ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ‘ಕುವೆಂಪು ಸಾಹಿತ್ಯ ಸರಣಿ’ ಸಂಪುಟಗಳನ್ನು ಹಿಂಪಡೆಯಿರಿ

Update: 2020-11-26 17:18 GMT

ಕನ್ನಡ ವಿಶ್ವವಿದ್ಯಾನಿಲಯವು, ರಾಷ್ಟ್ರಕವಿ ಕುವೆಂಪು ಅವರ ಹೆಸರಿನಲ್ಲಿ 12 ಸಂಪುಟಗಳನ್ನು ಗಜಗರ್ಭದಿಂದ ಇದೀಗ ಹೊರ ತೆಗೆದು ಮಾರಾಟಕ್ಕೆ ಇಟ್ಟಿದೆ. ಅಂದರೆ 2017ರಿಂದ 2020ರ ವರೆಗೆ ಪ್ರಕಟಿಸಿಯೂ ಮೂಲೆಪಾಲು ಆಗಲು ವಿಶ್ವವಿದ್ಯಾನಿಲಯದಲ್ಲಿನ ರಾಜಕೀಯ ಸಂಘರ್ಷವೇ ಕಾರಣವೋ? ರಟ್ಟಿನ ಮೇಲೆ ಇಲ್ಲದ ಸಂಪಾದಕನ ಹೆಸರು, ಈಗ ಜಾಕೆಟ್ ಸೃಷ್ಟಿಸಿ, ಕುವೆಂಪು ಭಾವಚಿತ್ರಗಳನ್ನು ಮರೆಮಾಚಿದ ಹೀನಕೃತ್ಯ ಎಸಗಲು ಆಡಳಿತ ಮಂಡಳಿಗೆ ಮೂರು ವರ್ಷ ಹಿಡಿಯಿತೇ? ಇಷ್ಟಾಗಿಯೂ ಕುವೆಂಪು ಅವರ ಮಹಾಕಾವ್ಯ, ಮಹಾಕಾದಂಬರಿ ಇತ್ಯಾದಿ ಕೃತಿಗಳ ಮೇಲೆ ಯಾವ ಪುರುಷಾರ್ಥಕ್ಕಾಗಿ ಈ ಸಂಪಾದಕನ ಹೆಸರನ್ನು ಬಳಸಬೇಕಾಗಿ ಬಂದಿದೆ? ಇದು ಒಪ್ಪಿತವಾದರೆ, ಮುಂದೆ ಪುಸ್ತಕ ಪ್ರಕಟನಾ ರಂಗದಲ್ಲಿ, ಸಂಪಾದಕನ ಹೆಸರಿನಿಂದಲೇ ಅಭಿಜಾತ ಲೇಖಕರು, ಕೃತಿಗಳನ್ನು ಉಲ್ಲೇಖಿಸುವ ದುರಂತ ಒದಗುವುದಿಲ್ಲವೇ?

ಕುವೆಂಪು ಅಭಿಮಾನಿಗಳು, ಕನ್ನಡದ ಎಲ್ಲ ಸ್ತರದ ಓದುಗರು, ಪುಸ್ತಕ ಸಂಗ್ರಾಹಕರು, ಎಷ್ಟೆಷ್ಟು ಬಾರಿ ಓಡಿಹೋಗಿ ಇಂತಹ ಕುವೆಂಪು ಸಮಗ್ರ ಕೃತಿಗಳನ್ನು ಮನೆಗೆ ತಂದು ಇಟ್ಟುಕೊಳ್ಳಲು ಸಾಧ್ಯ? ಈ ಹಿಂದೆಯೇ 2013ರಲ್ಲಿಯೇ ಕುಪ್ಪಳಿಯ ‘ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ’ದವರು ಹೊರತಂದ ಸಮಗ್ರಕೃತಿಗಳಿಗೂ ಈಗಿನ ಕನ್ನಡ ವಿಶ್ವವಿದ್ಯಾನಿಲಯದ ಸಮಗ್ರಕೃತಿಗಳಿಗೂ ಯಾವ ರೀತಿ ಭಿನ್ನ? ಸಂಪಾದಕನೊಬ್ಬನ ತೆವಲಿಗೆ ಕನ್ನಡ ವಿಶ್ವವಿದ್ಯಾನಿಲಯದ ಮೂರ್ಖತನಕ್ಕೆ ಇಡೀ ಪುಸ್ತಕಗಳನ್ನು ಭಾರೀ ಮೊತ್ತ ತೆತ್ತು ತೆಗೆದಿಟ್ಟುಕೊಳ್ಳಬೇಕೇ? ಏಕೆಂದರೆ, ಏನೋ ಸಂಶೋಧನೆ ಮಾಡಿರಬಹುದು ಎಂಬ ಭ್ರಮೆಗೆ ಬಿಡಿ ಬಿಡಿ ಪುಸ್ತಕಗಳು ಮಾರಾಟಕ್ಕೆ ಸಿಗದೇ ಇರುವುದರಿಂದ ನಾಡಿನ ಓದುಜನಗಳ ಮೇಲೆ ಗ್ರಂಥಾಲಯಗಳ ಮೇಲೆ ಮಾಡಿದ ಮೋಸ, ವಂಚನೆ, ದೌರ್ಜನ್ಯವಲ್ಲವೇ ಇದು?

ಇಷ್ಟಕ್ಕೂ ಈ ಸಂಪಾದಕನ ದುರಹಂಕಾರಕ್ಕೆ ಒಂದು ವಿಶ್ವವಿದ್ಯಾನಿಲಯ ಹೀಗೆ ಬಲಿಯಾಗಬೇಕಾಗಿ ಬಂದಿತೇ? ‘ಶ್ರೀರಾಮಾಯಣ ದರ್ಶನಂ’ ಮಹಾಕಾವ್ಯ ರಚನೆಗೂ ಮುನ್ನವೇ 1931ರಲ್ಲಿಯೇ ಪ್ರಕಟವಾದ ‘ಸಮುದ್ರಲಂಘನ’ವೆಂಬ ಕಥನಕಾವ್ಯವನ್ನು ಇಲ್ಲಿನ ಸಂಪುಟ 2ರಲ್ಲಿ ಹಾಕಿರುವುದು ಮಾತ್ರವೇ ಅಲ್ಲ, ಕುವೆಂಪು ‘ಕೃತಿಸೂಚಿ’ಯಲ್ಲಿಯೂ 1981ರಲ್ಲಿ ಎಂದೇ ದಾಖಲಿಸಿರುವುದು ಯಾವ ಬಗೆಯ ಸಂಪಾದಕತ್ವದ ಹಿರಿಮೆಯೋ ಕಂಡುಬರುತ್ತಿಲ್ಲ. ಆ ಕೃತಿ ಶೋಧಿಸಿದ್ದು ಪ್ರೊ. ಕ.ವೆಂ. ರಾಜಗೋಪಾಲರು. ಪ್ರಕಟಿಸಿದ್ದು ಶ್ರೀ ಕುವೆಂಪು ವಿದ್ಯಾವರ್ಧಕ ಟ್ರಸ್ಟ್ ಮೈಸೂರಿನವರು. ಆ ಉಲ್ಲೇಖಗಳೇ ಇಲ್ಲವೇ? ಅದೇ ರೀತಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಪ್ರಕಟಿಸಿರುವ ಮಹಾಕಾವ್ಯದ ಹಸ್ತಪ್ರತಿಗೂ ಮುದ್ರಿತ ಕೃತಿಗೂ ಇರುವ ಎಷ್ಟೋ ಸೂಕ್ಷ್ಮಭೇದಗಳನ್ನು ಗುರುತಿಸಲಾಗದೆ ಇರುವುದು, ವಿದ್ವತ್ ಲೋಕಕ್ಕೆ ಮಾಡಿದ ಅವಮಾನ, ಅನ್ಯಾಯ, ಅಪಚಾರವಲ್ಲವೇ?

ಇವಕ್ಕೂ ಮೀರಿ, ಹಾಸ್ಯಾಸ್ಪದ ಲಜ್ಜೆಗೇಡಿತನದ ಸಂಗತಿ ಎಂದರೆ: 1974ರಲ್ಲಿ ಪ್ರಕಟವಾದ ‘ಕುವೆಂಪು ಪತ್ರಗಳು’ (ಸಂಪಾದಕ ಹರಿಹರಪ್ರಿಯ) ಕೃತಿಯನ್ನು ಕುವೆಂಪು ಕೃತಿಸೂಚಿಯಲ್ಲಿ ಸೇರ್ಪಡೆ ಮಾಡಿರುವುದು. ಸಾಕ್ಷಾತ್ ರಾಷ್ಟ್ರಕವಿ ಕುವೆಂಪು ಅವರೇ ತಮ್ಮ ಮಹಾನ್ ಕೃತಿ ‘ನೆನಪಿನ ದೋಣಿಯಲ್ಲಿ’ ಆತ್ಮಕಥೆಯಲ್ಲಿಯೇ, ‘ಹರಿಹರಪ್ರಿಯ ಸಂಪಾದಿತ ಕುವೆಂಪು ಪತ್ರಗಳು’ ಎಂದು ಹಲವೆಡೆ ಉಲ್ಲೇಖಿಸಿರುವಾಗ ಈ ಘನಂದಾರಿ ವಿದ್ವಾಂಸ ಕುಚೇಷ್ಟೆಗೋ ಹುಚ್ಚುತನಕ್ಕೋ ಓದುಗರಲ್ಲಿ, ಅಧ್ಯಯನಕಾರರಲ್ಲಿ ಸಂಶಯ ಬಿತ್ತಿರುವುದು ಕ್ಷಮಾರ್ಹವಲ್ಲ. ಅಲ್ಲದೆ, ‘ಕುವೆಂಪು ಪತ್ರಗಳು’ ಸಂಕಲನದಿಂದಲೇ ಹಲವು ಪತ್ರಗಳನ್ನು ಅನಾಮತ್ ಎತ್ತಿ ಹಾಕಿಕೊಂಡಿರುವುದಲ್ಲದೇ, ಹರಿಹರಪ್ರಿಯ ಸಂಗ್ರಹಿಸಿ ಟಿಪ್ಪಣಿ ಬರೆದದ್ದನ್ನೆಲ್ಲ ಯಥಾವತ್ ಹೆಸರು ನಮೂದಿಸದೆ ಬಳಸಿಕೊಂಡು, ಸಮಗ್ರ ಕೃತಿ ಪ್ರಕಟಿಸಿರುವುದು ಒಂದು ಪ್ರತಿಷ್ಠಿತ ವಿಶ್ವವಿದ್ಯಾನಿಲಯಕ್ಕೆ ಘನತೆ ತರುವಂತಹುದೋ? ನ್ಯಾಯಯುತವಾದುದೋ? ಇದು ಅಕಾಡಮಿಕ್ ಮಾದರಿಯೇ?

ಕುವೆಂಪು ಅವರ ಅನೇಕ, ಅಮೂಲ್ಯ ಮುನ್ನುಡಿಗಳನ್ನು ಸಂ-ಶೋಧಿಸಲಾಗದೆ ಮೈಗಳ್ಳತನದಿಂದ ‘ಕುಪ್ಪಳಿ ಆವೃತ್ತಿ’ಯನ್ನೇ ಮಕ್ಕೀಕಾ ಮಕ್ಕಿ ‘ಕನ್ನಡ ವಿಶ್ವವಿದ್ಯಾನಿಲಯ ಆವೃತ್ತಿ’ಯಲ್ಲಿ ಬಳಸಿಕೊಂಡಿರುವುದು ಏನೋ ಹೀನ ಕುತಂತ್ರವೇ ಆಗಿರುವಂತಿದೆ. ಈ ಮಾತಿಗೆ ಸಂಪಾದಕೀಯದಲ್ಲಿ ವಿಷಪೂರಿತವಾಗಿಯೂ, ಕೀಳುಮಟ್ಟದಲ್ಲಿಯೂ, ವ್ಯಕ್ತಿದ್ವೇಷದಿಂದಲೂ ಬರೆದಿರುವುದು ಕುವೆಂಪು ಸಾಹಿತ್ಯಕ್ಕೆ ಶೋಭೆ ತರುವಂತಹುದಲ್ಲ. ಇದನ್ನು ಕನ್ನಡ ವಿಶ್ವವಿದ್ಯಾನಿಲಯವು ಹೇಗೆ ಸಮರ್ಥಿಸಿಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ. ಸಂಪಾದಕ ಸಲಹಾ ಮಂಡಳಿಯಾಗಲೀ, ಆಡಳಿತ ಮಂಡಳಿಯಾಗಲೀ ಇದ್ದೂ ಇಷ್ಟು ಬೇಜವಾಬ್ದಾರಿಯಿಂದ ಪುಸ್ತಕ ಪ್ರಕಟನೆಗೆ ಸಮ್ಮತಿಸಿವೆ ಎಂದರೆ ನಂಬಲಿಕ್ಕೂ ಸಾಧ್ಯವಾಗುತ್ತಿಲ್ಲ!!

ಕುವೆಂಪು ಅವರ ಅನೇಕ ಕೃತಿಗಳು, ಲೇಖನಗಳು ಸಮಗ್ರ ಎನ್ನುವ ಈ ಸರಣಿಯಲ್ಲಿ ಸೇರ್ಪಡೆಗೊಂಡೇ ಇಲ್ಲವೇ! ಉದಾಹರಣೆಗೆ; 1980ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸಿರುವ ‘ವಿಜ್ಞಾನ ದೃಷ್ಟಿ’ (ಡಾ.ಪ್ರಭುಶಂಕರರ ಜೊತೆ), ಈ ಸಮಗ್ರದಲ್ಲಿ ಎಲ್ಲಿ ಸೇರಿದೆ? ಈ ಎಲ್ಲ ಹೀನಕೃತ್ಯಗಳಿಂದ ಕುವೆಂಪು ಅವರ ಹೆಸರಿಗೆ ಮಸಿ ಬಳಿದಂತಾಯಿತೇ. ಕುವೆಂಪು ಓದುಗರಿಗೆ ದಿಕ್ಕು ತಪ್ಪಿಸುವಂತಹ ಪರಿಪಾಠವಾಯಿತೇ. ಪುಸ್ತಕ ಪ್ರಕಟನೆ ಹಾಗೂ ಸಂಶೋಧನೆ ಹೆಸರಿನಲ್ಲಿ ಇಂತಹ ಸಂಪಾದಕನ ಸಂಬಳ, ಭತ್ತೆ ಇತ್ಯಾದಿಯಿಂದ; ವಿಶ್ವವಿದ್ಯಾನಿಲಯದ, ಸರಕಾರದ ಬೊಕ್ಕಸಕ್ಕೆ ಅಪಾರ ಹಾನಿ ಉಂಟಾಗಿರುವುದು ಶೋಚನೀಯವಾದ ವಿಷಯವಾಗಿದೆ.

ಕೊನೆಗೆ, ಅತ್ಯಂತ ನೋವಿನಿಂದ, ದುಃಖದಿಂದ, ವಿಷಾದದಿಂದ ಸಂಬಂಧಪಟ್ಟ ಎಲ್ಲರಲ್ಲಿಯೂ ನಾನು ಕೇಳುವುದು ಇಷ್ಟೆ: ಕನ್ನಡ ವಿಶ್ವವಿದ್ಯಾನಿಲಯದಿಂದ ಆಗಬಾರದ ಅಚಾತುರ್ಯ, ಅನಾಹುತ ಅಪಾಯಕಾರಿ ಮಾದರಿಯಿಂದ ದುಷ್ಪರಿಣಾಮ ಉಂಟು ಮಾಡಲಿರುವ, ಈ ಕುವೆಂಪು ಕೃತಿ ಸರಣಿಯನ್ನು ಈ ಕೂಡಲೇ ಮಾರಾಟ ಮಾಡುವುದನ್ನು ನಿಲ್ಲಿಸಬೇಕಾಗಿಯೂ, ಸಂಪಾದಕನ ಮೇಲೆ ತೀವ್ರ ರೀತಿಯ ಕ್ರಮ ಕೈಗೊಳ್ಳಬೇಕಾಗಿಯೂ, ಈಗಾಗಲೇ ಕೊಂಡವರ ಹಣ ಹಿಂದಿರುಗಿಸಬೇಕಾಗಿಯೂ ಸಾರ್ವಜನಿಕ ಮನವಿ ಮಾಡುತ್ತಿದ್ದೇನೆ.

Writer - ಪುಸ್ತಕಮನೆ ಹರಿಹರಪ್ರಿಯ

contributor

Editor - ಪುಸ್ತಕಮನೆ ಹರಿಹರಪ್ರಿಯ

contributor

Similar News