×
Ad

ವಿದ್ಯುತ್ ಖರೀದಿಯಲ್ಲಿ 3,400 ಕೋಟಿ ರೂ. ಭ್ರಷ್ಟಾಚಾರ ಆರೋಪ: ನ್ಯಾಯಾಂಗ ತನಿಖೆಗೆ ಎಎಪಿ ಆಗ್ರಹ

Update: 2020-11-23 22:18 IST

ಬೆಂಗಳೂರು, ನ.23: ಅದಾನಿಗೆ ಅನುಕೂಲ ಮಾಡಿಕೊಡುವ ಸಲುವಾಗಿ ಬಿಜೆಪಿ ಸರಕಾರ ಕನ್ನಡಿಗರ ಮೇಲೆ ಹೊರೆ ಹಾಕುತ್ತಿದೆ. ವಿದ್ಯುತ್ ಖರೀದಿಯಲ್ಲಿ 3400 ಕೋಟಿ ರೂಪಾಯಿಗಳ ಬೃಹತ್ ಹಗರಣ ನಡೆದಿದೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಸಂಚಾಲಕ ಪೃಥ್ವಿ ರೆಡ್ಡಿ ಆರೋಪಿಸಿದ್ದಾರೆ.

ನಗರದಲ್ಲಿಂದು ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇದೇ ತಿಂಗಳ 12 ನೇ ತಾರೀಕಿನಂದು ಶಾಕ್ ಬೇಡ ಎನ್ನುವ ಅಭಿಯಾನವನ್ನು ಆಮ್ ಆದ್ಮಿ ಪಕ್ಷ ಪ್ರಾರಂಭಿಸಿತ್ತು ಮತ್ತು ರಾಜ್ಯ ಸರಕಾರಕ್ಕೆ ಕಡಿಮೆ ಮಾಡಿ, ಇಲ್ಲ ಜಾಗ ಮಾಡಿ ಎಂದು 19ನೇ ತಾರೀಕಿನಂದು ಸವಾಲು ಹಾಕಿತ್ತು. ಈ ಸವಾಲಿಗೆ ಕಿಂಚಿತ್ತೂ ಸ್ಪಂದಿಸದ ಸರಕಾರದ ಮೌನಕ್ಕೆ ಕಾರಣ ಏನು ಎಂದು ಪ್ರಶ್ನಿಸಿದರು.

ಕಳೆದ ಪತ್ರಿಕಾಗೋಷ್ಠಿಯಲ್ಲಿ, ಸರಕಾರವು ಹೇಗೆ ಹೆಚ್ಚಿಗೆ ಹಣ ಕೊಟ್ಟು ವಿದ್ಯುತ್ ಖರೀದಿ ಮಾಡುತ್ತಿದೆ ಮತ್ತು ಪ್ರಸರಣ, ವಿತರಣೆ ವೇಳೆ ಆಗುತ್ತಿರುವ ನಷ್ಟ ಮತ್ತು ಕಳ್ಳತನವನ್ನು ನಿಯಂತ್ರಿಸುತ್ತಿಲ್ಲ, ಈ ಭ್ರಷ್ಟ ಮತ್ತು ಅಸಮರ್ಥ ಅಧಿಕಾರಿಗಳು, ರಾಜಕಾರಣಿಗಳೆಲ್ಲ ಸೇರಿ ಈ ಹೊರೆಯನ್ನು ಹೇಗೆ ಜನಸಾಮಾನ್ಯರ ಮೇಲೆ ಹಾಕುತ್ತಿದ್ದಾರೆ ಎಂದು ತಿಳಿಸಿದ್ದೆವು. ಇಂತಹ ಸಂಕಷ್ಟದ ಸಮಯದಲ್ಲಿ ಜನರ ಲೂಟಿ ಹೊಡೆಯುತ್ತಿರುವ ಬಿಜೆಪಿ ನೇತೃತ್ವದ ಕರ್ನಾಟಕ ಸರಕಾರ ಹೇಗೆ ಅದಾನಿ ಕಂಪೆನಿಯ ಜೇಬು ತುಂಬಿಸಲು ಹೊರಟಿದೆ ಎಂದು ಆಪಾದಿಸಿದರು.

ಉಡುಪಿ ವಿದ್ಯುತ್ ಸ್ಥಾವರ 2010ರಲ್ಲಿ 600 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಸಾಮರ್ಥ್ಯ ಹೊಂದಿತ್ತು. ಇದನ್ನು 2014ರಲ್ಲಿ ಅದಾನಿ ಪವರ್ ಖರೀದಿಸಿತು. ಪ್ರಸ್ತುತ 2000 ಮೆಗಾವ್ಯಾಟ್ ಸಾಮರ್ಥ್ಯ ಹೊಂದಿದ್ದು ಅದರಲ್ಲಿ 1800 ಮೆಗಾವ್ಯಾಟ್ (90%) ಅನ್ನು ಸರಕಾರ ಖರೀದಿಸುತ್ತಿದೆ. 2018ರಲ್ಲಿ ಕೇಂದ್ರೀಯ ವಿದ್ಯುತ್ ನಿಯಂತ್ರಣ ಆಯೋಗದ (ಸಿಇಆರ್‍ಸಿ) ಪ್ರಕಾರ ರಾಷ್ಟ್ರೀಯ ಸರಾಸರಿ ವಿದ್ಯುತ್ ಖರೀದಿ ವೆಚ್ಚ (ಎನ್‍ಎಪಿಸಿ) ಯುನಿಟ್‍ಗೆ 3.53 ರೂ. ಮತ್ತು ಕಳೆದ ಐದು ವರ್ಷಗಳಲ್ಲಿ ಸರಾಸರಿ ಹೆಚ್ಚಳವು ವರ್ಷಕ್ಕೆ ಶೇ.2ಕ್ಕಿಂತ ಕಡಿಮೆಯಿದೆ ಎಂದು ಅವರು ಹೇಳಿದರು.

2019ರಲ್ಲಿ ಅದಾನಿ ಕಂಪೆನಿಯಿಂದ ವಿದ್ಯುತ್ ಖರೀದಿಸಿದ ಒಟ್ಟು ಬಿಲ್ ರೂ 1224 ಕೋಟಿ. ಎಪಿಪಿಸಿ ಬೆಲೆಗೆ ಹೋಲಿಸಿದರೆ 563 ಕೋಟಿಗಳಷ್ಟು ಹೆಚ್ಚು ಪಾವತಿ ಮಾಡಿದೆ. ಹೆಚ್ಚಿನ ದರಕ್ಕೆ ಸರಕಾರ ವಿದ್ಯುತ್ ಖರೀದಿಸಿದ ಈ ಎರಡು ವರ್ಷಗಳಲ್ಲಿ ಕಲ್ಲಿದ್ದಿಲಿನ ಬೆಲೆ ಶೇ.40-50 ರಷ್ಟು ಕಡಿಮೆ ಆಗಿದೆ. ಇದರಿಂದ ಅದಾನಿ ಕಂಪೆನಿ ಸುಮಾರು 450 ಕೋಟಿ ರೂ ಹೆಚ್ಚುವರಿ ಲಾಭ ಮಾಡಿದೆ, ಆದರೂ ಸರಕಾರ ಜನರ ಮೇಲೆ ವಿದ್ಯುತ್ ದರ ಹೆಚ್ಚಳದ ಮೂಲಕ ಹೊರೆ ಹಾಕಿದೆ ಎಂದು ಅವರು ದೂರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News