ಕಡಲತೀರದಲ್ಲಿ ಅಚ್ಚರಿ ಮೂಡಿಸುತ್ತಿರುವ ನೀಲಿ ಬಣ್ಣದ ಬೆಳಕು!

Update: 2020-11-22 05:31 GMT

ಉಡುಪಿ: ಕಳೆದ ಕೆಲವು ದಿನಗಳಿಂದ ಮಲ್ಪೆ ಪಡುಕೆರೆ ಸೇರಿದಂತೆ ಕರಾವಳಿ ಕರ್ನಾಟಕದ ಕೆಲವು ಸಮುದ್ರ ತೀರಗಳು ರಾತ್ರಿ ವೇಳೆ ನೀಲಿ ಬಣ್ಣ ದಿಂದ ರೇಡಿಯಂನಂತೆ ಹೊಳೆಯುತ್ತಿರುವುದು ಕಂಡುಬರುತ್ತಿದೆ. ಈ ಅಚ್ಚರಿಯ ಬೆಳವಣಿಗೆಗೆ ಸಮುದ್ರದಲ್ಲಿ ಸೂಕ್ಷ್ಮಜೀವಿಗಳ ಸಂಖ್ಯೆ ವ್ಯಾಪಕವಾಗಿ ಹೆಚ್ಚಳ ಆಗಿರುವುದೇ ಕಾರಣ ಎಂಬುದು ಕಡಲ ಜೀವಶಾಸ್ತ್ರ ತಜ್ಞರ ಅಭಿಪ್ರಾಯ. ತೀರಕ್ಕೆ ಸಮುದ್ರ ಅಲೆಗಳು ಅಪ್ಪಳಿಸುವಾಗ ಮತ್ತು ಅಲೆಯ ನೀರು ಇಳಿದು ಹೋದ ಮರಳಿನಲ್ಲಿ ನಡೆದಾಗ ಈ ರೀತಿಯ ನೀಲಿ ಬಣ್ಣದ ಬೆಳಕು ಕಾಣ ಸಿಗುತ್ತಿದೆ. ಬೀಚ್‌ನಲ್ಲಿ ವಾಯು ವಿಹಾರಕ್ಕೆ ಹೋದವರು ಈ ಅಪರೂಪದ ದೃಶ್ಯ ಕಂಡು ಅಚ್ಚರಿ ಪಡುತ್ತಿದ್ದಾರೆ. ಇದು ಸಮುದ್ರದಲ್ಲಿ ಸಾಮಾನ್ಯವಾಗಿ ನಡೆಯುವ ಪ್ರಕ್ರಿಯೆಯಾದರೂ ಸ್ಥಳೀಯರಲ್ಲಿ ಈ ಬಗ್ಗೆ ಸಾಕಷ್ಟು ಕುತೂಹಲ ಮೂಡಿದೆ.

‘ನಾಕ್ಟಿಲುಕ ಸಿಂಟಿಲನ್ಸ್’ ಎಂಬ ಸೂಕ್ಷ್ಮ ಏಕಕೋಶ ಜೀವಿಯಿಂದಾಗಿ ಸಮುದ್ರ ಹಗಲಿನಲ್ಲಿ ಹಸಿರು ಮತ್ತು ರಾತ್ರಿ ವೇಳೆ ನೀಲಿ ಬಣ್ಣದಿಂದ ಹೊಳೆಯುತ್ತದೆ. ಈ ಜೀವಿಯು ಸಮುದ್ರದಲ್ಲಿ ತುಂಬಾ ವ್ಯಾಪಕ ಪ್ರಮಾಣದಲ್ಲಿ ಬೆಳೆಯುತ್ತದೆೆ. ಹೀಗೆ ಬಹಳ ದೊಡ್ಡ ಸಂಖ್ಯೆಯಲ್ಲಿ ಈ ಜೀವಿ ಬೆಳೆದಿರುವುದರಿಂದ ರಾತ್ರಿ ವೇಳೆ ಅಲೆಯ ಹೊಡೆತಕ್ಕೆ ಒತ್ತಡದಲ್ಲಿ ಇವು ಮಿಂಚುಹುಳದಂತೆ ನೀಲಿ ಬಣ್ಣದ ಬೆಳಕನ್ನು ಸೂಸುತ್ತಿವೆ. ಇದಕ್ಕೆ ಬಯೋ ಲಿಮಿನಸ್ ಎಂದು ಕರೆಯಲಾಗುತ್ತದೆ.

‘ಈ ಏಕಕೋಶ ಜೀವಿ ಆಹಾರವನ್ನು ಸೇವಿಸುವುದಿಲ್ಲ. ಬದಲಿಗೆ ಇವುಗಳಿಗೆ ಪೋಷಕಾಂಶಗಳು ಅಗತ್ಯವಾಗಿರುತ್ತದೆ. ಇದರೊಂದಿಗೆ ಇರುವ ಹಸಿರು ಬಣ್ಣದ ಸೂಕ್ಷ್ಮಜೀವಿಗಳು ಇದಕ್ಕೆ ಪೋಷಕಾಂಶಗಳನ್ನು ಸರಬರಾಜು ಮಾಡುತ್ತವೆ’ ಎಂದು ಕಾರವಾರ ಕರ್ನಾಟಕ ವಿವಿಯ ಕಡಲ ಜೀವಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಶಿವಕುಮಾರ್ ಹರಗಿ ತಿಳಿಸಿದ್ದಾರೆ.

ಮತ್ಸಕ್ಷಾಮಕ್ಕೂ ಸಂಬಂಧ: ನೀಲಿ ಬಣ್ಣದ ಸಮುದ್ರದ ಅಲೆಗಳು ಕಾರವಾರದಲ್ಲಿ 2017ರಿಂದ ನಿರಂತರವಾಗಿ ಕಾಣಸಿಗುತ್ತಿವೆ. ಈ ತಿಂಗಳಲ್ಲಿ ಕಂಡುಬರುವ ಈ ಪ್ರಕ್ರಿಯೆ, ಮತ್ತೆ ಮಾರ್ಚ್‌ನಲ್ಲಿಯೂ ನೋಡಲು ಸಿಗುತ್ತದೆ. ಮಂಗಳೂರಿನಲ್ಲಿ 2012ರಲ್ಲಿ ಈ ನೀಲಿ ಬೆಳಕಿನ ಸಮುದ್ರತೀರ ಕಾಣಿಸಿ ಕೊಂಡಿತ್ತು.

‘ಇಂದು ಸಮುದ್ರದಲ್ಲಿ ಬಂಗುಡೆ ಮತ್ತು ಬೂತಾಯಿ ಮೀನುಗಳ ಸಂಖ್ಯೆ ಕಡಿಮೆ ಆಗಲು ಇದೇ ಸೂಕ್ಷ್ಮಜೀವಿಗಳು ಕಾರಣ ಇರಬಹುದು ಎಂಬ ಅಂಶ ಮೇಲ್ನೋಟಕ್ಕೆ ಕಂಡುಬರುತ್ತದೆ. ಮತ್ಸಕ್ಷಾಮಕ್ಕೂ ಈ ಸೂಕ್ಷ್ಮಜೀವಿಗಳ ಹೆಚ್ಚಳಕ್ಕೂ ಸಂಬಂಧ ಇದೆಯೇ ಎಂಬುದರ ಬಗ್ಗೆ ಸಮುಗ್ರ ಅಧ್ಯಯನ ನಡೆಯಬೇಕಾಗಿದೆ. ಸದ್ಯ ಕೋವಿಡ್ ಕಾರಣದಿಂದ ಇದರ ಅಧ್ಯಯನ ಕಾರ್ಯ ಸ್ಥಗಿತಗೊಂಡಿದೆ’ ಎಂದು ಡಾ.ಶಿವಕುಮಾರ್ ಹರಗಿ ತಿಳಿಸಿದ್ದಾರೆ. ಈ ಸೂಕ್ಷ್ಮಜೀವಿಗಳನ್ನು ಬಂಗುಡೆ ಮತ್ತು ಬೂತಾಯಿಯಂತಹ ಮೀನುಗಳು ಸೇವಿಸುತ್ತವೆ. ಇದರಿಂದ ಈ ಸೂಕ್ಷ್ಮಜೀವಿಗಳ ಸಂಖ್ಯೆ ನಿಯಂತ್ರಣದಲ್ಲಿ ಇರುತ್ತಿತ್ತು. ಆದರೆ ಈಗ ಬೂತಾಯಿ ಮತ್ತು ಬಂಗುಡೆ ಮೀನುಗಳ ಸಂಖ್ಯೆ ಕಡಿಮೆ ಆಗಿರುವ ಪರಿಣಾಮ ಈ ಸೂಕ್ಷ್ಮ ಜೀವಿಗಳ ಸಂಖ್ಯೆ ವೃದ್ಧಿಸುತ್ತಿರಬಹುದು ಎಂದು ಅಂದಾಜಿಸಲಾಗಿದೆ. ಇದೆಲ್ಲವೂ ಅಧ್ಯಯನದಿಂದ ಸ್ಪಷ್ಟವಾಗಿ ತಿಳಿದುಬರಬೇಕಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ‘ಈ ಬಗ್ಗೆ ಅಧ್ಯಯನ ನಡೆಸಲಾಗುತ್ತಿದ್ದು, ನಮ್ಮಲ್ಲಿ ಸಮುದ್ರದಲ್ಲಿರುವ ಎಲ್ಲ ಜಾತಿಯ ಮೀನುಗಳನ್ನು ತಂದು ಪರಿಶೀಲನೆ ನಡೆಸಲಾಗುತ್ತಿದೆ. ಆದರೆ ಬಂಗುಡೆ ಮೀನುಗಳ ಹೊಟ್ಟೆಯಲ್ಲಿ ಮಾತ್ರ ಈ ಸೂಕ್ಷ್ಮಜೀವಿಗಳು ಕಂಡು ಬಂದಿವೆ. ಆದುದರಿಂದ ಈಗ ಬಂಗುಡೆ ಮೀನಿಗೂ ಈ ಸೂಕ್ಷ್ಮ ಜೀವಿಗಳಿಗೂ ಸಂಬಂಧ ಇದೆಯೇ ಎಂಬುದರ ಬಗ್ಗೆ ಅಧ್ಯಯನ ಮಾಡಬೇಕಾಗಿದೆ ಎಂದು ಅವರು ತಿಳಿಸಿದ್ದಾರೆ.

ಒತ್ತಡದಿಂದ ನೀಲಿ ಬಣ್ಣದ ಬೆಳಕು ಸೃಷ್ಟಿ

ಸಮುದ್ರ ಇಳಿತದ ಸಮಯದಲ್ಲಿ ಈ ಸೂಕ್ಷ್ಮಜೀವಿಗಳು ಅಲೆಯೊಂದಿಗೆ ತೀರಕ್ಕೆ ಬಂದು ಮರಳಿನಲ್ಲಿಯೇ ಉಳಿದು ಬಿಡುತ್ತವೆ. ಆಗ ಅದನ್ನು ಯಾರಾದರೂ ತುಳಿದರೆ ತೀರಾ ಒತ್ತಡಕ್ಕೆ ಒಳಗಾಗಿ ನೀಲಿ ಬಣ್ಣದ ಬೆಳಕನ್ನು ಸೂಸುತ್ತವೆ ಎಂದು ಸಹಾಯಕ ಪ್ರಾಧ್ಯಾಪಕ ಡಾ.ಶಿವಕುಮಾರ್ ಹರಗಿ ತಿಳಿಸಿದ್ದಾರೆ. ಇಂತಹ ಸೂಕ್ಷ್ಮಜೀವಿಗಳ ಸಂಖ್ಯೆ ಹೆಚ್ಚಳ ಆಗುವುದು ಸಮುದ್ರಕ್ಕೆ ಅಪಾಯವಾಗಿದೆ. ಹಗಲಿನಲ್ಲಿ ಸಮುದ್ರ ಹಸಿರು ಬಣ್ಣ ಇರುವಾಗ ಸಮುದ್ರಕ್ಕೆ ಹೋಗಲು ಜನ ಕೂಡ ಹಿಂದೇಟು ಹಾಕುವುದರಿಂದ ಪ್ರವಾಸೋದ್ಯಮಕ್ಕೂ ಹೊಡೆತ ಬೀಳುತ್ತದೆ. ಈ ಸೂಕ್ಷ್ಮಜೀವಿಗಳು ಮನುಷ್ಯರಿಗೂ ಅಪಾಯವನ್ನು ಉಂಟು ಮಾಡುವುದು ಕೂಡ ಕಂಡುಬರುತ್ತದೆ. ಆದುದರಿಂದ ಇಂತಹ ಸಂದರ್ಭದಲ್ಲಿ ಪ್ರವಾಸಿಗರು ಸಮುದ್ರಕ್ಕೆ ಇಳಿದು ಆಟ ಆಡದೆ ಜಾಗೃತರಾಗಿರುವುದು ಉತ್ತಮ ಎಂದು ಅವರು ಸಲಹೆ ನೀಡಿದ್ದಾರೆ.

Writer - ನಝೀರ್ ಪೊಲ್ಯ

contributor

Editor - ನಝೀರ್ ಪೊಲ್ಯ

contributor

Similar News