ಕೊರೋನದಿಂದಾಗಿ ಅನುಮಾನದಿಂದ ಕಾಣುವಂತಹ ಸನ್ನಿವೇಶ ನಿರ್ಮಾಣ: ನಿರ್ದೇಶಕ ಬಿ.ಸುರೇಶ್

Update: 2020-11-22 18:08 GMT

ಬೆಂಗಳೂರು, ನ. 22: ಕೊರೋನದಿಂದಾಗಿ ವ್ಯಕ್ತಿ -ವ್ಯಕ್ತಿಗಳ ಅಂತರ ಹೆಚ್ಚಾಗಿದ್ದು, ಒಬ್ಬರು ಮತ್ತೊಬ್ಬರನ್ನು ಅನುಮಾನದಿಂದ ನೋಡುವಂತಹ ಸನ್ನಿವೇಶ ಸೃಷ್ಟಿಯಾಗಿದೆ ಎಂದು ಚಿತ್ರ ನಿರ್ದೇಶಕ ಬಿ.ಸುರೇಶ್ ಬೇಸರ ವ್ಯಕ್ತಪಡಿಸಿದ್ದಾರೆ.

ರವಿವಾರ ನಗರದ ಜ್ಯೋತಿಬಸು ಭವನದಲ್ಲಿ ಸಮುದಾಯ ಬೆಂಗಳೂರು ಘಟಕದಿಂದ ಆಯೋಜಿಸಿದ್ದ ಅಗಲಿದ ರಂಗ ದಿಗ್ಗಜರಿಗೆ ರಂಗ ನಮನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕೋವಿಡ್‍ನಿಂದಾಗಿ ಇಡೀ ಜನಜೀವನ ತತ್ತರಿಸಿ ಹೋಗಿದೆ. ಜನರ ನಡುವೆ ಅಂತರ ಬೆಳೆದಿದ್ದು, ಯಾರನ್ನೂ ಹತ್ತಿರದಿಂದ ಕಾಣದಂತಹ ಸ್ಥಿತಿ ನಿರ್ಮಾಣವಾಗಿದೆ ಎಂದರು.

ಕೊರೋನ ಕಾಲಘಟ್ಟದಲ್ಲಿ ನಿರ್ಗಮಿಸಿದ ಅನೇಕ ಕಲಾವಿದರನ್ನು ಕೊನೆ ಕ್ಷಣದಲ್ಲಿ ಕಾಣುವುದಕ್ಕೂ ಸಾಧ್ಯವಾಗಲಿಲ್ಲ. ಎಲ್ಲ ಕಡೆಗಳಲ್ಲಿ ಹೊರಗೆ ಹೋಗಿ ಬಂದರೆ ಅನುಮಾನದಿಂದ ನೋಡುವಂತಹ ಸ್ಥಿತಿ ಏರ್ಪಟ್ಟಿದೆ ಎಂದ ಅವರು, ಕರಾಳ ಕೊರೋನದಿಂದಾಗಿ ಅನೇಕರು ಮೃತಪಡುತ್ತಿದ್ದಾರೆ. ಹೀಗಾಗಿ, ಹೆಚ್ಚು ಜಾಗೃತಿಯಿಂದಲೇ ನಾವು ಹೆಜ್ಜೆಯಿಡಬೇಕಿದೆ ಎಂದು ಸಲಹೆ ನೀಡಿದರು.

ಅಪಾರ ಬೌದ್ಧಿಕತೆಯುಳ್ಳ, ಪ್ರಜಾವಂತರಾಗಿದ್ದ ಹಿರಿಯರು, ಎಲ್ಲರನ್ನೂ ಪ್ರೀತಿಯಿಂದ, ಸಮಾನತೆಯಿಂದ ಕಾಣುತ್ತಿದ್ದ ಕಿರಿಯರು ಕೊರೋನಗೆ ಬಲಿಯಾಗಿದ್ದಾರೆ. ಧರ್ಮ, ಜಾತಿಯ ಹೆಸರಿನಲ್ಲಿ ನಡೆಯುವಂತಹ ಅಮಾನುಷ ಘಟನೆಗಳನ್ನು ಖಂಡಿಸುತ್ತಾ, ನಮಗೆ ನೈತಿಕ ಬೆಂಬಲ ಕೊಡುತ್ತಿದ್ದವರು ದೂರವಾಗಿದ್ದಾರೆ. ಅವರ ನಿರ್ಗಮನ ಇಡೀ ಕಲಾ ಕ್ಷೇತ್ರಕ್ಕೆ ಅಪಾರ ನಷ್ಟವನ್ನುಂಟಾಗಿದೆ ಎಂದು ತಿಳಿಸಿದರು.

ಚಿತ್ರ ನಿರ್ದೇಶಕ ಪಿ.ಶೇಷಾದ್ರಿ ಮಾತನಾಡಿ, ಕೊರೋನ ಎಂಬ ಕರಾಳ ಮಹಾಮಾರಿಗೆ ಅನೇಕರು ಬಲಿಯಾಗಿದ್ದಾರೆ. ಅವರು ಸಲ್ಲಿಸಿದ ಸೇವೆಯೇ ನಮಗೆ ಸ್ಪೂರ್ತಿಯಾಗಬೇಕಿದೆ. ಹಲವು ನಾಟಕಗಳ ಮೂಲಕ, ಸಿನೆಮಾಗಳ ಮೂಲಕ ಸಮಾಜದ ಅಂಕುಡೊಂಕುಗಳನ್ನು ಚಿತ್ರೀಕರಿಸಿದರು. ಆತಂಕದ ಕಾಲಘಟ್ಟದಲ್ಲಿ ನಮಗೆ ಸ್ಪೂರ್ತಿಯಾಗಿದ್ದರು ಎಂದು ಅಗಲಿದ ಹಿರಿಯರನ್ನು ನೆನಪಿಸಿಕೊಂಡರು.

ಕಾರ್ಯಕ್ರಮದಲ್ಲಿ ಅಗ್ರಹಾರ ಕೃಷ್ಣಮೂರ್ತಿ, ಗುಂಡಣ್ಣ ಸೇರಿದಂತೆ ಮತ್ತಿತರರು ಅಗಲಿದ ಹಿರಿಯರಿಗೆ ಗೌರವಪೂರ್ವಕ ನುಡಿನಮನ ಸಲ್ಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News