×
Ad

ದರೋಡೆ ಪ್ರಕರಣ: ಆರೋಪಿಗೆ ಗುಂಡಿಕ್ಕಿ ಬಂಧಿಸಿದ ಪೊಲೀಸರು

Update: 2020-11-26 17:31 IST

ಬೆಂಗಳೂರು, ನ.26: ದರೋಡೆ ಆರೋಪ ಪ್ರಕರಣ ಸಂಬಂಧ ಆರೋಪಿಯೋರ್ವನ ಕಾಲಿಗೆ ಇಲ್ಲಿನ ಬಾಗಲೂರು ಠಾಣಾ ಪೊಲೀಸರು, ಪಿಸ್ತೂಲಿನಿಂದ ಗುಂಡು ಹಾರಿಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ತಮಿಳುನಾಡು ಮೂಲದ ದಿನೇಶ್ ಎಂಬಾತ ಬಂಧಿತ ಆರೋಪಿಯಾಗಿದ್ದು, ಗುಂಡೇಟು ತಗುಲಿ ಕಾಲಿಗೆ ಗಾಯಗೊಂಡಿರುವ ಈತನನ್ನು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನ.24ರಂದು  ದಿನೇಶ್ ಹಾಗೂ ಈತನ ಸಹಚರರು ದ್ವಾರಕನಗರ ಬಳಿ ಹೋಗುತ್ತಿದ್ದ ಮ್ಯಾಥಿವ್ಸ್ ಎಂಬಾತನನ್ನು ಅಡ್ಡಗಟ್ಟಿ ಬೆದರಿಕೆ ಹಾಕಿದಲ್ಲದೆ, 3 ಲಕ್ಷ ರೂ. ವಸ್ತುಗಳನ್ನು ಕಳವು ಮಾಡಿ ಪರಾರಿಯಾಗಿದ್ದರು. ಈ ಸಂಬಂಧ ಬಾಗಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ಕೈಗೊಂಡ ಬಾಗಲೂರು ಇನ್‍ಸ್ಪೆಕ್ಟರ್ ಪ್ರಶಾಂತ್ ವರಣಿ ಅವರಿಗೆ ಥಣಿಸಂದ್ರ ಮುಖ್ಯ ರಸ್ತೆಯ ಸೂರ್ಯ ಕಾಂಕ್ರೀಟ್ ಬಳಿ ಗುರುವಾರ ಮುಂಜಾನೆ ಆರೋಪಿ ದಿನೇಶ್ ಇರುವ ಖಚಿತ ಮಾಹಿತಿ ಲಭ್ಯವಾಗಿದೆ. ತಕ್ಷಣವೇ ಇನ್‍ಸ್ಪೆಕ್ಟರ್ ಪ್ರಶಾಂತ್ ವರಣಿ ಅವರು ಪಿಎಸ್ಸೈ ವಿಂದ್ಯಾ ಹಾಗೂ ಪೇದೆ ಸುಮಂದ್ ಜೊತೆ ಕಾರ್ಯಾಚರಣೆ ಕೈಗೊಂಡಿದ್ದಾರೆ.

ಪೊಲೀಸರ ವಾಹನ ಕಂಡು ದಿನೇಶ್ ಪರಾರಿಯಾಗಲು ಯತ್ನಿಸಿದ್ದು, ಆತನನ್ನು ಹಿಡಿಯಲು ಬೆನ್ನಟ್ಟಿದ ಪಿಎಸ್ಸೈ ವಿಂದ್ಯಾ ಹಾಗೂ ಪೇದೆ ಸುಮಂದ್‍ಗೆ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ಈ ವೇಳೆ ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿ ಶರಣಾಗುವಂತೆ ಸೂಚನೆ ನೀಡಲಾಯಿತಾದರೂ ಮತ್ತೆ ಹಲ್ಲೆಗೆ ಮುಂದಾದಾಗ ಮತ್ತೊಂದು ಸುತ್ತು ಗುಂಡು ಹಾರಿಸಿದ್ದು ಅದು ಕಾಲಿಗೆ ತಗುಲಿ ಸ್ಥಳದಲ್ಲೇ ಕುಸಿದು ಬಿದ್ದಿದ್ದು, ಬಳಿಕ ಆತನನ್ನು ಬಂಧಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News