ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ದರೋಡೆ: ಇಬ್ಬರು ಪೊಲೀಸರು ಸೇರಿ ಏಳು ಮಂದಿ ಬಂಧನ

Update: 2020-11-22 13:52 GMT

ಬೆಂಗಳೂರು, ನ.22: ಚಿನ್ನಾಭರಣ ಅಂಗಡಿಯಲ್ಲಿ 9 ಲಕ್ಷ ರೂ.ಮೌಲ್ಯದ ಚಿನ್ನಾಭರಣ ದೋಚಿದ್ದ ಆರೋಪದ ಮೇಲೆ ಇಬ್ಬರು ಪೊಲೀಸರು, ಐವರು ದರೋಡೆಕೋರರನ್ನು ಹಲಸೂರುಗೇಟ್ ಠಾಣೆ ಪೊಲೀಸರು ಬಂಧಿಸಿ ಜೈಲಿಗೆ ರವಾನಿಸಿದ್ದಾರೆ.

ಕಳೆದ ನ.11ರಂದು ನಗರ್ತಪೇಟೆಯ ಅಣ್ಣಯ್ಯ ಬೀದಿಯಲ್ಲಿರುವ ಚಿನ್ನದ ಅಂಗಡಿಗೆ ಪೊಲೀಸರು ಕಳ್ಳರ ಜತೆಗೂಡಿ ದಾಳಿ ಮಾಡಿದ್ದರು. ಅಂಗಡಿ ಮಾಲಕನಿಗೆ ನೀನು ಪರವಾನಗಿ ಇಲ್ಲದೇ ಅಂಗಡಿ ನಡೆಸುತ್ತಿದ್ದು, ಕಳವು ಚಿನ್ನ ಖರೀದಿಸಿರುವ ಮಾಹಿತಿ ಇದೆ ಎಂದು ಸಿಸಿಬಿ ಪೊಲೀಸರ ಶೈಲಿಯಲ್ಲೇ ಪ್ರಶ್ನಿಸಿ ಸುಮಾರು 9 ಲಕ್ಷ ರೂ. ಮೌಲ್ಯದ ಚಿನ್ನಾಭರಣ ದೋಚಿದ್ದರು.

ದಾಳಿ ನಡೆದ ಬಳಿಕ ಅಂಗಡಿ ಮಾಲಕ ಕಾರ್ತಿಕ್ ಅವರು ಪರಿಚಿತ ಪೊಲೀಸರ ಮೂಲಕ ದಾಳಿಯ ಬಗ್ಗೆ ಮಾಹಿತಿ ಸಂಗ್ರಹಿಸಿದ್ದರು. ದಾಳಿ ನಡೆಸಿದ್ದು ಅಸಲಿ ಪೊಲೀಸರಲ್ಲ, ದರೋಡೆಕೋರರು ಎಂಬ ಸಂಗತಿ ಅರಿವಿಗೆ ಬಂದಿತ್ತು. ಕೂಡಲೇ ಹೋಗಿ ಹಲಸೂರು ಗೇಟ್ ಠಾಣೆಗೆ ದೂರು ನೀಡಿದ್ದರು.

ಪೊಲೀಸರ ಸೋಗಿನಲ್ಲಿ ದರೋಡೆಕೋರರು ದಾಳಿ ನಡೆಸಿ ಚಿನ್ನಾಭರಣ ಕದ್ದಿದ್ದ ಸಿಸಿಟಿವಿ ದೃಶ್ಯಗಳನ್ನು ವಶಕ್ಕೆ ಪಡೆದು ಪರಿಶೀಲನೆ ನಡಸಿದ್ದರು. ಪ್ರಕರಣದ ತನಿಖೆ ನಡೆಸಿದ ಹಲಸೂರುಗೇಟ್ ಪೊಲೀಸರು ನಕಲಿ ದಾಳಿ ಮಾಡಿದ್ದ ಏಳು ಆರೋಪಿಗಳನ್ನು ಬಂಧಿಸಿದ್ದು, ಅದರಲ್ಲಿ ಇಬ್ಬರು ಅಸಲಿ ಪೊಲೀಸ್ ಕಾನ್‍ಸ್ಟೇಬಲ್‍ಗಳು ನಕಲಿ ದಾಳಿಯಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ. ಇಬ್ಬರು ಅಸಲಿ ಪೊಲೀಸರು ಸೇರಿ ಏಳು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News