ಬೈಡೆನ್ ಸಂಪುಟ ಆಯ್ಕೆ ನಾಳೆ ಘೋಷಣೆ

Update: 2020-11-23 03:39 GMT

ವಾಷಿಂಗ್ಟನ್, ನ.23: ಅಮೆರಿಕದ ಅಧ್ಯಕ್ಷರಾಗಿ ಚುನಾಯಿತರಾಗಿರುವ ಜೋ ಬೈಡೆನ್ ತಮ್ಮ ಸಂಪುಟಕ್ಕೆ ನೇಮಕ ಮಾಡಿಕೊಂಡವರ ಮೊದಲ ಪಟ್ಟಿಯನ್ನು ಮಂಗಳವಾರ ಘೋಷಿಸಲಿದ್ದಾರೆ. ಕೊರೋನ ವೈರಸ್ ಸಾಂಕ್ರಾಮಿಕ ಕಾರಣದಿಂದಾಗಿ ಕಾರ್ಯಕ್ರಮವನ್ನು ಸರಳವಾಗಿ ನಡೆಸಲು ತೀರ್ಮಾನಿಸಿದ್ದಾರೆ ಎಂದು ಬೈಡೆನ್ ಸಹವರ್ತಿಗಳು ಹೇಳಿದ್ದಾರೆ. ಚುನಾವಣೆಯಲ್ಲಿನ ಸೋಲು ಒಪ್ಪಿಕೊಳ್ಳಲು ಟ್ರಂಪ್ ನಿರಾಕರಿಸಿದ್ದರೂ, ಹೊಸ ಆಡಳಿತಕ್ಕೆ ಈ ಮೂಲಕ ಅಡಿಗಲ್ಲು ಹಾಕಲು ಬೈಡೆನ್ ಮುಂದಾಗಿದ್ದಾರೆ.

ಡೆಮಾಕ್ರಟಿಕ್ ಪಕ್ಷದ ಬೈಡೆನ್ ಅವರನ್ನು ನವೆಂಬರ್ 3ರಂದು ನಡೆದ ಅಧ್ಯಕ್ಷೀಯ ಚುನಾವಣೆ ವಿಜೇತರು ಎಂದು ಘೋಷಿಸಿದ್ದರೂ, ರಿಪಬ್ಲಿಕನ್ ಪಕ್ಷದ ಅಧ್ಯಕ್ಷ ಟ್ರಂಪ್, ವಿವಿಧ ನ್ಯಾಯಾಲಯಗಳಲ್ಲಿ ದಾವೆಗಳನ್ನು ಹೂಡುವ ಮೂಲಕ ರಾಜ್ಯಗಳ ಅಧಿಕಾರಿಗಳು ತಮ್ಮ ರಾಜ್ಯಗಳ ಒಟ್ಟು ಮತಗಳನ್ನು ದೃಢೀಕರಿಸದಂತೆ ತಡೆಯಲು ಒತ್ತಡ ತರುತ್ತಿದ್ದಾರೆ. ಶನಿವಾರ ಪೆನ್ಸೆಲ್ವೇನಿಯಾ ನ್ಯಾಯಾಲಯದಲ್ಲಿ ಟ್ರಂಪ್ ಪ್ರಯತ್ನಕ್ಕೆ ತೀವ್ರ ಹಿನ್ನಡೆಯಾಗಿದೆ.

ಅಧಿಕಾರ ವರ್ಗಾಂತರ ಪ್ರಕ್ರಿಯೆಗೆ ಸಂಪನ್ಮೂಲವನ್ನು ಬಿಡುಗಡೆ ಮಾಡುವ ನಿಟ್ಟಿನಲ್ಲಿ ಟ್ರಂಪ್ ಆಡಳಿತ ಬೈಡೆನ್ ವಿಜಯವನ್ನು ಒಪ್ಪಿಕೊಳ್ಳಬೇಕು ಎಂದು ಶ್ವೇತಭವನ ಸಿಬ್ಬಂದಿ ಮುಖ್ಯಸ್ಥರಾಗಿ ಬೈಡೆನ್ ಆಯ್ಕೆ ಮಾಡಿರುವ ರಾನ್ ಕ್ಲೈನ್ ಆಗ್ರಹಿಸಿದ್ದಾರೆ. ಬೈಡೆನ್ 2021ರ ಜನವರಿ 21ರಂದು ಅಧಿಕಾರ ವಹಿಸಿಕೊಳ್ಳಬೇಕಿದೆ.

ದಾಖಲೆ ಸಂಖ್ಯೆಯ ಅಮೆರಿಕನ್ನರು ಟ್ರಂಪ್ ಅವರನ್ನು ತಿರಸ್ಕರಿಸಿದ್ದರೂ, ಟ್ರಂಪ್ ಪ್ರಜಾಪ್ರಭುತ್ವವನ್ನು ತಿರಸ್ಕರಿಸುತ್ತಿದ್ದಾರೆ ಎಂದು ಎಬಿಸಿ ಜತೆ ಮಾತನಾಡಿದ ಕ್ಲೈನ್ ಹೇಳಿದ್ದಾರೆ. ಅಧ್ಯಕ್ಷೀಯ ಚುನಾವಣೆಯಲ್ಲಿ ಬೈಡೆನ್, ಟ್ರಂಪ್‌ಗಿಂತ 60 ಲಕ್ಷಕ್ಕೂ ಅಧಿಕ ಮತಗಳನ್ನು ಗಳಿಸಿ 306-232 ಅಂತರದಿಂದ ಗೆಲುವು ಸಾಧಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News