'ಮರಾಠ ಅಭಿವೃದ್ಧಿ ಪ್ರಾಧಿಕಾರ' ವಿರೋಧಿಸಿ ಪ್ರತಿಭಟನೆ: ವಾಟಾಳ್ ನಾಗರಾಜ್ ಬಂಧನ

Update: 2020-11-22 11:52 GMT

ಬೆಂಗಳೂರು, ನ.22: ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ಆದೇಶ ಹಿಂಪಡೆಯುವಂತೆ ಆಗ್ರಹಿಸಿ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ರವಿವಾರ ಮೈಸೂರು ಬ್ಯಾಂಕ್ ವೃತ್ತದಲ್ಲಿ ವಿವಿಧ ಸಂಘಟನೆಗಳು ಕಪ್ಪು ಬಾವುಟ ಪ್ರದರ್ಶನ ಮಾಡಿದವು. ಈ ವೇಳೆ ವಾಟಾಳ್ ನಾಗರಾಜ್ ಸೇರಿದಂತೆ ಮತ್ತಿತರರನ್ನು ಬಂಧಿಸಲಾಯಿತು. 

ಬಂಧನಕ್ಕೂ ಮುನ್ನ ಮಾತನಾಡಿದ ವಾಟಾಳ್ ನಾಗರಾಜ್, ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ಆದೇಶ ಹಿಂಪಡೆಯುವವರೆಗೂ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡುತ್ತೇವೆ. ನ.23ರಂದು ಬಳ್ಳಾರಿ, ನ.24ರಂದು ಕೊಪ್ಪಳ. 28ರಂದು ಬೆಂಗಳೂರಿನಲ್ಲಿ ಎಂದೂ ಕಂಡರಿಯದ ಹೋರಾಟ ನಡೆಯುತ್ತದೆ ಎಂದು ಸರಕಾರಕ್ಕೆ ಎಚ್ಚರಿಕೆ ನೀಡಿದರು.

ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ವಿರೋಧಿಸಿ ಡಿ.5ರಂದು ನಡೆಯುವ ಬಂದ್ ಅನ್ನು ಯಾರೂ ಹತ್ತಿಕ್ಕಲು ಆಗುವುದಿಲ್ಲ. ಬಂದ್ ನಡೆದೇ ನಡೆಯುತ್ತೆ. ಮರಾಠಾ ನಿಗಮ ರಚನೆ ವಿರುದ್ಧ ಸರಣಿ ಪ್ರತಿಭಟನೆ ನಡೆಯುತ್ತವೆ. ವಿವಿಧ ಸಂಘಟನೆಗಳು ಪ್ರತಿಭಟನೆಗೆ ಬೆಂಬಲ ನೀಡಿವೆ ಎಂದರು.

ಡಾ.ರಾಜ್‍ಕುಮಾರ್ ಅಭಿಮಾನಿಗಳ ಸಂಘದ ರಾಜ್ಯಾಧ್ಯಕ್ಷ ಸಾ.ರಾ.ಗೋವಿಂದು ಮಾತನಾಡಿ, ಕನ್ನಡದ ಒಕ್ಕೂಟದಿಂದ ಕಪ್ಪು ಬಾವುಟ ಪ್ರದರ್ಶನ ಮಾಡುವ ಮೂಲಕ ಸರಕಾರದ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದೇವೆ. ಕನ್ನಡಿಗರಿಗೆ ನಾವು ಮನವಿ ಮಾಡಿಕೊಳ್ಳುತ್ತೇವೆ, ಯಾವುದೇ ಕಠಿಣ ಕ್ರಮ, ಒತ್ತಡವಾದರೂ ಡಿ.5ರಂದು ನಡೆಯುವ ಬಂದ್ ಅನ್ನು ಹತ್ತಿಕ್ಕಲು ಸಾಧ್ಯವಿಲ್ಲ. ಡಿ.5ನೆಕ್ಕೆ ನಡೆಯುವ ಬಂದ್‍ಗೆ ಈಗಾಗಲೇ ಸಾಕಷ್ಟು ಬೆಂಬಲ ಸಿಕ್ಕಿದೆ. ಇಡೀ ಕರ್ನಾಟಕದ ಜನತೆ ನಮಗೆ ಬೆಂಬಲ ಕೊಡುತ್ತಾರೆ. ನಾವು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು, ಒಟ್ಟಾಗಿ ಚಳವಳಿ ನಡೆಸುವ ಪ್ರಯತ್ನ ಮಾಡ್ತೇವೆ ಎಂದು ಹೇಳಿದರು.

ಕರವೇ ರಾಜ್ಯಾಧ್ಯಕ್ಷರಾದ ಟಿ.ಎ.ನಾರಾಯಣ ಗೌಡರು ಬೇರೆಯಲ್ಲ, ಪ್ರವೀಣ್ ಶೆಟ್ಟಿ ಬೇರೆಯಲ್ಲ, ಸಾರಿಗೆ ನಾಯಕರ ಸಂಘದ ಅಧ್ಯಕ್ಷರು, ಹೋಟೆಲ್ ಮಾಲಕರ ಸಂಘ ಬೇರೆ ಅಲ್ಲ. ನಾವೆಲ್ಲರೂ ಒಟ್ಟಾಗಿ ಹೋರಾಡಬೇಕಾಗಿದೆ. ಡಿ.5ರ ಬೆಳಗ್ಗೆ 6 ರಿಂದ ಸಂಜೆ 6ರ ವರೆಗೆ 12 ಗಂಟೆಗಳ ಕಾಲ ಪ್ರತಿಭಟನೆ ನಡೆಯಲಿದೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News