ಮರಗಳಿಗೆ ಮೊಳೆಗಳು ಹೊಡೆಯದಂತೆ ಜಾಗೃತಿ: ಪೋಸ್ಟರ್ ಗಳನ್ನು ಮರಗಳಿಗೆ ನೇತಾಕಿದ ಪರಿಸರವಾದಿಗಳು

Update: 2020-11-22 16:17 GMT
Photo: Twitter

ಬೆಂಗಳೂರು, ನ.22 : ನನಗೂ ಜೀವವಿದೆ, ನನಗೂ ನೋವಾಗುತ್ತದೆ, ನಾನು ಅರಳಿ ಮರ! ಹೀಗೆ ಹಲವು ಪರಿಸರವಾದಿಗಳು ನಗರದ ಮರಗಳಿಗೆ ಮೊಳೆಗಳನ್ನು ಹಾಗೂ ಪಿನ್‍ಗಳನ್ನು ಹೊಡೆಯುವುದರಿಂದ ರಕ್ಷಿಸಲು ಪೋಸ್ಟರ್ ಗಳನ್ನು ಬರೆದು ಮರಗಳಿಗೆ ನೇತಾಕಿದ್ದಾರೆ.

ಬೆಂಗಳೂರಿನ ವಿಜಯನಗರ ಸುತ್ತಮುತ್ತ ರಾಘವೇಂದ್ರ ಹಾಗೂ ಅವರ ಇಬ್ಬರು ಸ್ನೇಹಿತರು ಈ ಅಭಿಯಾನವನ್ನು ನಡೆಸುತ್ತಿದ್ದು ಅರಳಿ ಮರಗಳಿಗೆ ಜಾಹೀರಾತು ಫಲಕ ಸಿಕ್ಕಿಸುವ ಉದ್ದೇಶದಿಂದ ಹಾಕಲಾಗಿರುವ ಮೊಳೆಗಳನ್ನು ಹಾಗೂ ಪಿನ್‍ಗಳನ್ನು ತೆರವುಗೊಳಿಸುವ ಕೆಲಸವನ್ನು ಮಾಡುತ್ತಿದ್ದಾರೆ.

ನಗರದ ಹಲವು ಮರಗಳಿಗೆ ತಮ್ಮ ಸಂಸ್ಥೆಯ ಜಾಹೀರಾತುಗಳನ್ನು ಹಾಕುವ ಉದ್ದೇಶದಿಂದ ಇಂತಹ ಮೊಳಗಳನ್ನು ಹೊಡೆಯಲಾಗುತ್ತಿದೆ. ಇದಕ್ಕೆ ಅನುಮತಿ ಇಲ್ಲದೆ ಇದ್ದರೂ ಒಂದಿಷ್ಟು ಸಂಸ್ಥೆಗಳು ಇಂತಹ ಕೃತ್ಯಗಳನ್ನು ಎಸಗುತ್ತಿವೆ. ಆದರೆ, ಇದರಿಂದ ಮರಗಳಿಗೆ ಆಗುತ್ತಿರುವ ಹಾನಿ ಕುರಿತಾಗಿ ಅವರು ಯೋಚನೆಯನ್ನು ಮಾಡುವುದಿಲ್ಲ. ಹೀಗಾಗಿ, ರಾಘವೇಂದ್ರ ಹಾಗೂ ಅವರ ಸ್ನೇಹಿತರು ಮೊಳೆಗಳನ್ನು ಹಾಗೂ ಪಿನ್‍ಗಳನ್ನು ತೆರವುಗೊಳುಸುವ ಕಾರ್ಯವನ್ನು ತಮ್ಮ ಕರ್ತವ್ಯ ಎಂಬಂತೆ ಮಾಡುತ್ತಿದ್ದಾರೆ.

ಇದುವರೆಗೂ ಸುಮಾರು 600 ಮೊಳೆಗಳು ಹಾಗೂ 5000 ಸ್ಟೆಪ್ಲರ್ ಪಿನ್‍ಗಳನ್ನು ತೆರವುಗೊಳಿಸಿದ್ದಾರೆ. ಪ್ರತಿನಿತ್ಯ ಮುಂಜಾನೆ ಜಾಗಿಂಗ್ ಹೋಗುವ ಸಂದರ್ಭದಲ್ಲಿ ತಮ್ಮ ನಿತ್ಯದ ಕಾಯಕವನ್ನಾಗಿ ಈ ಕೆಲಸವನ್ನು ರಾಘವೇಂದ್ರ ಹಾಗೂ ಅವರ ಸ್ನೇಹಿತರಾದ ಕಾರ್ತಿಕ್ ಮುದಳಿಯಾರ್, ಕಿರಣ್ ಕುಮಾರ್ ಮಾಡುತ್ತಾ ಬರುತ್ತಿದ್ದಾರೆ.

ಜನರಿಗೆ ಅರಿವು ಮೂಡಿಸಲು ಪ್ರಯತ್ನ: ಮೊಳೆಗಳನ್ನು ಹಾಗೂ ಪಿನ್‍ಗಳನ್ನು ತೆರವುಗೊಳಿಸುವುದು ಮಾತ್ರವಲ್ಲದೆ ಜನರಲ್ಲಿ ಅರಿವು ಮೂಡಿಸುವ ಕೆಲಸವನ್ನು ನಡೆಸುತ್ತಿದ್ದಾರೆ. ಮರಗಳ ಸುತ್ತ ಪೋಸ್ಟರ್‍ಗಳನ್ನು ಹಾಕುವ ಮೂಲಕ ನಮಗೂ ಜೀವವಿದೆ, ನಮಗೂ ನೋವಾಗುತ್ತದೆ ಆದ್ದರಿಂದ ಮೊಳೆ ಹಾಗೂ ಪಿನ್ಗಳನ್ನು ಹೊಡೆಯಬೇಡಿ ಎಂದು ಜನರಲ್ಲಿ ಮನವಿ ಮಾಡುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News