ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದಾರೆಂದು ಇನ್‍ಸ್ಪೆಕ್ಟರ್ ವಿರುದ್ಧವೇ ದೂರು ನೀಡಿದ ಪೇದೆಗಳು

Update: 2020-11-26 12:21 GMT

ಬೆಂಗಳೂರು, ನ.26: ಠಾಣೆಯಲ್ಲಿ ಕೆಲಸ ನಿರ್ವಹಿಸುವ ಸಿಬ್ಬಂದಿಗಳನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಮಾನಸಿಕ ಹಿಂಸೆ ನೀಡುತ್ತಿದ್ದಾರೆಂದು ಆರೋಪಿಸಿ ಇನ್‍ಸ್ಪೆಕ್ಟರ್ ವಿರುದ್ಧ ಕೆಲ ಸಹೋದ್ಯೋಗಿಗಳೇ ಜಂಟಿ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.

ಜ.18ರಂದು ಕೊಡಿಗೇಹಳ್ಳಿ ಠಾಣೆಗೆ ಬಂದ ಇನ್‍ಸ್ಪೆಕ್ಟರ್ ರಾಘವೇಂದ್ರ ಬಾಬು ಸಿಬ್ಬಂದಿಗಳಿಗೆ ಅವಾಚ್ಯ ಪದಗಳಿಂದ ನಿಂದಿಸುತ್ತಿದ್ದಾರೆ. ಠಾಣೆಗೆ ಬರುವ ದೂರುದಾರರಿಗೂ ಭೀತಿ ಹುಟ್ಟಿಸುತ್ತಿದ್ದಾರೆಂದು ಸಹೋದ್ಯೋಗಿಗಳು ದೂರಿನಲ್ಲಿ ಉಲ್ಲೇಖಿಸಿರುವುದಾಗಿ ತಿಳಿದುಬಂದಿದೆ.

ಅಲ್ಲದೇ, ಠಾಣೆಯ ಮುಖ್ಯಪೇದೆ ರಂಗದಾಮಯ್ಯ ಕಳೆದ ನಾಲ್ಕು ವರ್ಷಗಳಿಂದ ತನಿಖಾ ಬರಹಗಾರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಬೇರೆ ಸಿಬ್ಬಂದಿಗೆ ಅವಕಾಶ ನೀಡುತ್ತಿಲ್ಲ. ಇದೇ ಕಾರಣದಿಂದ ಕೊಡಿಗೇಹಳ್ಳಿ ಪೊಲೀಸ್ ಠಾಣೆ ಭ್ರಷ್ಟಾಚಾರದ ಕೂಪವಾಗಿದೆ ಎಂದು ದೂರಿನಲ್ಲಿ ಹೇಳಲಾಗಿದೆ.

ಠಾಣೆಯ ಕೆಲ ಸಿಬ್ಬಂದಿ ಕಳೆದ ಮೂರು ವರ್ಷಗಳಿಂದ ಹೊಯ್ಸಳ ವಾಹನ ಕರ್ತವ್ಯದಲ್ಲಿ ಮುಂದುವರಿದಿದ್ದಾರೆ. ಇವರು ಠಾಣಾಧಿಕಾರಿಗೆ ಹಣ ಮಾಡಿಕೊಡುತ್ತಿರುವುದರಿಂದ ಬದಲಾವಣೆ ಮಾಡುತ್ತಿಲ್ಲ. ಠಾಣಾಧಿಕಾರಿ ರಾಘವೇಂದ್ರ ಬಾಬು ಅವರು ಸಿಬ್ಬಂದಿ ಜತೆ ಸೌಜನ್ಯಯುತವಾಗಿ ವರ್ತಿಸುವಂತೆ ಎಚ್ಚರಿಕೆ ನೀಡಬೇಕು. ಮುಖ್ಯಪೇದೆ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಒತ್ತಾಯಿಸಿರುವುದಾಗಿ ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News