ನೇಮಕಾತಿ ಆದೇಶ ಪತ್ರಕ್ಕೆ ಆಗ್ರಹಿಸಿ ಸಹಾಯಕ ಪ್ರಾಧ್ಯಾಪಕರಿಂದ ಮೌನ ಪ್ರತಿಭಟನೆ

Update: 2020-11-23 15:59 GMT

ಬೆಂಗಳೂರು, ನ.23: ಕಳೆದ ನಾಲ್ಕು ವರ್ಷಗಳಿಂದ ನೇಮಕಾತಿ ಪತ್ರಕ್ಕಾಗಿ ಕಾಯುತ್ತಿದ್ದ ಅನುದಾನಿತ ಕಾಲೇಜುಗಳ ಸಹಾಯಕ ಪ್ರಾಧ್ಯಾಪಕರು, ಸರಕಾರದ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸಿ ಕೂಡಲೇ ಆದೇಶ ನೀಡಬೇಕು ಎಂದು ಆಗ್ರಹಿಸಿ ಕಾಲೇಜು ಶಿಕ್ಷಣ ಇಲಾಖೆಯ ಎದುರು ಮೌನ ಪ್ರತಿಭಟನೆ ನಡೆಸಿದರು.

ಖಾಸಗಿ ಅನುದಾನಿತ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಖಾಲಿ ಇರುವ ಹುದ್ದೆಗಳನ್ನ ಭರ್ತಿ ಮಾಡಲು ರಾಜ್ಯ ಸರಕಾರ 2015ರ ಡಿಸೆಂಬರ್ 30ರಂದು ಆದೇಶ ಹೊರಡಿಸಿತ್ತು. ಎಲ್ಲಾ ಅನುದಾನಿತ ಖಾಸಗಿ ಕಾಲೇಜುಗಳ ಆಯಾ ವಿಭಾಗದ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರು, ಆಯುಕ್ತರು ಹಾಗೂ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳ ಅನುಮತಿ ಪಡೆದು ಜಾಹೀರಾತು ನೀಡಿ, ಯುಜಿಸಿ ನಿಯಮಗಳ ಅಡಿಯಲ್ಲಿಯೇ ವಿಶ್ವವಿದ್ಯಾಲಯ ಸಂದರ್ಶಕರಿಂದ ಸಂದರ್ಶನ ನಡೆಸಿ, ಆಯ್ಕೆಯಾದ ಅಭ್ಯರ್ಥಿಗಳ ವಿವರಗಳನ್ನು ಜಂಟಿ ನಿರ್ದೇಶಕರು ಹಾಗೂ ಆಯುಕ್ತರ ಮುಖಾಂತರ ಕಳುಹಿಸಲಾಗಿತ್ತು. ಇದಾದ ನಂತರ ದಾಖಲೆ, ಪೊಲೀಸ್ ಹಾಗೂ ಸಿಂಧುತ್ವ ಪರಿಶೀಲನೆಯನ್ನು ಕೂಡಾ ನಡೆಸಲಾಗಿತ್ತಾದರೂ ನೇಮಕಾತಿ ಪತ್ರ ನೀಡದಿರುವುದು ಸರಿಯಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಸರಕಾರ ಎಲ್ಲ ಪ್ರಕ್ರಿಯೆಗಳನ್ನು ಕೈಗೊಂಡ ಮೇಲೆ ಇನ್ನೇನು ನೇಮಕಾತಿ ಆದೇಶ ಕೈ ಸೇರುವುದೊಂದೆ ಬಾಕಿಯಿತ್ತು. ಆದರೆ ಕೋವಿಡ್-19 ಪರಿಣಾಮ ಸರಕಾರವು ಹಿಂದಿನ ಆರ್ಥಿಕ ವರ್ಷಗಳಲ್ಲಿ ಹಣಕಾಸು ಇಲಾಖೆಯ ಅನುಮತಿ ಪಡೆದಿದ್ದಾಗಲೂ ಈಗ ಆರ್ಥಿಕ ಮಿತವ್ಯಯದ ನೆಪವೊಡ್ಡಿ ಆದೇಶ ನೀಡುವುದನ್ನ ತಡೆ ಹಿಡಿದಿದೆ. ಇದರಿಂದಾಗಿ ವಿವಿಧ ವೃಂದದ ಸುಮಾರು 380 ಜನ ಶಿಕ್ಷಕರ ಭವಿಷ್ಯ ಅತಂತ್ರಗೊಂಡಿದ್ದು, ಹಲವರು ವಯೋಮಿತಿ ಮೀರುತ್ತಿರುವುದುರಿಂದ ಇನ್ನಷ್ಟು ಆತಂಕಕ್ಕೊಳಗಾಗುವಂತಾಗಿದೆ ಎಂದು ದೂರಿದರು.

ಕಳೆದ ಮೂರು ವರ್ಷಗಳಿಂದ ನಾವು ಆದೇಶ ಪತ್ರಕ್ಕಾಗಿ ಎದುರು ನೋಡುತ್ತಿದ್ದೇವೆ. ಆದರೆ ಸರಕಾರ ಇದರತ್ತ ಗಮನವನ್ನೇ ಹರಿಸುತ್ತಿಲ್ಲ. ನಮ್ಮೆಲ್ಲರ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ಸರಕಾರಕ್ಕೆ ನಮ್ಮ ಕೂಗು ಕೇಳುವವರೆಗೂ ಈ ಅಹೋರಾತ್ರಿ ಧರಣಿಯನ್ನ ಮುಂದುವರೆಸುತ್ತವೆ ಎಂದು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಅಭ್ಯರ್ಥಿ ಸತೀಶ್ ಹೇಳಿದ್ದಾರೆ.

ಪ್ರಥಮ ದರ್ಜೆ ಅನುದಾನಿತ ಕಾಲೇಜುಗಳ ಸಹಾಯಕ ಪ್ರಾಧ್ಯಾಪಕರ ನೇಮಕಾತಿಗೆ ಆದೇಶ ಹೊರಡಿಸಿದ ವರ್ಷದಲ್ಲಿಯೇ ಪಿಯು ಉಪನ್ಯಾಸಕರ ನೇಮಕಾತಿಗೂ ಸರಕಾರ ಆದೇಶ ಹೊರಡಿಸಿತ್ತು. ಇತ್ತೀಚಿಗೆ ಪಿಯು ಉಪನ್ಯಾಸಕರಿಗೆ ಸರಕಾರ ಆದೇಶ ಪತ್ರ ನೀಡಿದೆ. ಅದರಂತೆ ಪ್ರಥಮ ದೆರ್ಜೆ ಅನುದಾನಿತ ಕಾಲೇಜುಗಳ ಸಹಾಯಕ ಪ್ರಾಧ್ಯಾಪಕರಿಗೂ ಕೂಡಲೇ ಆದೇಶ ಪತ್ರ ನೀಡಬೇಕು ಎಂದು ಅವರು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News