಶನಗಳಿವೆ. ಇತಿಹಾಸ ಬರೆದವರು ಏಕಮುಖಿ ಮೇಲ್ಜಾತಿ ಪ್ರಣೀತ ಇತಿಹಾಸ ಬರೆದಿರುವುದರಿಂದ ತಳಸಮುದಾಯದ ಹೋರಾಟಗಾರರ ಶೌರ್ಯ, ತ್ಯಾಗ ಮತ್ತು ಸಾಹಸಗಾಥೆಗಳನ್ನು ದಾಖಲಿಸುವಲ್ಲಿ ವಿಫಲರಾಗಿರುವುದು ಕಂಡುಬರುತ್ತದೆ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕೆಳಜಾತಿಯ ಹೋರಾಟಗಾರರು ದೇಶಕ್ಕಾಗಿ ದುಡಿದು ಮಡಿದ ಘಟನೆಗಳನ್ನು ಮರೆಮಾಚಿರುವುದು ಇತಿಹಾಸಕ್ಕೆ ಬಗೆದ ದ್ರೋಹವಾಗಿದೆ. ದಾಖಲಾಗದ ಐತಿಹಾಸಿಕ ಘಟನೆಗಳ ಸಾಲಿಗೆ ಝಾನ್ಸಿಯ ಝಲಕರಿಬಾಯಿಯ ಹೋರಾಟ, ಸಾಹಸ, ಶೌರ್ಯ ಮತ್ತು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಘಟನೆಯೂ ಪ್ರಮುಖವಾದುದಾಗಿದೆ. ಇತಿಹಾಸವನ್ನು ತಳಸಮುದಾಯದ ದೃಷ್ಟಿಕೋನದಿಂದ ನೋಡುವ, ಪರಿಶೀಲಿಸುವ ಹಾಗೂ ದಾಖಲಿಸುವ ಅಗತ್ಯತೆ ಇದೆ. ಇತಿಹಾಸದ ಪುಟಗಳಲ್ಲಿ ದಾಖಲಾಗದ ಹತ್ತು ಹಲವು ಘಟನೆಗಳ ಸಾಲಿಗೆ ಸೇರಿರುವುದೇ ಝಲಕರಿಬಾಯಿಯ ಹೋರಾಟದ ಬದುಕು. ವೀರಾವೇಶದಿಂದ ಬ್ರಿಟಿಷರ ವಿರುದ್ಧ ಹೋರಾಡಿದ ವೀರಾಂಗನೆ ಝಾನ್ಸಿಯ ಝಲಕರಿ ಬಾಯಿಯ ಸಾಹಸ, ಶೌರ್ಯ ಮತ್ತು ವೀರಗಾಥೆಯು ಇತಿಹಾಸದ ಪುಟಗಳಲ್ಲಿ ಕಳೆದು ಹೋದದ್ದು ವಿಪರ್ಯಾಸ.

ಸಾಮಾನ್ಯ ಅಸ್ಪಶ್ಯ ತಳಸಮುದಾಯದ ಝಲಕರಿ ಬಾಯಿ ತನ್ನ ಸ್ವಪರಿಶ್ರಮ, ಸ್ವಾಮಿನಿಷ್ಠೆ, ಸತತ ಸಮರಾಭ್ಯಾಸ, ಕಠಿಣ ಪ್ರಯತ್ನಗಳಿಂದ ಮುಂದೆ ಬಂದು ಝಾನ್ಸಿಯ ರಾಣಿ ಲಕ್ಷ್ಮೀಬಾಯಿಯ ಸೈನ್ಯದಲ್ಲಿ ಸ್ಥಾನ ಪಡೆದಿದ್ದು ಮಾತ್ರವಲ್ಲ, ರಾಣಿಯ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದಳೆಂಬುದು ಹೆಮ್ಮೆಯ ಸಂಗತಿ. ಝಾನ್ಸಿಯ ಕೋಟೆ ರಕ್ಷಣೆಯಲ್ಲಿ ಪ್ರಾಣದ ಹಂಗು ತೊರೆದು ಹೋರಾಡಿ ಬ್ರಿಟಿಷರ ಎದೆಯಲ್ಲಿ ನಡುಕ ಹುಟ್ಟುವಂತೆ ಮಾಡಿದ ವೀರಾಂಗನೆ. ಆಕೆ ಶೌರ್ಯ ಮತ್ತು ಸಾಹಸಶೀಲ ಪ್ರವೃತ್ತಿಯವಳಾಗಿದ್ದಳು ಮಾತ್ರವಲ್ಲ, ಝಾನ್ಸಿಯ 1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ನಿರ್ಣಾಯಕ ಯುದ್ಧದಲ್ಲಿ ಝಾನ್ಸಿ ರಾಣಿ ಲಕ್ಷ್ಮೀಬಾಯಿಯಂತೆ ವೇಷ ಧರಿಸಿ ಝಾನ್ಸಿಯ ಸೈನ್ಯವನ್ನು ತನ್ನ ಹಿಡಿತದಲ್ಲಿ ತೆಗೆದುಕೊಂಡು ವೈರಿ ಬ್ರಿಟಿಷರ ಪಾಳೆಯಕ್ಕೆ ನುಗ್ಗಿ ಬ್ರಿಟಿಷ್ ಸೈನಿಕರ ಮೇಲೆ ಮೃತ್ಯು ಎರಗಿದಂತೆ ಮುನ್ನುಗ್ಗಿ ಹೋರಾಡಿದಳು. ಝಾನ್ಸಿ ರಾಣಿ ಲಕ್ಷ್ಮೀಬಾಯಿ ಕೋಟೆಯಿಂದ ಸುರಕ್ಷಿತವಾಗಿ ತಪ್ಪಿಸಿಕೊಳ್ಳಲು ಆಕೆಯಂತೆ ವೇಷ ಮರೆಸಿಕೊಂಡು ಯುದ್ಧ ಭೂಮಿಯಲ್ಲಿ ವೀರಾವೇಶದಿಂದ ಹೋರಾಡಿದ ಝಲಕರಿಬಾಯಿಯ ಸಾಹಸ ಸ್ತುತ್ಯಾರ್ಹ. 1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ನಿರ್ಣಾಯಕ ಯುದ್ಧದಲ್ಲಿ ಬ್ರಿಟಿಷರ ಎದೆಯಲ್ಲಿ ನಡುಕ ಹುಟ್ಟಿಸಿ ಅವರ ಸೈನ್ಯವು ಯುದ್ಧ ಭೂಮಿಯಿಂದ ಹಿಮ್ಮೆಟ್ಟುವಂತೆ ಮಾಡಿ ಝಾನ್ಸಿಯ ಕೋಟೆಯನ್ನು ಎರಡು ವಾರಗಳವರೆಗೆ ರಕ್ಷಿಸಿದ್ದು ನಿರ್ಲಕ್ಷಿಸಬಹುದಾದ ಘಟನೆಯಲ್ಲ.

ಝಲಕರಿಬಾಯಿಯ ಹಿನ್ನೆಲೆ

ನವೆಂಬರ್ 22, 1830ರಲ್ಲಿ ಜನ್ಮ ತಾಳಿದ ಝಲಕರಿ ಬಾಯಿ, ತಂದೆ ಸದೋಬಾಸಿಂಗ್ ಮತ್ತು ತಾಯಿ ಜಮುನಾದೇವಿಯವರ ಮುದ್ದಿನ ಪುತ್ರಿಯಾಗಿದ್ದಳು. ಝಾನ್ಸಿಯ ಹತ್ತಿರವಿರುವ ಭೋಜ್ಲಾ ಆಕೆಯ ಹುಟ್ಟೂರು. ತಂದೆ ತಾಯಿಗೆ ಒಬ್ಬಳೇ ಮಗಳು. ಝಲಕರಿ ಇನ್ನೂ ಚಿಕ್ಕವಳಿರುವಾಗಲೇ ತಾಯಿ ಮೃತಪಟ್ಟಿದ್ದರಿಂದ ತಂದೆಯೇ ಆಕೆಯನ್ನು ಆಸ್ಥೆಯಿಂದ ಬೆಳೆಸಿದರು. ಪ್ರೀತಿಯ ಮಗಳಾಗಿದ್ದ ಝಲಕರಿಗೆ ಏನೂ ಕೊರತೆಯಾಗದಂತೆ ಬೆಳೆಸಿದರು. ಆಕೆಯ ತಂದೆ ತಳ ದಲಿತ ಸಮುದಾಯವಾಗಿದ್ದ ಕೋರಿ ಜಾತಿಗೆ ಸೇರಿದ್ದರಿಂದ ಹಾಗೂ ಬಡತನದ ಕಾರಣದಿಂದ ಆಕೆಯನ್ನು ಶಾಲೆಗೆ ಸೇರಿಸಲು ಆಗಲಿಲ್ಲ. ಆಕೆ ಶಿಕ್ಷಣದಿಂದ ವಂಚಿತಳಾಗಬೇಕಾದ ಸ್ಥಿತಿ ಇತ್ತು. ಆದಾಗ್ಯೂ ಆಕೆಯ ತಂದೆ ಸದೋಬಾಸಿಂಗ್ ಆಕೆಗೆ ಶಸ್ತ್ರಾಸ್ತ್ರ ಅಭ್ಯಾಸವನ್ನು ಮಾಡಿಸಿದರು. ತಂದೆ ಶಸ್ತ್ರಾಸ್ತ್ರ ಪ್ರಯೋಗಿಸುವ ವಿದ್ಯೆಯಲ್ಲಿ ನಿಪುಣತೆ ಗಳಿಸಿದ್ದರಿಂದ ಅದನ್ನೇ ಝಲಕರಿ ಬಾಯಿಗೆ ಧಾರೆ ಎರೆದಿದ್ದರು. ಅಶ್ವ ವಿದ್ಯೆಯನ್ನು ಆಕೆಗೆ ಕಲಿಸುವ ಮುತುವರ್ಜಿಯನ್ನು ತಂದೆ ವಹಿಸಿದ್ದರು. ತನ್ನ ಚಿಕ್ಕ ವಯಸ್ಸಿನಲ್ಲಿಯೇ ಶಸ್ತ್ರಾಸ್ತ್ರ ಉಪಯೋಗದೊಂದಿಗೆ ಇತರ ಸಮರಾಭ್ಯಾಸ ಕಲೆಯಲ್ಲಿ ಪರಿಣತಿ ಪಡೆದುಕೊಂಡಿದ್ದಳು. ದನ ಕಾಯಲು ಕಾಡಿಗೆ ಹೋಗಿದ್ದಾಗ ತನ್ನ ಮೈ ಮೇಲೆ ಎರಗಿದ ಚಿರತೆಯನ್ನು ಕೈಯಲ್ಲಿ ಹಿಡಿದುಕೊಂಡಿದ್ದ ಬಡಿಗೆಯಿಂದಲೇ ಹೊಡೆದುರುಳಿಸಿದ ಸಾಹಸಮಯಿ ಈಕೆ. ತನ್ನ ಗ್ರಾಮದ ಶ್ರೀಮಂತನ ಮನೆಯನ್ನು ಲೂಟಿ ಮಾಡಲು ಬಂದಿದ್ದ ಡಕಾಯಿತರನ್ನು ಹಿಮ್ಮೆಟ್ಟಿಸಿದ ಝಲಕರಿ ಶೌರ್ಯವಂತಳಾಗಿದ್ದಳು. ಝಲಕರಿಬಾಯಿ ಪೂರನ್‌ಸಿಂಗ್‌ನನ್ನು ವಿವಾಹವಾಗಿದ್ದಳು. ಗಂಡ ಝಾನ್ಸಿಯ ಲಕ್ಷ್ಮೀಬಾಯಿಯ ಸೈನ್ಯದಲ್ಲಿ ಸೈನಿಕನಾಗಿದ್ದ. ಸೈನ್ಯದ ದಂಡಾಧಿಪತಿಗಳು ಗುರುತಿಸುವಂತಹ ಸಾಹಸಿ ಮತ್ತು ಶೌರ್ಯವಂತನಾಗಿದ್ದ. ಸೈನಿಕ ವೃತ್ತಿಯಲ್ಲಿ ಅಪಾರ ಪರಿಣಿತಿಯನ್ನು ಹೊಂದಿದ್ದ ಪೂರನ್‌ಸಿಂಗ್‌ಗೆ ತಕ್ಕ ಹೆಂಡತಿ ಝಲಕರಿಬಾಯಿ.

ಝಾನ್ಸಿಯ ಕೋಟೆಯಲ್ಲಿ ವಿಜೃಂಭಣೆಯಿಂದ ನಡೆಯುತ್ತಿದ್ದ ಗೌರಿ ಪೂಜೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಝಲಕರಿಬಾಯಿ ರಾಣಿ ಲಕ್ಷ್ಮೀಬಾಯಿಯನ್ನು ಪ್ರಥಮ ಬಾರಿಗೆ ಭೇಟಿಯಾಗಿದ್ದಳು. ಝಲಕರಿ ರಾಣಿ ಲಕ್ಷ್ಮೀಬಾಯಿಯನ್ನೇ ಹೋಲುವಂತಹ ಆಕರ್ಷಕ ವ್ಯಕ್ತಿತ್ವ ಹೊಂದಿದ್ದಳು. ಝಲಕರಿಯನ್ನು ನೋಡಿದ ಲಕ್ಷ್ಮೀಬಾಯಿ ಆಕೆಯ ಹಾವಭಾವ ಮತ್ತು ಸದಾ ಚಟುವಟಿಕೆಯಿಂದ ಇರುತ್ತಿದ್ದ ವ್ಯಕ್ತಿತ್ವಕ್ಕೆ ಮಾರು ಹೋಗಿ ಆಕೆಯ ಬಗ್ಗೆ ವಿಚಾರಿಸಿದಾಗ ಝಲಕರಿ ಸಾಹಸಗಾಥೆ ಕೇಳಿ ಪ್ರಭಾವಿತರಾಗಿದ್ದಳು. ಆಕೆಯು ಶಸ್ತ್ರಾಸ್ತ್ರ ಬಳಕೆಯಲ್ಲಿ ಹೊಂದಿರುವ ನೈಪುಣ್ಯತೆ ಹಾಗೂ ಸಮರ ಕಲೆಯನ್ನು ಕರಗತ ಮಾಡಿಕೊಂಡಿದ್ದ ರೀತಿಯ ಬಗ್ಗೆ ಅರಿತ ರಾಣಿಯು ಝಲಕರಿ ಬಗ್ಗೆ ಆಸಕ್ತಿ ವಹಿಸುವಂತೆ ಆಯಿತು. ಈ ಎಲ್ಲ ಹಿನ್ನೆಲೆ ಹೊಂದಿದ್ದ ಝಲಕರಿಯನ್ನು ತನ್ನ ಮಹಿಳಾ ಪಡೆಗೆ ಸೇರಿಸಿಕೊಂಡಳು. ರಾಣಿ ಲಕ್ಷ್ಮೀಬಾಯಿಯೊಂದಿಗೆ ವೀರಾವೇಶ ಮತ್ತು ಶೌರ್ಯದಿಂದ ಬ್ರಿಟಿಷ ಸೈನ್ಯದೊಂದಿಗೆ ಕಾದಾಡಿದ್ದು ಝಲಕರಿಬಾಯಿಯ ಸಾಹಸಗಾಥೆಯನ್ನು ಪ್ರತಿಬಿಂಬಿಸುತ್ತದೆ. ಅಷ್ಟು ಮಾತ್ರವಲ್ಲ, ರಾಣಿ ಲಕ್ಷ್ಮೀಬಾಯಿಯ ಆಪ್ತ ಬಂಟರಲ್ಲಿ ಒಬ್ಬಳಾಗಿದ್ದ ಝಲಕರಿಬಾಯಿ ಯುದ್ಧದ ರೂಪರೇಷೆಗಳನ್ನು ಮತ್ತು ಕಾರ್ಯ ತಂತ್ರವನ್ನು ರೂಪಿಸಿ ಬ್ರಿಟಿಷರ ಎದೆ ನಡುಗುವಂತೆ ಮಾಡಿದ್ದು ಅದ್ಭುತವಾದ ಕಾರ್ಯವಾಗಿದೆ.

ರಾಣಿ ಲಕ್ಷ್ಮೀಬಾಯಿಯು ‘ದುರ್ಗಾ ದಲ್’ ಎನ್ನುವ ಮಹಿಳಾ ಪಡೆಯನ್ನು ರಚಿಸಿದ್ದರು. ಝಾನ್ಸಿಯಲ್ಲಿ ಮಹಿಳೆಯರು ಸಾಹಸಶೀಲರು ಮಾತ್ರವಲ್ಲ, ಅತ್ಯಂತ ಪರಾಕ್ರಮದಿಂದ ಕೂಡಿದವರಾಗಿದ್ದರು. ಸೈನ್ಯದಲ್ಲಿ ಮಹಿಳಾ ಪಡೆಯನ್ನು ರಚಿಸಿ ಮಹಿಳೆಯರಿಗೆ ಶಸ್ತ್ರಾಭ್ಯಾಸ, ಸಮರಕಲೆ ಹಾಗೂ ಯುದ್ಧ ಕಲೆಯನ್ನು ಕಲಿಸಲಾಗಿತ್ತು. ಬ್ರಿಟಿಷರು ಝಾನ್ಸಿಯ ಮೇಲೆ ಯುದ್ಧ ಸಾರುವ ಭೀತಿಯಿದ್ದುದರಿಂದ ಸೈನಿಕರಿಗೆ ಫಿರಂಗಿಗಳನ್ನು ಉಪಯೋಗಿಸುವ ತರಬೇತಿಯನ್ನು ನೀಡಲಾಗುತ್ತಿತ್ತು. ಆ ಸಂದರ್ಭದಲ್ಲಿ ಮಹಿಳಾ ಪಡೆಯ ಸೈನಿಕರಿಗೂ ಯುದ್ಧದಲ್ಲಿ ಫಿರಂಗಿ, ಮದ್ದು ಗುಂಡು ಮತ್ತು ಕೋವಿಗಳನ್ನು ಉಪಯೋಗಿಸುವ ಶಸ್ತ್ರಾಸ್ತ್ರ ಅಭ್ಯಾಸವನ್ನು ಮಾಡಿಸಲಾಗುತ್ತಿತು. ಅಂತಹ ತರಬೇತಿಯನ್ನು ಝಲಕರಿಬಾಯಿಗೂ ನೀಡಲಾಗಿತ್ತು.

1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ
ಭಾರತದ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸದಲ್ಲಿ 1857ರ ಪ್ರಥಮ ಸ್ವಾತಂತ್ರ್ಯ ಹೋರಾಟದ ಝಾನ್ಸಿಯ ಯುದ್ಧವು ನಿರ್ಣಾಯಕವೂ ಹಾಗೂ ಬ್ರಿಟಿಷ ಆಧಿಪತ್ಯದ ಮೇಲೆ ತೀವ್ರ ಪರಿಣಾಮ ಉಂಟು ಮಾಡಿ ಸಂಚಲನ ಮೂಡಿಸಿದ ಘಟನೆಯಾಗಿದೆ. 1857ರ ಮೇ 10ರಂದು ಸಿಪಾಯಿ ದಂಗೆ ಪ್ರಾರಂಭವಾಯಿತು. ಮೀರತ್‌ನಲ್ಲಿ ಪ್ರಾರಂಭವಾಗಿದ್ದ ಸಿಪಾಯಿ ದಂಗೆಯು ಇಡೀ ಉತ್ತರ ಮತ್ತು ಕೇಂದ್ರ ಭಾರತದಾದ್ಯಂತ ವಿವಿಧ ಸ್ಥಳಗಳಲ್ಲಿ ಸ್ಫೋಟಗೊಂಡಿತು. ಈ ನಿರ್ಣಾಯಕ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಯುದ್ಧದಲ್ಲಿ ಝಾನ್ಸಿಯ ರಾಣಿ ಲಕ್ಷ್ಮೀಬಾಯಿ ನಿರ್ಣಾಯಕ ಪಾತ್ರವನ್ನು ನಿರ್ವಹಿಸಿದಳು. ಬ್ರಿಟಿಷರ ಎದೆಯಲ್ಲಿ ಕೆಲ ಕಾಲ ನಡುಕ ಹುಟ್ಟಿಸಿದ ಈ ನಿರ್ಣಾಯಕ ಯುದ್ಧದಲ್ಲಿ ಝಾನ್ಸಿಯ ರಾಣಿ ಲಕ್ಷ್ಮೀಬಾಯಿಯ ನೇತೃತ್ವದ ಸೈನ್ಯವು ವೀರಾವೇಶದಿಂದ ಹೋರಾಡಿದ್ದು ಇತಿಹಾಸ.

ಲಾರ್ಡ್ ಡೌಲ್ ಹೌಸಿಯ Doctrine of Lapse ಧೋರಣೆಯಂತೆ ಮೃತ ಮಹಾರಾಜನ ನೇರ ವಾರಸುದಾರರಿಲ್ಲದ ಸಂಸ್ಥಾನಗಳನ್ನು ಬ್ರಿಟಿಷರ ಆಧಿಪತ್ಯಕ್ಕೆ ವಿಲೀನಗೊಳಿಸುವ ಪ್ರಕ್ರಿಯೆಯ ಭಾಗವಾಗಿ ಝಾನ್ಸಿಯನ್ನು ವಶಪಡಿಸಿಕೊಳ್ಳಲು ಜನರಲ್ ರೋಸ್‌ನ ನೇತೃತ್ವದ ಸೈನ್ಯಕ್ಕೆ ಬ್ರಿಟಿಷ್ ಆಡಳಿತ ಆದೇಶಿಸಿತ್ತು. ಬ್ರಿಟಿಷರ ಈ ಧೋರಣೆಯನ್ನು ಒಪ್ಪಿಕೊಳ್ಳದ ಝಾನ್ಸಿ ರಾಣಿ ಲಕ್ಷ್ಮೀಬಾಯಿ ಬ್ರಿಟಿಷರೊಂದಿಗೆ ಐತಿಹಾಸಿಕ ಯುದ್ಧ ಸಾರಿದಳು. 1858ರಲ್ಲಿ ಫೀಲ್ಡ್ ಮಾರ್ಷಲ್ ಹಗ್‌ಹೆನ್ರಿ ರೋಸ್ ನೇತೃತ್ವದಲ್ಲಿ ಬ್ರಿಟಿಷ್ ಸೈನ್ಯವು ಝಾನ್ಸಿ ಕೋಟೆಗೆ ಲಗ್ಗೆ ಹಾಕಿತು. ಝಾನ್ಸಿಯನ್ನು ಯಾವುದೇ ಕಾರಣಕ್ಕೂ ಬ್ರಿಟಿಷರಿಗೆ ಒಪ್ಪಿಸಬಾರದೆಂದು ಸಂಕಲ್ಪಹೊಂದಿದ್ದ ರಾಣಿ ಲಕ್ಷ್ಮೀಬಾಯಿ ತನ್ನ ನಂಬಿಗಸ್ತ ಸ್ತ್ರೀಪಡೆ ಮತ್ತು ದುರ್ಗಾಪಡೆ ಸೇರಿದಂತೆ ಬ್ರಿಟಿಷರ ವಿರುದ್ಧ ದಂಗೆಕೋರರನ್ನು ಎತ್ತಿಕಟ್ಟಿ ಯುದ್ಧ ಸಾರಲು ನಿರ್ಧರಿಸಿದಳು. ಈ ಕಾರ್ಯದಲ್ಲಿ ತ್ಯಾತ್ಯಾಟೋಪಿ ಮತ್ತು ನಾನಾ ಸಾಹೇಬರು ನೆರವು ನೀಡಿದ್ದರು. ಝಾನ್ಸಿಯ ಯುದ್ಧ ಎರಡು ವಾರದೊಳಗೆ ಸತತವಾಗಿ ನಡೆಯಿತು. ತನ್ನದೇ ಸೇನಾಧಿಪತಿಯ ಕುತಂತ್ರ ಮತ್ತು ರಾಜದ್ರೋಹದಿಂದ ಝಾನ್ಸಿಯ ಕೋಟೆ ಬ್ರಿಟಿಷರ ವಶವಾಗಿದ್ದು, ರಾಣಿ ಲಕ್ಷ್ಮೀಬಾಯಿಗೆ ಅತ್ಯಂತ ನೋವಿನ ಸಂಗತಿಯಾಗಿತ್ತು.

ದುಲ್ಹಾಜೂ ಠಾಕೂರ ಒಬ್ಬ ದೇಶದ್ರೋಹಿಯಾಗಿದ್ದನಲ್ಲದೆ ಯುದ್ಧ ನಡೆದ ಸಂದರ್ಭದಲ್ಲಿ ಝಾನ್ಸಿ ಕೋಟೆಯ ದಕ್ಷಿಣ ಹೆಬ್ಬಾಗಿಲು ಮೇಲುಸ್ತುವಾರಿ ವಹಿಸಿಕೊಂಡಿದ್ದ ಸೇನಾಧಿಪತಿಯಾಗಿದ್ದ. ಬ್ರಿಟಿಷರೊಂದಿಗೆ ಒಳ ಒಪ್ಪಂದ ಮಾಡಿಕೊಂಡು ಝಾನ್ಸಿ ರಾಣಿ ಲಕ್ಷ್ಮೀಬಾಯಿಗೆ ದ್ರೋಹವೆಸಗಿ ಬ್ರಿಟಿಷ್ ಪಡೆಗಳು ದಕ್ಷಿಣದ ಹೆಬ್ಬಾಗಿಲಿನಿಂದ ಕೋಟೆ ಪ್ರವೇಶಿಸಲು ಅನುವು ಮಾಡಿಕೊಟ್ಟಿದ್ದ. ಆತನ ಈ ಕುಕೃತ್ಯ ಮತ್ತು ಕುತಂತ್ರಕ್ಕೆ ಝಾನ್ಸಿ ಕೋಟೆ ಬಲಿಯಾಗಿದ್ದು ಐತಿಹಾಸಿಕ ದುರಂತ. ಝಾನ್ಸಿ ರಾಣಿ ಲಕ್ಷ್ಮೀಬಾಯಿ ತನ್ನ 4,000 ಸೈನಿಕರ ಪಡೆಯೊಂದಿಗೆ ಬ್ರಿಟಿಷರ ಮೇಲೆ ಯುದ್ಧವನ್ನು ಸಾರಿದಳು. ಈ ಸಂದಿಗ್ಧಮಯ ಪರಿಸ್ಥಿತಿಯಲ್ಲಿ ಕೋಟೆಯಲ್ಲಿ ಬೀಡು ಬಿಟ್ಟಿದ್ದ ಪೇಶ್ವೆ ನಾನಾ ಸಾಹೇಬರ ಸೈನ್ಯದ ನೆರವಿಗಾಗಿ ಕಾಯುತ್ತಿದ್ದರು. ಆ ಸೈನ್ಯವು ರಾಣಿ ಲಕ್ಷ್ಮೀಬಾಯಿಯ ನೆರವಿಗೆ ಬರಲು ಸಾಧ್ಯವಾಗಲಿಲ್ಲ. ಏಕೆಂದರೆ ಜನರಲ್ ರೋಸ್ ಈಗಾಗಲೇ ತ್ಯಾತ್ಯಾ ಟೋಪಿಯನ್ನು ಯುದ್ಧದಲ್ಲಿ ಸೋಲಿಸಿಬಿಟ್ಟಿದ್ದ. ಏತನ್ಮಧ್ಯೆ ಝಾನ್ಸಿಯ ಕೋಟೆಯೊಂದರ ಬಾಗಿಲನ್ನು ಉಸ್ತುವಾರಿ ವಹಿಸಿಕೊಂಡಿದ್ದ ದುಲ್ಹಾಜೂ ಠಾಕೂರ ಬ್ರಿಟಿಷರೊಂದಿಗೆ ಒಳ ಒಪ್ಪಂದ ಮಾಡಿಕೊಂಡು ಬ್ರಿಟಿಷ್ ಸೈನ್ಯ ಪ್ರವೇಶಿಸಲು ಕೋಟೆಯ ಬಾಗಿಲನ್ನು ತೆರೆದು ಬಿಟ್ಟ. ಆ ಬಾಗಿಲಿನಿಂದ ಕೋಟೆಯನ್ನು ಪ್ರವೇಶಿಸಿದ ಬ್ರಿಟಿಷ್ ಸೈನ್ಯವು ರಾಣಿ ಲಕ್ಷ್ಮೀಬಾಯಿಯ ಬೆನ್ನುಹತ್ತಿತು. ರಾಣಿ ಲಕ್ಷ್ಮೀಬಾಯಿ ಮತ್ತೊಂದು ಹೆಬ್ಬಾಗಿಲಿನಿಂದ ತಪ್ಪಿಸಿಕೊಂಡು ಪಾರಾಗುವಂತೆ ಸಲಹೆ ನೀಡಿದ ಸೈನ್ಯಾಧಿಕಾರಿಯ ಮಾತಿಗೆ ಒಪ್ಪಿರಾಣಿ ಲಕ್ಷ್ಮೀಬಾಯಿಯು ತಪ್ಪಿಸಿಕೊಂಡಳು.

ಬ್ರಿಟಿಷ್ ಕಮಾಂಡರ್ ಜನರಲ್ ರೋಸ್ ರಾಣಿ ಲಕ್ಷ್ಮೀಬಾಯಿಯನ್ನು ಜೀವಂತವಾಗಿ ಸೆರೆ ಹಿಡಿಯಬೇಕೆಂದು ನಿರ್ಧರಿಸಿದ್ದ. ಈ ಕಾರ್ಯದಲ್ಲಿ ಆತ ವಿಫಲನಾದ. ಏಕೆಂದರೆ ಲಕ್ಷ್ಮೀಬಾಯಿಯಂತೆ ಹೋಲುತ್ತಿದ್ದ ಝಲಕರಿಬಾಯಿಯು ಲಕ್ಷ್ಮೀಬಾಯಿಯ ಮಾರುವೇಷದಲ್ಲಿ ಸೈನ್ಯದ ನೇತೃತ್ವವನ್ನು ವಹಿಸಿಕೊಂಡು ಯುದ್ಧ ಭೂಮಿಯಲ್ಲಿ ರಾಣಿಯಂತೆ ಬ್ರಿಟಿಷ್ ಪಡೆಗಳ ವಿರುದ್ಧ ಕಾದಾಡಿ ರಾಣಿ ಲಕ್ಷ್ಮೀಬಾಯಿಯು ಯುದ್ಧ ಭೂಮಿಯಿಂದ ಪಾರಾಗುವಂತೆ ಮಾಡಿದ್ದಳು. ಇದರಿಂದಾಗಿ ಸಹಜವಾಗಿಯೇ ಬ್ರಿಟಿಷ್ ಕಮಾಂಡರ್ ಜನರಲ್ ರೋಸ್ ಝಲಕರಿಬಾಯಿಯ ಬಗ್ಗೆ ಕೆಂಡಾಮಂಡಲವಾಗಿದ್ದ.

ರಾಣಿ ಲಕ್ಷ್ಮೀಬಾಯಿಯ ಸೈನ್ಯದ ನೇತೃತ್ವವಹಿಸಿದ್ದ ದಂಡಾಧಿಪತಿಯೇ ಪಿತೂರಿ ನಡೆಸಿದ್ದರಿಂದಾಗಿ ಝಾನ್ಸಿಗೆ ಸೋಲು ಖಚಿತವಾದುದೆಂದು ಪರಿಭಾವಿಸಲಾಯಿತು. ಬ್ರಿಟಿಷರ ರಾಜತಾಂತ್ರಿಕ ಕೌಶಲ್ಯ ಮತ್ತು ಕುತಂತ್ರದಿಂದ ತನಗೆ ಸೋಲು ಖಚಿತವೆಂದು ಭಾವಿಸಿದ್ದ ಸೈನ್ಯದ ನೇತೃತ್ವ ವಹಿಸಿದ್ದ ಇತರ ಸೈನ್ಯಾಧಿಕಾರಿಗಳ ರಾಜಕೀಯ ಸಲಹೆಯ ಮೇರೆಗೆ ಯುದ್ಧದಿಂದ ಪಾರಾಗುವುದು ಅನಿವಾರ್ಯವಾಯಿತು. ಇಂತಹ ಸಂದಿಗ್ಧಮಯ ಪರಿಸ್ಥಿತಿಯ ಘೋರ ಪರಿಣಾಮವನ್ನರಿತ ರಾಣಿ ಲಕ್ಷ್ಮೀಬಾಯಿಯು ತನ್ನ ಕುದುರೆಯನ್ನೇರಿ ಅಲ್ಲಿಂದ ಪಾರಾದಳು. ಯಾವಾಗ ರಾಣಿ ಲಕ್ಷ್ಮೀಬಾಯಿಗೆ ಯುದ್ಧ ಭೂಮಿಯಿಂದ ನಿರ್ಗಮಿಸಿ ಪ್ರಾಣ ಕಾಪಾಡಿಕೊಳ್ಳುವುದು ಅನಿವಾರ್ಯವಾಯಿತೋ ಆಗ ರಾಣಿಯಂತೆ ಕಾಣುತ್ತಿದ್ದ ಝಲಕರಿಬಾಯಿಯು ಯುದ್ಧದ ನೇರ ನೇತೃತ್ವ ವಹಿಸಿಕೊಂಡಳು.

ಇಡೀ ಝಾನ್ಸಿಯ ಕೋಟೆ ಕೊತ್ತಲಗಳಲ್ಲಿ ಯುದ್ಧದ ಭಯಂಕರ ವಾತಾವರಣ ಸೃಷ್ಟಿಯಾಯಿತು. ಮಾತ್ರವಲ್ಲ, ಗೊಂದಲ ಮತ್ತು ಆತಂಕ ಮನೆ ಮಾಡಿಕೊಂಡಿತು. ರಾಣಿ ಲಕ್ಷ್ಮೀಬಾಯಿ ತಪ್ಪಿಸಿಕೊಂಡು ಕೋಟೆಯಿಂದ ಪಾರಾದ ಸುದ್ದಿ ಝಲಕರಿಬಾಯಿಗೆ ತಿಳಿಯುತ್ತಿದ್ದಂತೆ ಝಲಕರಿ ಬಾಯಿಯು ರಾಣಿ ಲಕ್ಷ್ಮೀಬಾಯಿಯ ಮಾರುವೇಷದಲ್ಲಿ ಇಡೀ ಸೈನ್ಯದ ನೇತೃತ್ವವನ್ನು ವಹಿಸಿ ಕೊಂಡು ಜನರಲ್ ರೋಸ್‌ನ ಶಿಬಿರ ದೆಡೆಗೆ ನಡೆದಳು. ತಾನೇ ಲಕ್ಷ್ಮೀಬಾಯಿ ಎಂದು ಘೋಷಿಸಿ ಕೊಂಡಳು. ರಾಣಿ ಲಕ್ಷ್ಮೀಬಾಯಿಯಂತೆ ಮಾರುವೇಷದಲ್ಲಿದ್ದ ಝಲಕರಿಬಾಯಿಯನ್ನು ಪತ್ತೆಹಚ್ಚಲು ಬ್ರಿಟಿಷರಿಗೆ ಇಡೀ ದಿವಸ ಸಾಧ್ಯವಾಗಲಿಲ್ಲ. ಅದೇ ಹೊತ್ತಿಗೆ ಜನರಲ್ ರೋಸ್‌ನ ಸೈನಿಕರ ಶಿಬಿರಕ್ಕೆ ಬಂದ ದುಲ್ಹಾಜೂ ಠಾಕೂರ ಈಕೆ ರಾಣಿ ಲಕ್ಷ್ಮೀಬಾಯಿಯಲ್ಲ. ಲಕ್ಷ್ಮೀಬಾಯಿಯಂತೆ ಮಾರುವೇಷದಲ್ಲಿರುವ ಝಲಕರಿಬಾಯಿಯೆಂದು ಗುರುತಿಸಿದ. ಥೇಟ್ ರಾಣಿ ಲಕ್ಷ್ಮೀಬಾಯಿಯ ಹೋಲಿಕೆ ಹೊಂದಿದ್ದ ಝಲಕರಿಬಾಯಿಯನ್ನು ನೋಡಿದ ಬ್ರಿಟಿಷ್ ಸೈನ್ಯವು ತೀವ್ರವಾಗಿ ಗೊಂದಲಕ್ಕೀಡಾಯಿತು. ರಣಚಂಡಿಯಂತೆ ಕಂಗೊಳಿಸುತ್ತಿದ್ದ ಝಲಕರಿ ಬಾಯಿಯನ್ನು ಉದ್ದೇಶಿಸಿ ನಿನಗೆ ಯಾವ ಶಿಕ್ಷೆ ವಿಧಿಸಬೇಕೆಂದು ಜನರಲ್ ರೋಸ್ ಕೇಳಿದ್ದಕ್ಕೆ ತನಗೆ ಮರಣ ದಂಡನೆಯನ್ನು ವಿಧಿಸುವಂತೆ ಸೂಚಿಸಿ ತನ್ನ ನೇರ ನೋಟದಿಂದ ರೋಸ್‌ನನ್ನು ದಿಟ್ಟಿಸಿದಳು. ಝಲಕರಿ ಬಾಯಿಯ ವೀರಾವೇಶದ ಮಾತುಗಳನ್ನು ಕೇಳಿದ ಬ್ರಿಟಿಷ್ ಜನರಲ್ ಶೇ. ಒಂದರಷ್ಟು ಭಾರತೀಯ ಮಹಿಳೆಯರು ಈ ರೀತಿ ವೀರಾವೇಶದಿಂದ ಹೋರಾಟ ಮಾಡುವುದಾದರೆ ಬ್ರಿಟಿಷರಿಗೆ ಉಳಿಗಾಲವಿಲ್ಲವೆಂದು ಉದ್ಗರಿಸಿ ಝಲಕರಿಬಾಯಿಯ ಶೌರ್ಯವನ್ನು ಮೆಚ್ಚಿಕೊಂಡ. ಆಕೆಯ ಸಾವಿನ ಬಗ್ಗೆ ನಿಖರವಾದ ಮತ್ತು ಖಚಿತವಾದ ದಾಖಲೆಗಳಿಲ್ಲ. ಕೆಲವು ಮೂಲಗಳ ಪ್ರಕಾರ ಝಲಕರಿ 1858ರಲ್ಲಿ ಮೃತಪಟ್ಟಿರುವಳೆಂದು ಹೇಳಿದರೆ ಇನ್ನೂ ಕೆಲವು ಆಧಾರಗಳ ಪ್ರಕಾರ ಆಕೆಯನ್ನು ಬ್ರಿಟಿಷರು ಮುಕ್ತಗೊಳಿಸಿದರು ಮತ್ತು ಆಕೆ 1890ರಲ್ಲಿ ಮರಣ ಹೊಂದಿರುವಳೆಂದು ತಿಳಿದು ಬರುತ್ತದೆ.

ಝಲಕರಿಬಾಯಿ ಪರಂಪರೆ
ಝಲಕರಿಬಾಯಿಯ ಶೌರ್ಯ ಮತ್ತು ಸಾಹಸಗಳನ್ನು ಇತ್ತೀಚಿನವರೆಗೂ ಇತಿಹಾಸಕಾರರು ಮರೆ ಮಾಚಿದ್ದು ದುರಂತವೇ ಸರಿ. ಇತ್ತೀಚಿನ ಕೆಲವು ದಶಕಗಳಲ್ಲಿ ಪರ್ಯಾಯ ಸಂಸ್ಕೃತಿ ಶೋಧನೆಯ ಭಾಗವಾಗಿ ದಲಿತ ತಳಸಮುದಾಯದ ಸಾಧಕರ ಬಗ್ಗೆ ಬೆಳಕು ಚೆಲ್ಲುವ ನಿರಂತರ ಪ್ರಯತ್ನದ ಫಲವಾಗಿ ಝಲಕರಿಬಾಯಿಯ ಶೌರ್ಯ, ಸಾಹಸ ಮತ್ತು ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ ಇತಿಹಾಸವನ್ನೂ ಮರು ಸೃಷ್ಟಿಸಲಾಗುತ್ತಿದೆ. ಝಲಕರಿಬಾಯಿಯ ಪುತ್ಥಳಿಯನ್ನು ಗ್ವಾಲಿಯರ್‌ನಲ್ಲಿ 2001ರಲ್ಲಿ ಸ್ಥಾಪಿಸಲಾಗಿದೆ. ಝಲಕರಿಬಾಯಿ ತನ್ನ ದೇಶ ವಾಸಿಗಳು ಮತ್ತು ದೇಶದ ಸಾರ್ವಭೌಮತೆಗಾಗಿ ವೀರಾವೇಶದಿಂದ ಹೋರಾಡಿದ್ದರ ನೆನಪಿಗಾಗಿ ಭಾರತ ಸರಕಾರವು ಆಕೆಯ ಗೌರವಾರ್ಥ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿದೆ.
1857ರ ಕ್ರಾಂತಿಕಾರಿ ಝಲಕರಿಬಾಯಿ ಎನ್ನುವ ಪುಸ್ತಕವನ್ನು ಹಿಂದಿಯಲ್ಲಿ ಕಿಶನ್‌ಕಮಲ ಬರೆದಿದ್ದಾರೆ. ಈ ಗ್ರಂಥದಲ್ಲಿ ಝಲಕರಿಬಾಯಿಯ ಜೀವನ ಮತ್ತು ಸಾಹಸಗಾಥೆಯನ್ನು ದಾಖಲಿಸಲಾಗಿದೆ.

ಇತ್ತೀಚಿನ ದಶಕಗಳಲ್ಲಿ ಇತಿಹಾಸದಲ್ಲಿ ಮರೆಮಾಚಿದ್ದ ಝಲಕರಿಬಾಯಿಯ ಸಾಹಸಗಾಥೆಯನ್ನು ಮುನ್ನೆಲೆಗೆ ತರುವ ಪ್ರಯತ್ನ ನಡೆಯುತ್ತಿದೆ. ಸಮಾಜೋ ರಾಜಕೀಯ ಮಹತ್ವವನ್ನು ಹೊಂದಿರುವ ಝಲಕರಿಬಾಯಿಯ ಶೌರ್ಯ ಮತ್ತು ತ್ಯಾಗಗಳು ಐತಿಹಾಸಿಕ ಮಹತ್ವವನ್ನು ಹೊಂದಿವೆ. ಉತ್ತರ ಭಾರತದಲ್ಲಿ ತಳಮೂಲದ ಅಸ್ಪಶ್ಯ ಕೋರಿ ಸಮುದಾಯವು ಝಲಕರಿಬಾಯಿಯನ್ನು ತಮ್ಮ ಅಸ್ಮಿತೆಯ ಭಾಗವೆಂದು ಪರಿಗಣಿಸುತ್ತದೆ. ಕೋರಿ ಸಮುದಾಯದ ಸಂಘಟನೆಗಳು ಝಲಕರಿಬಾಯಿಯ ಪುಣ್ಯ ತಿಥಿಯನ್ನು ‘ಶಹೀದ ದಿವಸ್’ (ಹುತಾತ್ಮರ ದಿನ) ಎಂದು ಆಚರಿಸುತ್ತಿವೆ. ಬುಂದೇಲಖಂಡ ಪ್ರತ್ಯೇಕ ರಾಜ್ಯದ ರಚನೆಯಲ್ಲಿ ಝಲಕರಿಬಾಯಿಯ ಪರಂಪರೆಯನ್ನು ಉಲ್ಲೇಖಿಸಲಾಗುತ್ತಿದೆ.

ಉತ್ತರ ಭಾರತದಲ್ಲಿ ಝಲಕರಿಬಾಯಿಯ ಜನ್ಮ ದಿನೋತ್ಸವವನ್ನು ಸಮುದಾಯದ ಗೌರವ ಅಥವಾ ಪ್ರತಿಷ್ಠೆಯೆಂದು ಗೌರವಿಸುತ್ತದೆ. ಭಾರತೀಯ ಪ್ರಾಚ್ಯವಸ್ತು ಸರ್ವೇಕ್ಷಣಾ ಸಂಸ್ಥೆ ಝಾನ್ಸಿಯ ಕೋಟೆಯಲ್ಲಿರುವ ಐದು ಅಂತಸ್ತಿನ ಪಂಚ್ ಮಹಲಿನಲ್ಲಿ ವಸ್ತು ಸಂಗ್ರಹಾಲಯವನ್ನು ಸ್ಥಾಪಿಸಿ ಝಲಕರಿಬಾಯಿಯ ಸಾಹಸ, ಶೌರ್ಯ ಮತ್ತು ತ್ಯಾಗವನ್ನು ಮುಂದಿನ ಪೀಳಿಗೆಗೆ ಪರಿಚಯಿಸುತ್ತಿದೆ. ಪಿ. ಎಲ್. ವರ್ಮಾ ಎಂಬವರು ತಮ್ಮ ಕಾದಂಬರಿಯಲ್ಲಿ ಕೋರಿ ಸಮುದಾಯದ ಝಲಕರಿಬಾಯಿಯ ಶೌರ್ಯ, ಸಾಹಸಗಳನ್ನು ದಾಖಲಿಸಿದ್ದಾರೆ. ರಾಮಚಂದ್ರ ಹೇರಾಸ ಎಂಬವರು ತಮ್ಮ ಕಾದಂಬರಿ ‘ಮಾಟಿ’ಯಲ್ಲಿ ಝಲಕರಿಬಾಯಿಯ ಶೌರ್ಯ, ಸಾಹಸಗಳನ್ನು ಕೊಂಡಾಡಿದ್ದಾರೆ. 1964ರಲ್ಲಿ ಭವಾನಿಶಂಕರ ವಿಶಾರದರವರು ಝಲಕರಿಬಾಯಿಯ ಜೀವನ ವೃತ್ತಾಂತವನ್ನು ಪ್ರಕಟಿಸಿದ್ದಾರೆ. ಈ ಇಡೀ ಕಾದಂಬರಿಯನ್ನು ಬುಂದೇಲಖಂಡದ ಭಾಗ ಮತ್ತು ಝಾನ್ಸಿಯ ಸುತ್ತಮುತ್ತಲು ಇರುವ ಮೌಖಿಕ ಪರಂಪರೆಯ ಆಧಾರದ ಮೇಲೆ ರಚಿಸಲಾಗಿದೆ. ಝಲಕರಿಬಾಯಿಯ ಪುತ್ಥಳಿಯನ್ನು ಭೂಪಾಲ್‌ನ ಗುರುತೇಜ್ ಬಹದ್ದೂರ್ ಸಂಕೀರ್ಣದಲ್ಲಿ ನವೆಂಬರ್ 10, 2017ರಂದು ಸ್ಥಾಪಿಸಲಾಗಿದೆ.

Writer - ಸದಾಶಿವ ಮರ್ಜಿ, ಧಾರವಾಡ

contributor

Editor - ಸದಾಶಿವ ಮರ್ಜಿ, ಧಾರವಾಡ

contributor

Similar News