ದುರ್ಬಲಗೊಂಡ ನಿವಾರ್ ಚಂಡಮಾರುತ: ರಾಜ್ಯದ ಕೆಲವೆಡೆ ಜಿಟಿಜಿಟಿ ಮಳೆ

Update: 2020-11-26 16:39 GMT

ಬೆಂಗಳೂರು, ನ.26: ಮೂರು ದಿನದಿಂದ ರಾಜ್ಯದ ದಕ್ಷಿಣ ಒಳನಾಡಿನ ಏಳು ಜಿಲ್ಲೆಗಳ ಜನರಲ್ಲಿ ಆತಂಕ ಮೂಡಿಸಿದ್ದ ನಿವಾರ್ ಚಂಡಮಾರುತ ಗುರುವಾರದ ವೇಳೆಗೆ ದುರ್ಬಲವಾಗಿದ್ದರಿಂದ ನಿರೀಕ್ಷಿತ ಮಟ್ಟದಲ್ಲಿ ಮಳೆ ಆಗಲಿಲ್ಲ. ರಾಜ್ಯದ ಕೆಲವು ಕಡೆಗಳಲ್ಲಿ ಮಾತ್ರ ಜಿಟಿಜಿಟಿ ಮಳೆಯಾಗಿದೆ.

ಬುಧವಾರ ಬೆಳಗ್ಗೆ ವೇಳೆಗೆ ಪುದುಚೇರಿ ದಾಟಿದ ನಂತರ ನಿವಾರ್ ಚಂಡಮಾರುತ ದುರ್ಬಲಗೊಂಡ ಪರಿಣಾಮ ಗುರುವಾರ ಸಂಜೆವರೆಗೆ ದಕ್ಷಿಣ ಒಳನಾಡಿನ ಕೋಲಾರ, ಚಿಕ್ಕಬಳ್ಳಾಪುರದಲ್ಲಿ ತುಸು ಅಧಿಕ ಮಳೆ ಸುರಿದಿದೆ. ಇದರ ಹೊರತು ಎಲ್ಲಿಯೂ ನಿರೀಕ್ಷಿತ ಧಾರಾಕಾರ ಮಳೆ ಬಂದಿಲ್ಲ. ಗುರುವಾರ ರಾತ್ರಿಯಿಂದ ಶುಕ್ರವಾರ ಬೆಳಗ್ಗೆವರೆಗೆ ಅಧಿಕ ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ತಿಳಿಸಿದೆ.

ಬಂಗಾಳಕೊಲ್ಲಿ ನೈಋತ್ಯ ಭಾಗದಲ್ಲಿ ಸೃಷ್ಟಿಯಾಗಿದ್ದ ನಿವಾರ್ ಚಂಡಮಾರುತ ವಾಯವ್ಯ ಮಾರ್ಗವಾಗಿ ಅತೀ ವೇಗವಾಗಿ ಬೀಸಿ ಆರ್ಭಟಿಸಿತ್ತು. 130 ಕಿ.ಮೀ.ಗಿಂತಲೂ ಹೆಚ್ಚು ವೇಗದಲ್ಲಿ ಬೀಸಿದ್ದ ಗಾಳಿ ತಾನು ಹಾದು ಹೋದ ತಮಿಳುನಾಡು, ಚೆನ್ನೈ, ಕಾರೈಕಲ್ ಮತ್ತು ಪುದುಚೇರಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರಿ ಮಳೆ ಸುರಿಸಿ ಅವಾಂತರ ಉಂಟು ಮಾಡಿತು. ಅದೇ ರೀತಿ ರಾಜ್ಯದ ದಕ್ಷಿಣ ಒಳನಾಡಿನ ಏಳು ಜಿಲ್ಲೆಗಳಲ್ಲಿ ಧಾರಾಕಾರ ಮಳೆ ಬರಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಗುರುವಾರದ ಹೊತ್ತಿಗೆ ನಿವಾರ್ ಚಂಡಮಾರುತದ ಆರ್ಭಟ ಕಡಿಮೆ ಆಗಿದ್ದರಿಂದ ಇಡೀ ದಿನ ಉದ್ದೇಶಿತ ಜಿಲ್ಲೆಗಳಲ್ಲಿ ಅಷ್ಟಾಗಿ ಮಳೆ ಕಂಡು ಬರಲಿಲ್ಲ.

ನಿವಾರ್ ಚಂಡಮಾರುತದ ಪ್ರಭಾವ ನ.27ರ ಶುಕ್ರವಾರದ ವೇಳೆಗೆ ಮತ್ತಷ್ಟು ಕಡಿಮೆಯಾಗುವ ಮುನ್ಸೂಚನೆ ಇದ್ದರೂ ಕೂಡ ರಾಜ್ಯದ ದಕ್ಷಿಣ ಒಳನಾಡಿನ ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ತುಮಕೂರು, ಮಂಡ್ಯ ಬೆಂಗಳೂರು ನಗರ ಮತ್ತು ಗ್ರಾಮಾಂತರದಲ್ಲಿ ಸಾಧಾರಣ ಮಳೆ ನಿರೀಕ್ಷೆಯಿದೆ. ಹೀಗಾಗಿ ಈ ಎಲ್ಲ ಜಿಲ್ಲೆಗಳಿಗೆ ನ.27ಕ್ಕೆ ಒಂದು ದಿನ ‘ಯೆಲ್ಲೋ ಅಲರ್ಟ್’ ಎಚ್ಚರಿಕೆ ನೀಡಲಾಗಿದೆ. ಎಲ್ಲ ಕಡೆ ಚಳಿಯ ಮತ್ತು ಮೋಡ ಕವಿದ ವಾತಾವರಣ ಮುಂದುವರಿಯುವ ಸಾಧ್ಯತೆಯಿದ್ದು, ಕರಾವಳಿ ಹಾಗೂ ಉತ್ತರ ಒಳನಾಡಿನ ಭಾಗದ ಕೆಲವು ಕಡೆಗಳಲ್ಲಿ ಸಾಮಾನ್ಯ ಮಳೆ ಬೀಳುವ ಸಂಭವವಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಜಿಟಿಜಿಟಿ ಮಳೆ: ಜನಜೀವನ ಅಸ್ತವ್ಯಸ್ತ

ನಿವಾರ್ ಚಂಡಮಾರುತ ಪರಿಣಾಮ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಗುರುವಾರ ದಿನವಿಡೀ ಜಿಟಿಜಿಟಿ ಮಳೆಯಾಗಿದ್ದರಿಂದ ಜನಜೀವನ ಅಸ್ತವ್ಯಸ್ತವಾಗಿತು. ಬೆಳಗ್ಗೆಯಿಂದಲೇ ಆರಂಭವಾದ ಜಿಟಿ ಜಿಟಿ ಮಳೆ ರಾತ್ರಿವರೆಗೂ ಮುಂದುವರಿಯಿತು. ಸ್ವಲ್ಪ ಹೊತ್ತು ಜೋರಾಗಿ ಬಂದರೆ, ಬಿಡುವಿನ ಸಂದರ್ಭದಲ್ಲಿ ಸೋನೆ ಮಳೆಯ ರೀತಿಯಲ್ಲಿ ಹನಿಯುತ್ತಲೇ ಇತ್ತು. ಇದರಿಂದ ವಾಹನ ಸವಾರರು ಹಾಗೂ ಸಾರ್ವಜನಕಕರು ಪರದಾಡುವಂತಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News