243 ಕೋಟಿ ರೂ. ವೆಚ್ಚದ ಬೃಹತ್ ನೀರಾವರಿ ಯೋಜನೆ ಕಾಮಗಾರಿಗಳಿಗೆ ಸಿಎಂ ಚಾಲನೆ

Update: 2020-11-26 17:56 GMT

ಬೆಂಗಳೂರು, ನ.26: ಜಲಸಂಪನ್ಮೂಲ ಇಲಾಖೆ, ರಾಜ್ಯ ನೀರಾವರಿ ನಿಗಮದ ವತಿಯಿಂದ 243.35 ಕೋಟಿ ರೂ.ಗಳ ವೆಚ್ಚದಲ್ಲಿ ವಿಜಯನಗರ (ಹೊಸಪೇಟೆ) ಕ್ಷೇತ್ರ ವ್ಯಾಪ್ತಿಯ ಪಾಪಿನಾಯನಕನಹಳ್ಳಿ ಹಾಗೂ ಸುತ್ತಮುತ್ತಲಿನ 22 ಗ್ರಾಮಗಳಿಗೆ ಏತ ನೀರಾವರಿ ಮೂಲಕ ಶಾಶ್ವತ ಕುಡಿಯುವ ನೀರು ಪೂರೈಸುವ ಮತ್ತು 22 ಕೆರೆಗಳನ್ನು ತುಂಬಿಸುವ ಬೃಹತ್ ನೀರಾವರಿ ಯೋಜನೆಗಳಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವರ್ಚುಯಲ್ ವೇದಿಕೆ ಮೂಲಕ ಗುರುವಾರ ಚಾಲನೆ ನೀಡಿದರು.

ಹೊಸಪೇಟೆ ತಾಲೂಕಿನ ಪಾಪಿನಾಯಕನಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳು ತುಂಗಭದ್ರಾ ಬಲದಂಡೆ ಮೇಲ್ಮಟ್ಟದ ಕಾಲುವೆಯ ಮೇಲ್ಭಾಗದಲ್ಲಿ ಬರುತ್ತಿದ್ದು, ಈ ಗ್ರಾಮಗಳು ಗಣಿ ಬಾಧಿತ ಹಾಗೂ ಅತಿ ಹಿಂದುಳಿದ ಗ್ರಾಮಗಳಾಗಿದ್ದು, ಇವುಗಳು ಸುಸ್ಥಿರ, ಸುರಕ್ಷಿತ ಕುಡಿಯುವ ನೀರಿನ ಬವಣೆಯನ್ನು ಅನುಭವಿಸುತ್ತಿವೆ. ಈ ಹಿನ್ನೆಲೆಯಲ್ಲಿ ಈ ಗ್ರಾಮಗಳಿಗೆ ತುಂಗಭದ್ರಾ ನದಿಯಿಂದ ನೀರನ್ನು ಎತ್ತಿ ಕೆರೆಗಳನ್ನು ತುಂಬಿಸುವುದು ಮತ್ತು ಇಂಪೌಂಡಿಂಗ್ ಕೆರೆಗಳನ್ನು ನಿರ್ಮಿಸಿ ನೀರನ್ನು ಸಂಗ್ರಹಿಸಲು ಈ ಯೋಜನೆ ಅಡಿ ನಿರ್ಧರಿಸಲಾಗಿದೆ.

ಪಾಪಿನಾಯಕನಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳು ಅತಿ ಹಿಂದುಳಿದ ಗಣಿ ಭಾದಿತ ಹಾಗೂ ಕುಡಿಯುವ ನೀರಿನ ಭಾದಿತ ಗ್ರಾಮಗಳಾಗಿವೆ. ಈ ಯೋಜನೆಯ ಅಡಿಯಲ್ಲಿ 10 ಗ್ರಾಮಗಳ ವ್ಯಾಪ್ತಿಯಲ್ಲಿ ಬರುವ ಹಾಲಿ 22 ಕೆರೆಗಳಿಗೆ ಮತ್ತು ಹೊಸ 4 ಇಂಪೌಂಡಿಗ್ ರಿಸರ್ವಯರ್ ಗಳನ್ನು ನಿರ್ಮಿಸಿ ತುಂಗಭದ್ರಾ ನದಿಯಿಂದ ನಿಂಬಾಪುರ, ಗ್ರಾಮದ ಹತ್ತಿರ ಜಾಕ್ವೆಲ್ ನಿರ್ಮಿಸಿ ರೈಸಿಂಗ್ ಮೇನ್ ಮತ್ತು ವಿತರಣಾ ಪೈಪ್ ಲೈನ್ ಮುಖಾಂತರ 0.304 ಟಿ.ಎಂ.ಸಿ. ನೀರನ್ನು ತುಂಬಿಸಲು ಯೋಜಿಸಲಾಗಿದೆ.

ಇಂಗಳಿಗಿ, ಬೈಲುವದ್ದಿಗೇರಿ, ಕಾಕುವಾಳು, ಚಿನ್ನಾಪುರ, ನಲ್ಲಾಪುರ, ಗಾಳೇಮ್ಮಗುಡಿ, ಭುವನಹಳ್ಳಿ, ಜೋಗ, ಗಾದಿಗನೂರು, ಕಾರಿಗನೂರು, ವಡ್ಡರಹಳ್ಳಿ, ಧರ್ಮಸಾಗರ, ಕೊಟಗಿನಹಾಳ್, ಗುಂಡ್ಲವದ್ದಿಗೇರಿ ಗ್ರಾಮಗಳ 22 ಕೆರೆಗಳಿಗೆ ನೀರನ್ನು ತುಂಬಿಸಲಾಗುತ್ತದೆ.

ಈ ಯೋಜನೆಯಿಂದ ಹೊಸಪೇಟೆ ತಾಲೂಕಿನ 10 ಗ್ರಾಮಗಳ 22 ಕೆರೆಗಳನ್ನು ತುಂಬಿಸುವುದರಿಂದ ಅಂತರ್ಜಲ ಮಟ್ಟ ಹೆಚ್ಚಾಗಿ ಕೊಳವೆ ಬಾವಿಗಳು ಪುನಶ್ಚೇತನಗೊಳ್ಳುತ್ತವೆ ಮತ್ತು ಗ್ರಾಮಗಳ ಜನ ಜಾನುವಾರುಗಳಿಗೆ ಶಾಶ್ವತ ಸುಸ್ಥಿರ ಕುಡಿಯುವ ನೀರನ್ನು ಒದಗಿಸಲು ಅನುವಾಗುವುದು ಮತ್ತು ಕೆರೆಗಳಡಿಯಲ್ಲಿ ಬರುವ ನೀರಾವರಿ ಕ್ಷೇತ್ರ ಅಭಿವೃದ್ಧಿಗೊಳ್ಳುತ್ತದೆ.

ಈ ಯೋಜನೆಗೆ ಸರಕಾರದಿಂದ 243.35 ಕೋಟಿ ರೂ.ಗಳಿಗೆ ಆಡಳಿತಾತ್ಮಕ ಅನುಮೋದನೆಯಾಗಿದ್ದು ಪ್ರಸ್ತುತ ಟೆಂಡರ್ ಮೂಲಕ ಕಾಮಗಾರಿಯನ್ನು ಹೊಸಪೇಟೆಯ ಪ್ರಥಮ ದರ್ಜೆಯ ಗುತ್ತಿಗೆದಾರ ದೊಡ್ಡ ಹನುಮಂತಪ್ಪ ಮತ್ತು ಮೇ.ಸುಧಾಕರ ಇನ್ಫ್ರಾಟೆಕ್, ಪ್ರೈ.ಲೀ ಹೊಸಪೇಟೆ ಜಂಟಿ ಸಹಭಾಗಿತ್ವದೊಂದಿಗೆ ನಿರ್ವಹಿಸಲು ವಹಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News