ಆಹ್ವಾನ ಪತ್ರಿಕೆ ವಿವಾದ: ಶಾಸಕಿ ಸೌಮ್ಯಾರೆಡ್ಡಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ

Update: 2020-11-24 14:56 GMT

ಬೆಂಗಳೂರು, ನ.24: ಕನ್ನಡ ರಾಜ್ಯೋತ್ಸವದ ಹೆಸರಿನಲ್ಲಿ ವಿವಿಧ ಧರ್ಮಗಳ ನಡುವೆ ಕೋಮುದ್ವೇಷ ಸೃಷ್ಟಿಸಲು ಯತ್ನಿಸಿದ ಓಂ ಕನ್ನಡ ಮರಿಯಮ್ಮನ ಕರುನಾಡ ಸಂಘದ ವಿರುದ್ಧ ಹಾಗೂ ಅದಕ್ಕೆ ಪ್ರೋತ್ಸಾಹಿಸಿದ್ದ ಶಾಸಕಿ ಸೌಮ್ಯಾರೆಡ್ಡಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಬೆಂಗಳೂರು ದಕ್ಷಿಣ ಜಿಲ್ಲೆ ಬಿಜೆಪಿ ಘಟಕದಿಂದ ಪ್ರತಿಭಟನೆ ನಡೆಸಲಾಯಿತು.

ಈ ಸಂಬಂಧ ಜಯನಗರದಲ್ಲಿ ಪ್ರತಿಭಟನೆ ನಡೆಸಿದ ಬಿಜೆಪಿ ಕಾರ್ಯಕರ್ತರು, ರಾಜ್ಯೋತ್ಸವ ಆಚರಣೆ ಹಿನ್ನೆಲೆಯಲ್ಲಿ ಶಾಸಕಿ ಸೌಮ್ಯಾರೆಡ್ಡಿ ಸಮ್ಮುಖದಲ್ಲಿ ಕರುನಾಡ ಸಂಘದ ವತಿಯಿಂದ ಜಯನಗರದಲ್ಲಿ ನಡೆದ ಸಮಾರಂಭದ ಆಹ್ವಾನ ಪತ್ರಿಕೆಯಲ್ಲಿ ಕುವೆಂಪು ಅವರ ಕವಿತೆ ‘ಬಾರಿಸು ಕನ್ನಡ ದಿಂಡಿಮವ, ಓ ಕರ್ನಾಟಕ ಹೃದಯ ಶಿವ’ ಇದನ್ನು ‘ಓ ಕರ್ನಾಟಕದ ಯೇಸು’ ಎಂದು ತಿರುಚಲಾಗಿದೆ. ಈ ಮೂಲಕ ಕೋಮು ಸೌಹಾರ್ದತೆ ಹಾಳು ಮಾಡಲು ಪ್ರಯತ್ನಿಸಿದ್ದಾರೆ. ಇವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ಕಾರ್ಯಕರ್ತರು ಜಯನಗರ ಪೊಲೀಸ್ ಇನ್‍ಸ್ಪೆಕ್ಟರ್ ಗೆ ದೂರು ಸಲ್ಲಿಸಿದರು.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಶಾಸಕಿ ಸೌಮ್ಯಾರೆಡ್ಡಿ, ಆಹ್ವಾನ ಪತ್ರಿಕೆಯಲ್ಲಿ ತಪ್ಪಾಗಿ ಮುದ್ರಣಗೊಂಡಿದ್ದನ್ನು ಕರುನಾಡ ಸಂಘಕ್ಕೆ ಪತ್ರದ ಮೂಲಕ ತಿಳಿಸಿದ್ದು, 22ಕ್ಕೆ ನಡೆಯಬೇಕಿದ್ದ ಕಾರ್ಯಕ್ರಮವನ್ನು 23ಕ್ಕೆ ಆಯೋಜಿಸಲು ಸೂಚಿಸಿದ್ದೆ. ಆದರೂ, ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿರುವುದು ಸರಿಯಲ್ಲ ಎಂದು ಹೇಳಿದ್ದಾರೆ.

ಪೇಸ್‍ಬುಕ್‍ನಲ್ಲಿ ಮಾತನಾಡಿರುವ ಅವರು, ಬಿಜೆಪಿ ಕಾರ್ಯಕರ್ತರಿಗೆ ರಾಜ್ಯದ ಬಗ್ಗೆ, ನಮ್ಮ ನೆಲ, ಜಲ, ಬಾಷೆ, ನಾಡಿನ ಬಗ್ಗೆ ಪ್ರೀತಿಯಿದ್ದರೆ, ಜಯನಗರದ ಬಗ್ಗೆ ಕಾಳಜಿಯಿದ್ದರೆ ಅದರ ಅಭಿವೃದ್ಧಿಗಾಗಿ ಶ್ರಮಿಸಲಿ. ಸಮ್ಮಿಶ್ರ ಸರಕಾರವಿದ್ದ ಸಂದರ್ಭದಲ್ಲಿ ಜಯನಗರಕ್ಕೆ ಮೀಸಲಾಗಿದ್ದ ಅನುದಾನವನ್ನು, ಬಿಜೆಪಿ ಸರಕಾರ ಬಂದ ಮೇಲೆ ಕಡಿತ ಮಾಡಿದೆ. ಅದರ ಕುರಿತು ಯಾಕೆ ಇವರು ಮಾತನಾಡುವುದಿಲ್ಲ ಎಂದು ಪ್ರಶ್ನಿಸಿದ್ದಾರೆ.

ಜಯನಗರ ಕ್ಷೇತ್ರದ ಅಭಿವೃದ್ಧಿಗಾಗಿ 316 ಕೋಟಿ ಅನುದಾನ ಬಿಡುಗಡೆಯಾಗಿತ್ತು. ಆದರೆ, ಯಡಿಯೂರಪ್ಪ ಮುಖ್ಯಮಂತ್ರಿಯಾದ ನಂತರ ಅನುದಾನವನ್ನು ಕಡಿತಗೊಳಿಸಿದ್ದಾರೆ. ಇದರ ಬಗ್ಗೆ ಮುಖ್ಯಮಂತ್ರಿಗಳಿಗೆ ಒತ್ತಡ ಹಾಕಲಿ. ಅದೇ ರೀತಿ ರಾಜ್ಯಕ್ಕೆ ಕೇಂದ್ರದಿಂದ ಬರಬೇಕಾದ ಅನುದಾನದ ಬಗ್ಗೆ ಇವರು ಮೌನವಹಿಸಿದ್ದಾರೆ. ರಾಜ್ಯದಲ್ಲಿ ಭೀಕರ ನೆರೆ ಮತ್ತು ಪ್ರವಾಹ ಉಂಟಾಗಿದೆ. ಅದಕ್ಕೆ ಸಿಗಬೇಕಾದ ಪರಿಹಾರ ಇನ್ನೂ ಸಿಕ್ಕಿಲ್ಲ. ಅದರ ಬಗ್ಗೆ ಮಾತನಾಡಲಿ ಎಂದು ಹೇಳಿದರು.

ಸರಕಾರಕ್ಕೆ ಅಭಿವೃದ್ಧಿ ನಿಗಮ ಮಾಡಲು ಹಣವಿದೆ. ಆದರೆ, ವಿಧವಾ ವೇತನ, ವೃದ್ಧಾಪ್ಯ ವೇತನ, ಅಂಗವಿಕಲರ ಪಿಂಚಣಿಗಳನ್ನು ನೀಡಲು ಹಣವಿಲ್ಲ. ಇನ್ನು, ರಾಜ್ಯದ ಸಂಸದರು ಪ್ರಧಾನಿ ಮೋದಿ ಎದುರು ಮಾತನಾಡುವಷ್ಟು ಧೈರ್ಯವಿಲ್ಲ. ಸಣ್ಣ ಕಾರಣಕ್ಕಾಗಿ ಹೋರಾಟ ಮಾಡುವವರು ಮೊದಲು ದೊಡ್ಡ ಮಟ್ಟದ ಅನುದಾನವನ್ನು ತರುವಂತಹುದಕ್ಕೆ ಹೋರಾಟ ಮಾಡಿ. ಜನಪರ, ಬಡವರ, ಅಭಿವೃದ್ಧಿ ಪರ ಕೆಲಸ ಮಾಡೋಣ, ಬನ್ನಿ ಕೈ ಜೋಡಿಸಿ. ಅದನ್ನು ಬಿಟ್ಟು, ಚುನಾವಣೆ ಹತ್ತಿರ ಬರುತ್ತಿದೆ ಎಂದು ರಾಜಕೀಯ ಪ್ರೇರಿತ ಅನಾವಶ್ಯಕವಾಗಿ ಸಮಯ ವ್ಯರ್ಥ ಮಾಡಬೇಡಿ ಎಂದು ಸೌಮ್ಯಾರೆಡ್ಡಿ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News