ಎಂಎಲ್‍ಸಿಗಳಿಗೆ ಸಚಿವ ಸ್ಥಾನ ನೀಡದಂತೆ ಪಿಐಎಲ್: ಪ್ರತಿವಾದಿ ಪಟ್ಟಿಯಿಂದ ರಾಜ್ಯಪಾಲರನ್ನು ಕೈಬಿಡಲು ಹೈಕೋರ್ಟ್ ಸೂಚನೆ

Update: 2020-11-26 14:21 GMT

ಬೆಂಗಳೂರು, ನ.26: ಎಂಎಲ್‍ಸಿಗಳಾಗಿ ಪರಿಷತ್ತಿಗೆ ನೇಮಕವಾಗಿರುವ ಎಂಟಿಬಿ ನಾಗರಾಜ್, ಎಚ್.ವಿಶ್ವನಾಥ್ ಹಾಗೂ ಆರ್.ಶಂಕರ್ ಅವರಿಗೆ ಸಚಿವ ಸ್ಥಾನ ನೀಡದಂತೆ ಕೋರಿ ಸಲ್ಲಿಸಿರುವ ಅರ್ಜಿಯಲ್ಲಿ ಪ್ರತಿವಾದಿಯಾಗಿ ಸೇರಿಸಿರುವ ರಾಜ್ಯಪಾಲರನ್ನು ಕೈಬಿಡುವಂತೆ ಅರ್ಜಿದಾರರಿಗೆ ಹೈಕೋರ್ಟ್ ಸೂಚಿಸಿದೆ.

ಶಾಸಕ ಸ್ಥಾನದಿಂದ ಅನರ್ಹಗೊಂಡು ಪರಿಷತ್ತಿಗೆ ಸೇರ್ಪಡೆಯಾಗಿರುವ ಮೂವರು ಎಂಎಲ್‍ಸಿಗಳಿಗೆ ಸಚಿವ ಸ್ಥಾನ ನೀಡದಂತೆ ಸರಕಾರಕ್ಕೆ ನಿರ್ದೇಶಿಸಿಬೇಕು ಎಂದು ವಕೀಲ ಎ.ಎಸ್.ಹರೀಶ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಈ ವೇಳೆ ಸರಕಾರದ ಪರ ವಾದಿಸಿದ ಅಡ್ವಕೇಟ್ ಜನರಲ್ ಪ್ರಭುಲಿಂಗ ಕೆ. ನಾವದಗಿ ಅವರು, ಎಂ.ಟಿ.ಬಿ.ನಾಗರಾಜ್, ಆರ್.ಶಂಕರ್ ಅವರು ವಿಧಾನಸಭೆಯಿಂದ ಎಂಎಲ್‍ಸಿಯಾಗಿ ಆಯ್ಕೆಯಾಗಿದ್ದಾರೆ. ಇನ್ನು ಹೆಚ್. ವಿಶ್ವನಾಥ್ ಅವರನ್ನು ಸಾಹಿತಿ ಎಂದು ನಾಮನಿರ್ದೇಶನ ಮಾಡಲಾಗಿದೆ. ಹೀಗೆ ಮೂವರನ್ನೂ ವಿಧಾನಪರಿಷತ್‍ಗೆ ರಾಜ್ಯಪಾಲರು ನಾಮನಿರ್ದೇಶನ ಮಾಡಿದ್ದಾರೆ. ನಾಮನಿರ್ದೇಶನ ಮಾಡಲು ರಾಜ್ಯಪಾಲರಿಗೆ ಅಧಿಕಾರವಿದೆ ಎಂದು ವಿವರಿಸಿ, ಎಂಎಲ್‍ಸಿಗಳ ಆಯ್ಕೆಗೆ ಸಂಬಂಧಿಸಿದ ಕಡತವನ್ನು ಸಲ್ಲಿಸಿದರು.

ಹಾಗೆಯೇ, ಪಿಐಎಲ್‍ನಲ್ಲಿ ಕೆಲ ಆಕ್ಷೇಪಾರ್ಹ ಪದ ಬಳಕೆ ಮಾಡಲಾಗಿದೆ. ಅದೇ ರೀತಿ ರಾಜ್ಯಪಾಲರನ್ನು ಪ್ರಕರಣದಲ್ಲಿ ಸೇರಿಸುವಂತಿಲ್ಲ. ಆದರೂ ಅವರನ್ನು ಪ್ರತಿವಾದಿಯಾಗಿ ಸೇರಿಸಿರುವುದು ಸರಿಯಲ್ಲ ಎಂದು ಆಕ್ಷೇಪಿಸಿದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ಅರ್ಜಿದಾರರ ಪರ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಸಮ್ಮತಿ ವ್ಯಕ್ತಪಡಿಸಿ, ಅರ್ಜಿಯಿಂದ ರಾಜ್ಯಪಾಲರ ಹೆಸರು ಕೈಬಿಡುವುದಾಗಿ ಸ್ಪಷ್ಟಪಡಿಸಿದರು. ಈ ಹಿನ್ನೆಲೆಯಲ್ಲಿ ಪ್ರತಿವಾದಿಗಳ ಪಟ್ಟಿಯಿಂದ ರಾಜ್ಯಪಾಲರನ್ನು ಕೈಬಿಡಲು ಅರ್ಜಿದಾರರಿಗೆ ಸೂಚಿಸಿದ ಪೀಠ, ವಿಚಾರಣೆಯನ್ನು ನಾಳೆಗೆ ಮುಂದೂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News