ಜನರ ಸಮಸ್ಯೆಗಳಿಗೆ ಸ್ಪಂದಿಸದ ತೇಜಸ್ವಿ ಸೂರ್ಯ: ಕ್ಷೇತ್ರದ ಸಂಸದ ಯಾರೆಂದು ಪ್ರಶ್ನಿಸುತ್ತಿರುವ ಜನತೆ

Update: 2020-11-24 14:06 GMT
ತೇಜಸ್ವಿ ಸೂರ್ಯ

ಬೆಂಗಳೂರು, ನ.24: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದರು ಯಾರು..? ನಾವು ಅವರನ್ನು ಇದುವರೆಗೂ ಕಂಡಿಲ್ಲವಲ್ಲ...!! ಇದು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಜನತೆಯ ಅಭಿಪ್ರಾಯವಾಗಿದೆ. 

ಸಿಲಿಕಾನ್ ಸಿಟಿ ವ್ಯಾಪ್ತಿಗೆ ಸೇರುವ ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿರುವ ತೇಜಸ್ವಿ ಸೂರ್ಯ ಜನರ ಸಮಸ್ಯೆಗಳಿಗೆ ಸ್ಪಂದಿಸಲು ಮುಂದಾಗಿಲ್ಲ. ಲೋಕಸಭಾ ಚುನಾವಣೆ ನಡೆದು ಒಂದು ವರ್ಷ ಕಳೆಯುತ್ತಿದ್ದರೂ ಹಲವಾರು ಜನರಿಗೆ ಇಂದಿಗೂ ನಮ್ಮ ಕ್ಷೇತ್ರದ ಸಂಸದ ಯಾರು ಎಂಬುದೇ ಗೊತ್ತಿಲ್ಲ ಎಂದು ಕ್ಷೇತ್ರದ ಮತದಾರರ ಆರೋಪಿಸುತ್ತಾರೆ.

ತೇಜಸ್ವಿ ಸೂರ್ಯ ಸಂಸದರಾಗಿ ಆಯ್ಕೆಯಾದ ಬಳಿಕ ಜನರ ಸಮಸ್ಯೆಗಳಿಗೆ ಸ್ಪಂದಿಸಿದ್ದಕ್ಕೆ ಸಂಬಂಧಿಸಿದಂತೆ ವಾರ್ತಾಭಾರತಿ ನಡೆಸಿದ ರಿಯಾಲಿಟಿ ಚೆಕ್‍ನಲ್ಲಿ ಬಹುತೇಕ ಜನರು ಸಂಸದರು ನಮ್ಮ ವಾರ್ಡ್, ಕ್ಷೇತ್ರಕ್ಕೆ ಬಂದೇ ಇಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು. ಇನ್ನು ಕೆಲವರು ಒಂದೆರಡು ಬಾರಿ ಬಂದು ಹೋಗಿದ್ದಾರೆ. ಆದರೆ, ಅವರು ಯಾಕೆ ಬಂದರು ಎಂಬ ಮಾಹಿತಿಯೇ ಇಲ್ಲ ಎಂದು ಹೇಳಿದ್ದಾರೆ.

ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಕಳೆದ ಹಲವಾರು ವರ್ಷಗಳಿಂದಲೂ ಅನೇಕ ಕಡೆಗಳಲ್ಲಿ ಅಭಿವೃದ್ಧಿ ಎಂಬುದು ಮರಿಚೀಕೆಯಾಗಿದೆ. ಹೀಗಾಗಿ, ಯುವ ನಾಯಕರಾಗಿದ್ದರಿಂದ ತೇಜಸ್ವಿ ಸೂರ್ಯರಿಗೆ ಮತ ಹಾಕಿದ್ದೇವೆ. ಆದರೆ, ಅವರು ಅಭಿವೃದ್ಧಿಯ ವಿಚಾರಗಳಿಗೆ ಒತ್ತು ನೀಡುವಲ್ಲಿ ವಿಫಲರಾಗಿದ್ದಾರೆ. ಸ್ಥಳೀಯ ಜನಪ್ರತಿನಿಧಿಗಳು ಒಂದಷ್ಟು ಮಟ್ಟಿಗೆ ಕೆಲಸ ಕಾರ್ಯಗಳನ್ನು ನಡೆಸಿಕೊಟ್ಟಿದ್ದು ಬಿಟ್ಟರೆ ಸಂಪೂರ್ಣ ಅಭಿವೃದ್ಧಿ ಎಂಬುದು ಆಗಿಲ್ಲ ಎಂದು ಜನರು ಅಭಿಪ್ರಾಯಪಟ್ಟಿದ್ದಾರೆ.

ಕುಡಿಯುವ ನೀರು, ರಸ್ತೆ, ಚರಂಡಿ ಸೇರಿದಂತೆ ಜನರಿಗೆ ಅಗತ್ಯವಾದ ಯಾವುದೇ ಮೂಲಸೌಕರ್ಯಗಳು ಸಮರ್ಪಕವಾಗಿ ತಲುಪಿಲ್ಲ. ಸಂಸದರು ತಮ್ಮ ಕ್ಷೇತ್ರದ ವ್ಯಾಪ್ತಿಯಲ್ಲಿ ಜನರಿಗೆ ಬೇಕಾದ ಸೌಲಭ್ಯಗಳನ್ನು ಕಲ್ಪಿಸಲು ಮಧ್ಯಸ್ಥಿಕೆ ವಹಿಸಬೇಕಿದೆ ಎಂದು ಬಸವನಗುಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ನಿವಾಸಿ ರಮೇಶ್ ತಿಳಿಸಿದರು.

ತೇಜಸ್ವಿ ಸೂರ್ಯಗೆ ಸಂಘ ಪರಿವಾರದ ಹಿನ್ನೆಲೆಯಿರುವ ಕಾರಣದಿಂದಾಗಿ ಟಿಕೆಟ್ ಸಿಕ್ಕಿದೆ. ಆದರೆ, ಅವರಿಗೆ ಯಾವುದೇ ರಾಜಕೀಯ ಜ್ಞಾನವಿಲ್ಲ. ಅವರಿಂದ ನಾವು ಏನು ಅಭಿವೃದ್ಧಿಯನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ತೇಜಸ್ವಿ ಸೂರ್ಯ ಕೇಂದ್ರ ಮಟ್ಟದಲ್ಲಿ ಬೆಳೆಯಲು ಪ್ರಯತ್ನಿಸುತ್ತಿದ್ದಾರೆ. ಅವರು ಪ್ರತಿನಿಧಿಸುವ ಕ್ಷೇತ್ರದ ಜನರ ಕೈಗೆ ಸಿಗುತ್ತಿಲ್ಲ ಎಂದು ಜಯನಗರ ವಿಧಾನಸಭಾ ಕ್ಷೇತ್ರದ ನಿವಾಸಿ ಯತೀಶ್‍ಗೌಡ ಹೇಳಿದರು.

ಸಂಸದರು ಜನರ ಪರ ಕೆಲಸ ಮಾಡುತ್ತಿಲ್ಲ, ಬಿಜೆಪಿ ಪಕ್ಷಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ಆರೆಸ್ಸೆಸ್ ಬೆಳೆಯಬೇಕು, ಪಕ್ಷ ಬೆಳೆಯಬೇಕು ಎಂಬ ಅಭಿಲಾಷೆಯಿದೆ ಹೊರತು ಜನರ ಬದುಕು ಬದಲಾಗಬೇಕು ಎಂಬ ತುಡಿತವಿಲ್ಲ. ದಿಲ್ಲಿ, ಕೋಲ್ಕತ್ತಾಗಳಿಗೆ ಹೋಗಿ ಹೋರಾಟಗಳನ್ನು ಮಾಡುವ ಅವರಿಗೆ ತಮ್ಮ ಸ್ವಕ್ಷೇತ್ರದ ಬಗ್ಗೆ ಕಿಂಚಿತ್ತೂ ಕಾಳಜಿಯಿಲ್ಲ ಎಂದು ಚಿಕ್ಕಪೇಟೆ ವಿಧಾಸಭಾ ಕ್ಷೇತ್ರದ ನಿವಾಸಿ ಚಲಂ ಅವರು ಆರೋಪಿಸಿದ್ದಾರೆ.

ತೇಜಸ್ವಿ ಸೂರ್ಯ ಯಾರೆಂದು ನಾನು ನೋಡಿಯೇ ಇಲ್ಲ. ಕಾರ್ಪೋರೇಟರ್ ಆವಾಗವಾಗ ನಮ್ಮ ಕ್ಷೇತ್ರಕ್ಕೆ ಬರುತ್ತಿರುತ್ತಾರೆ. ಆದರೆ, ಸಂಸದರು ಅಂದರೆ ಯಾರೆಂದು ಗೊತ್ತಿಲ್ಲ. ಚುನಾವಣೆ ಸಂದರ್ಭದಲ್ಲಿ ಒಂದು ಬಾರಿ ಬಂದಿದ್ದರು. ಆದರೆ, ಅವರಲ್ಲಿ ಯಾರು ಸಂಸದರು ಅಂತಾನೇ ಗೊತ್ತಾಗಲಿಲ್ಲ.

-ಅನ್ವರ್ ಪಾಷ, ಜಯನಗರ ವಿಧಾನಸಭಾ ಕ್ಷೇತ್ರದ ನಿವಾಸಿ

ಈ ಹಿಂದೆ ಲೋಕಸಭೆಗೆ ಚುನಾಯಿತರಾಗಿದ್ದ ಸಂಸದರು ಯಾರೆಂದು ತಿಳಿದಿರುತ್ತಿತ್ತು. ಆದರೆ, ಪ್ರಸ್ತುತ ಸಂಸದರು ಯಾರು ಎಂಬುದೇ ತಿಳಿಯುತ್ತಿಲ್ಲ. ಅವರು ಏನು ಮಾಡ್ತಿದ್ದಾರೆ ಎಂಬುದೇ ಗೊತ್ತಾಗಲ್ಲ. ಮಾಧ್ಯಮಗಳಲ್ಲಿ ಕಾಣಿಸಿಕೊಳ್ಳುವ ಅವರು ರಾಜ್ಯದ ಪರವಾಗಿ ಎಲ್ಲಿಯೂ ಧ್ವನಿ ಎತ್ತಿಲ್ಲ. ಇನ್ನು, ತಮ್ಮ ಕ್ಷೇತ್ರದ ಹಲವಾರು ಸಮಸ್ಯೆಗಳ ಬಗ್ಗೆ, ಅಭಿವೃದ್ಧಿ ಕಾರ್ಯಗಳ ಕುರಿತು ಯಾವುದೇ ಚಿಂತನೆಯನ್ನೂ ಮಾಡುತ್ತಿಲ್ಲ. ಇತ್ತೀಚಿಗೆ ಭಾರೀ ಮಳೆಯಿಂದಾಗಿ ಜನರು ಪರಿತಪಿಸಿದರು. ಸಂಸದರಾಗಿ ತಮ್ಮ ಕ್ಷೇತ್ರದ ಜನರ ಕಷ್ಟ ಕೇಳಲು ಬರಲಿಲ್ಲ. ಜನರ ನೋವಿಗೆ ಸ್ಪಂದಿಸದ ಸಂಸದರನ್ನು ಆಯ್ಕೆ ಮಾಡಿದ ಜನರಿಗೆ ಇದೀಗ ನಿರಾಶೆ ಮೂಡಿದೆ.

- ರಘು, ಬಿ.ಟಿ.ಎಂ.ಲೇಔಟ್ ವಿಧಾನಸಭಾ ಕ್ಷೇತ್ರದ ನಿವಾಸಿ

Writer - -ಬಾಬುರೆಡ್ಡಿ ಚಿಂತಾಮಣಿ

contributor

Editor - -ಬಾಬುರೆಡ್ಡಿ ಚಿಂತಾಮಣಿ

contributor

Similar News