ನಿವಾರ್ ಚಂಡಮಾರುತ: ತಮಿಳುನಾಡಿನಲ್ಲಿ ಮೂವರು ಮೃತ್ಯು

Update: 2020-11-26 17:57 GMT

   ಚೆನ್ನೈ, ನ.26: ಗಂಟೆಗೆ 130 ಕಿ.ಮೀ. ವೇಗದ ಗಾಳಿಯೊಂದಿಗೆ ನಿವಾರ್ ಚಂಡಮಾರುತ ಗುರುವಾರ ಬೆಳಿಗ್ಗೆ ಪುದುಚೇರಿಯ 30 ಕಿ.ಮೀ ಉತ್ತರದಲ್ಲಿರುವ ಕರಾವಳಿ ನಗರ ಮರಕ್ಕಣಂಗೆ ಅಪ್ಪಳಿಸಿದ್ದು, ಪ್ರತ್ಯೇಕ ಘಟನೆಗಳಲ್ಲಿ ಮೂವರು ಮೃತರಾಗಿದ್ದಾರೆ. 118 ಮನೆಗಳಿಗೆ ಹಾನಿಯಾಗಿದ್ದು 39,986 ಮಕ್ಕಳ ಸಹಿತ ಕನಿಷ್ಠ 2.25 ಲಕ್ಷ ಜನರನ್ನು 3,042 ಪರಿಹಾರ ಶಿಬಿರಕ್ಕೆ ಸ್ಥಳಾಂತರಿಸಲಾಗಿದೆ ಎಂದು ರಾಜ್ಯದ ಕಂದಾಯ ಸಚಿವ ಆರ್‌ಬಿ ಉದಯ್‌ಕುಮಾರ್ ಹೇಳಿದ್ದಾರೆ.

ಮಧ್ಯಾಹ್ನದ ವೇಳೆ ಚಂಡಮಾರುತ ದುರ್ಬಲಗೊಂಡಿದ್ದು ವಾಯವ್ಯ ದಿಕ್ಕಿನತ್ತ ಮುಂದುವರಿದಿದೆ . ಇದು ಮತ್ತಷ್ಟು ದುರ್ಬಲಗೊಳ್ಳುವ ಲಕ್ಷಣಗಳಿವೆ ಎಂದು ಹವಾಮಾನ ಇಲಾಖೆಯ ಹೇಳಿಕೆ ತಿಳಿಸಿದೆ.

 ಸಾಕಷ್ಟು ಪೂರ್ವಸಿದ್ಧತೆ ಮಾಡಿಕೊಂಡಿದ್ದರಿಂದ ಸಾವಿನ ಸಂಖ್ಯೆ ಮತ್ತು ನಷ್ಟದ ಪ್ರಮಾಣ ಕನಿಷ್ಠವಾಗಿದೆ. ಚಂಡಮಾರುತದ ತೀವ್ರತೆಗೆ ಹಲವೆಡೆ ಭಾರೀ ಮರಗಳು ಉರುಳಿ ಬಿದ್ದಿವೆ. ಕೆಲವೆಡೆ ಮನೆಯ ಗೋಡೆಗಳು ಕುಸಿದುಬಿದ್ದಿವೆ. ರಾಜ್ಯದ ಹಲವೆಡೆ 30 ಸೆಂಟಿಮೀಟರ್ ಮಳೆ ಸುರಿದಿದೆ. ತಗ್ಗು ಪ್ರದೇಶ ಜಲಾವೃತಗೊಂಡಿದ್ದು ರಸ್ತೆಗಳಿಗೆ ಉರುಳಿಬಿದ್ದ ಮರಗಳನ್ನು ತೆರವುಗೊಳಿಸಲು ಸಿಬ್ಬಂದಿಗಳು ಬೃಹತ್ ಕ್ರೇನ್‌ಗಳನ್ನು ಬಳಸಬೇಕಾಗಿದೆ. ಶೀಘ್ರವೇ ಪರಿಹಾರದ ಬಗ್ಗೆ ಮುಖ್ಯಮಂತ್ರಿಗಳು ಘೋಷಣೆ ಮಾಡಲಿದ್ದಾರೆ ಎಂದವರು ಹೇಳಿದ್ದಾರೆ.

ಭಾರೀ ಗಾಳಿಯ ಜೊತೆಗೆ ಸುರಿದ ಮಳೆನೀರು ರಸ್ತೆಯಲ್ಲೇ ಹರಿದು ಜನರ ಮತ್ತು ವಾಹನ ಸಂಚಾರಕ್ಕೆ ತೊಡಕಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಪುದುಚೇರಿಯಲ್ಲಿ ಬುಧವಾರದಿಂದ ಭಾರೀ ಮಳೆ ಸುರಿಯುತ್ತಿದೆ. ಎಲ್ಲೆಡೆ ನೀರು ತುಂಬಿದ್ದು ಮರಗಳು ಉರುಳಿಬಿದ್ದಿವೆ. ಪುದುಚೇರಿಯ ಹಲವೆಡೆ ಮತ್ತು ತಮಿಳುನಾಡಿನ ಕುಡಲೂರ್‌ನಲ್ಲಿ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿದೆ.

 ನಿವಾರ್ ಚಂಡಮಾರುತದ ಹಿನ್ನೆಲೆಯಲ್ಲಿ ತಮಿಳುನಾಡು ಮತ್ತು ಪುದುಚೇರಿಯಲ್ಲಿ ಗುರುವಾರದವರೆಗೆ ರಜೆ ಘೋಷಿಸಿ ಸರಕಾರ ಆದೇಶಿಸಿದೆ. ಚೆನ್ನೈ ವಿಮಾನ ನಿಲ್ದಾಣ, ಮೆಟ್ರೋ ರೈಲು ಸೇವೆಗಳನ್ನು ಸ್ಥಗಿತಗೊಳಿಸಲಾಗಿತ್ತು. ಗುರುವಾರ ಮಧ್ಯಾಹ್ನದ ವೇಳೆಗೆ ಚಂಡಮಾರುತ ದುರ್ಬಲಗೊಂಡ ಹಿನ್ನೆಲೆಯಲ್ಲಿ ಮೆಟ್ರೋ ರೈಲು ಮತ್ತು ಬಸ್ಸು ಸಂಚಾರ ಆರಂಭವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಹಲವಾರು ಬೃಹತ್ ಅಟೊ ಮೊಬೈಲ್ ಕೈಗಾರಿಕೆಗಳಿರುವ ಚೆನ್ನೈ ನಗರದ ಪ್ರಮುಖ ರಸ್ತೆಗಳಲ್ಲಿ ಪ್ರವಾಹದಂತೆ ನೀರು ಹರಿದಿದೆ. ವೆಲಚೇರಿ ಎಂಬಲ್ಲಿ ಸೇತುವೆಯ ಬಳಿ ರಸ್ತೆಪಕ್ಕ ನಿಲ್ಲಿಸಿದ್ದ ಹಲವು ಕಾರುಗಳು ನೀರಿನಲ್ಲಿ ತೇಲುತ್ತಿದ್ದವು. ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ(ಎನ್‌ಡಿಆರ್‌ಎಫ್)ದ ಸುಮಾರು 1,200 ಸಿಬ್ಬಂದಿಗಳನ್ನು ತಮಿಳುನಾಡು, ಪುದುಚೇರಿ ಮತ್ತು ನೆರೆಯ ಆಂಧ್ರಪ್ರದೇಶದಲ್ಲಿ ರಕ್ಷಣೆ ಮತ್ತು ಪರಿಹಾರ ಕಾರ್ಯಕ್ಕೆ ನಿಯೋಜಿಸಲಾಗಿದೆ. ತಮಿಳುನಾಡಿನಲ್ಲಿ 12 ತಂಡ, ಆಂಧ್ರದಲ್ಲಿ 7, ಪುದುಚೇರಿಯಲ್ಲಿ 3 ತಂಡಗಳನ್ನು ನಿಯೋಜಿಸಿದ್ದು ಒಡಿಶಾದ ಕಟಕ್, ಆಂಧ್ರದ ವಿಜಯ್‌ವಾಡ ಮತ್ತು ಕೇರಳದ ತ್ರಿಶ್ಯೂರ್‌ನಲ್ಲಿ 20 ಹೆಚ್ಚುವರಿ ತಂಡಗಳನ್ನು ಸಜ್ಜಾಗಿರಿಸಲಾಗಿದೆ ಎಂದು ಎನ್‌ಡಿಆರ್‌ಎಫ್‌ನ ಮುಖ್ಯಸ್ಥ ಎಸ್‌.ಎನ್. ಪ್ರದಾನ್ ಹೇಳಿದ್ದಾರೆ.

ನೌಕಾಪಡೆಯ ಹಡಗು, ವಾಯುಪಡೆಯ ವಿಮಾನಗಳು, ಮುಳುಗು ತಜ್ಞರ ತಂಡವನ್ನು ಸನ್ನದ್ಧ ಸ್ಥಿತಿಯಲ್ಲಿರಿಸಲಾಗಿದೆ. ನಿವಾರ್ ಚಂಡಮಾರುತದಿಂದ ಆಂಧ್ರಪ್ರದೇಶದಲ್ಲೂ ಭಾರೀ ಮಳೆಯಾಗುವ ನಿರೀಕ್ಷೆಯಿದೆ. ಕಡಲಿಗೆ ಇಳಿಯದಂತೆ ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News