ಭಾರತದ ಮಹಿಳಾ ಫುಟ್ಬಾಲ್ ತಂಡ ತರಬೇತಿ ಶಿಬಿರಕ್ಕೆ ಸಜ್ಜು

Update: 2020-11-21 17:51 GMT

ಹೊಸದಿಲ್ಲಿ, ನ.21: ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ಲಾಕ್‌ಡೌನ್ ನಂತರ ಸ್ಥಗಿತಗೊಂಡಿದ್ದ ಭಾರತದ ರಾಷ್ಟ್ರೀಯ ಮಹಿಳಾ ಫುಟ್ಬಾಲ್ ತಂಡವು ಡಿಸೆಂಬರ್ 1ರಂದು ಗೋವಾದಲ್ಲಿ ತಮ್ಮ ಮೊದಲ ತರಬೇತಿ ಶಿಬಿರವನ್ನು ಪ್ರಾರಂಭಿಸಲಿದೆ.

ಭಾರತದಲ್ಲಿ ಆತಿಥ್ಯ ವಹಿಸಲಿರುವ 2022ರ ಎಎಫ್‌ಸಿ ಮಹಿಳಾ ಏಶ್ಯನ್ ಕಪ್ ಸಿದ್ಧತೆಗಳನ್ನು ಪ್ರಾರಂಭಿಸಲು ಮೂವತ್ತು ಆಟಗಾರ್ತಿಯರನ್ನು ಮುಖ್ಯ ಕೋಚ್ ಮೇಮೋಲ್ ರಾಕಿ ಶಿಬಿರಕ್ಕೆ ಆಯ್ಕೆ ಮಾಡಿದ್ದಾರೆ.

ತಂಡದ ತರಬೇತಿಯನ್ನು ಪುನರಾರಂಭಿಸಲು ವಿವರವಾದ ಸ್ಟಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ (ಎಸ್‌ಒಪಿ) ಸಿದ್ಧಪಡಿಸಲಾಗಿದೆ. ಇದು ಹಲವಾರು ಕೋವಿಡ್ -19 ಶಿಷ್ಟಾಚಾರಗಳು ಮತ್ತು ಮಾರ್ಗಸೂಚಿಗಳನ್ನು ಸಮಗ್ರ ರೀತಿಯಲ್ಲಿ ತಿಳಿಸುತ್ತದೆ.

ಎಐಎಫ್‌ಎಫ್‌ನ ರಾಷ್ಟ್ರೀಯ ತಂಡಗಳ ನಿರ್ದೇಶಕ ಅಭಿಷೇಕ್ ಯಾದವ್ ಅವರು ತಂಡವು ‘‘ಆದಷ್ಟು ಬೇಗ ಕ್ರೀಡಾಂಗಣಕ್ಕೆ ಮರಳಲು ಉತ್ಸುಕವಾಗಿದೆ’’ ಎಂದು ತಿಳಿಸಿದ್ದಾರೆ.

‘‘ಆಟಗಾರರ ಮತ್ತು ಸಿಬ್ಬಂದಿಯ ಸುರಕ್ಷತೆಯು ಅತ್ಯಂತ ಮಹತ್ವದ್ದಾಗಿದೆ ಮತ್ತು ನಮ್ಮ ತಂಡದ ಸುರಕ್ಷತೆಯೊಂದಿಗೆ ವ್ಯವಹರಿಸುವಾಗ ಯಾವುದೇ ತಪ್ಪಿಗೆ ಅವಕಾಶವಿಲ್ಲ ’’ಎಂದು ಯಾದವ್ ಒತ್ತಿ ಹೇಳಿದರು.

‘‘ನಾವು ಭಾರತ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ಭಾರತದ ಕ್ರೀಡಾ ಪ್ರಾಧಿಕಾರ (ಎಸ್‌ಎಐ), ನಮ್ಮ ವೈದ್ಯಕೀಯ ತಂಡ ಮತ್ತು ಸಹಸಂಸ್ಥೆಗಳು ನಿಗದಿಪಡಿಸಿದ ಶಿಷ್ಟಾಚಾರಗಳನ್ನು ಗಣನೆಗೆ ತೆಗೆದುಕೊಂಡು ಸುರಕ್ಷತಾ ಶಿಷ್ಟಾಚಾರಗಳನ್ನು ನಾವು ರೂಪಿಸಿದ್ದೇವೆ ’’ಎಂದು ಯಾದವ್ ತಿಳಿಸಿದರು.

ಸ್ಟಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ (ಎಸ್‌ಒಪಿ) ಪ್ರಕಾರ ಆಟಗಾರರು ಮತ್ತು ಬೆಂಬಲ ಸಿಬ್ಬಂದಿ ತಮ್ಮ ತವರಿನಿಂದ ನಿರ್ಗಮಿಸುವ ಮೊದಲು ಐಸಿಎಂಆರ್ ಮಾನ್ಯತೆ ಪಡೆದ ಪ್ರಯೋಗಾಲಯದಲ್ಲಿ ಕೋವಿಡ್ ಪರೀಕ್ಷೆಯನ್ನು (ಆರ್‌ಟಿ-ಪಿಸಿಆರ್) ನಡೆಸಬೇಕು.

ಆರ್‌ಎಟಿ-ಪಿಸಿಆರ್ ಪರೀಕ್ಷಾ ಫಲಿತಾಂಶವು ನಕಾರಾತ್ಮಕವಾಗಿದ್ದರೆ ಅವರು ಅಗತ್ಯ ಮುನ್ನೆಚ್ಚರಿಕೆ ಗಳೊಂದಿಗೆ ಪ್ರಯಾಣಿಸಲು ಅವಕಾಶ ಮಾಡಿಕೊಡಲಾಗುವುದು.

ಗೋವಾವನ್ನು ತಲುಪಿದ ನಂತರ ರ್ಯಾಪಿಡ್ ಆ್ಯಂಟಿಜೆನ್ ಟೆಸ್ಟ್ (ಆರ್‌ಎಟಿ) ಮಾಡಬೇಕಾಗಿದೆ ಮತ್ತು ಫಲಿತಾಂಶವು ನಕಾರಾತ್ಮಕವಾಗಿದ್ದರೆ, ಅವರು ಏಳು ದಿನಗಳ ಕೊಠಡಿ ಸಂಪರ್ಕತಡೆಯನ್ನು ಆಯಾ ಕೋಣೆಗಳಲ್ಲಿ ಮುಂದುವರಿಸಬಹುದು.

ಕೋವಿಡ್- 19ರ ಯಾವುದೇ ಚಿಹ್ನೆಗಳು ಅಥವಾ ರೋಗಲಕ್ಷಣಗಳಿಲ್ಲದೆ ಯಶಸ್ವಿ ಸಂಪರ್ಕತಡೆಯನ್ನು ಹೊಂದಿದ ನಂತರ, ತರಬೇತಿಗೆ ಸೇರುವ ಮೊದಲು, ಅವರ ಆಗಮನದ ನಂತರ 8ನೇ ದಿನದಂದು ರ್ಯಾಪಿಡ್ ಆ್ಯಂಟಿಜೆನ್ ಟೆಸ್ಟ್ ಎದುರಿಸಬೇಕಾಗುತ್ತದೆ.

ಎಸ್‌ಒಪಿ ಪ್ರಕಾರ ಶಿಬಿರದ ಪುನರಾರಂಭವು ಸ್ಥಳೀಯ ಅಧಿಕಾರಿಗಳು ರೂಪಿಸಿರುವ ಮಾರ್ಗಸೂಚಿಗಳಿಗೆ ಅನುಗುಣವಾಗಿರುತ್ತದೆ. ಶಿಬಿರಕ್ಕೆ ಆಯ್ಕೆಯಾದ ಆಟಗಾರ್ತಿಯರ ಪಟ್ಟಿ ಇಂತಿವೆ.

►ಗೋಲ್‌ಕೀಪರ್‌ಗಳು: ಅದಿತಿ ಚೌಹಾನ್, ಎಲಂಗ್‌ಬಾಮ್ ಪಂಥೋಯಿ ಚಾನು, ಮೈಬಾಮ್ ಲಿಂಥೊಯಿಂಗಂಬಿ ದೇವಿ, ನಾರಾಯಣಸ್ವಾಮಿ ಸೌಮ್ಯ.

►ಡಿಫೆಂಡರ್ಸ್: ಅಸೆಮ್ ರೋಜಾ ದೇವಿ, ಜಬಮಣಿ ಟುಡು, ಲೊಯೊಟೊಂಗ್‌ಬಾಮ್ ಅಶಾಲತಾ ದೇವಿ, ಎನ್‌ಗಂಗ್‌ಬಾಮ್ ಸ್ವೀಟಿ ದೇವಿ, ರುತು ರಾಣಿ, ಸೊರೊಖೈಬಮ್ ರಂಜನಾ ಚಾನು, ಮೈಕೆಲ್ ಮಾರ್ಗರೇಟ್ ಕ್ಯಾಸ್ಟನ್ಹಾ, ವಾಂಗ್‌ಖೆಮ್ ಲಿಂಥೊಯಿಂಗಂಬಿ ದೇವಿ, ಪಾಕ್ಪಿದೇವಿ ಯಮ್ಲೆಂಬಮ್

►ಮಿಡ್‌ಫೀಲ್ಡರ್ಸ್: ಗ್ರೇಸ್ ಹೌಹ್ನರ್ ಲಾಲ್‌ರಂಪಾರಿ, ಮನೀಶಾ, ನೊಂಗ್ಮೈಥೆಮ್ ರತನ್‌ಬಾಲಾ ದೇವಿ, ಸಂಗೀತಾ ಬಸ್‌ಫೋರ್, ಕಾರ್ತಿಕಾ ಅಂಗಮುತ್ತು, ಸುಮಿತ್ರಾ ಕಾಮರಾಜ್, ಕಾಶ್ಮೀನಾ, ಪಿಯಾರಿ ಕ್ಸಾಕ್ಸಾ

►ಫಾರ್ವರ್ಡ್ಸ್: ಜ್ಯೋತಿ, ಅಂಜು ತಮಾಂಗ್, ಡಂಗ್ಮೇ ಗ್ರೇಸ್, ಕರಿಷ್ಮಾ ಪುರುಷೋತ್ತಮ್ ಶಿರ್ವೊಯಿಕರ್, ಸಂಧಿಯಾ ರಂಗನಾಥನ್, ರೇಣು, ಜ್ಯೋತಿ, ಸೌಮ್ಯ ಗುಗುಲೋತ್, ಹೈಗ್ರುಜಮ್ ದಯಾ ದೇವಿ

►ಹೆಡ್ ಕೋಚ್: ಮೇಮೋಲ್ ರಾಕಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News