ಸಂವಿಧಾನದ ರಕ್ಷಣೆಯಲ್ಲಿ ದೇಶದ ಐಕ್ಯತೆ ಅಡಗಿದೆ: ಡಿ.ಶಿವಶಂಕರ್

Update: 2020-11-26 17:35 GMT

ಬೆಂಗಳೂರು, ನ. 26: ಡಾ.ಬಿ.ಆರ್. ಅಂಬೇಡ್ಕರ್ ಅವರು ರಚಿಸಿರುವ ಸಂವಿಧಾನದ ರಕ್ಷಣೆಯಲ್ಲಿ ಭಾರತ ದೇಶದ ಐಕ್ಯತೆ ಮತ್ತು ಸಮಗ್ರತೆ ಅಡಗಿದೆ. ಹೀಗಾಗಿ ನಮ್ಮ ದೇಶದ ಸಂವಿಧಾನದ ರಕ್ಷಣೆ ನಮ್ಮೆಲ್ಲರ ಹೊಣೆ ಎಂದು ರಾಜ್ಯ ಸರಕಾರಿ ಎಸ್ಸಿ-ಎಸ್ಟಿ ನೌಕರರ ಸಮನ್ವಯ ಸಮಿತಿ ಅಧ್ಯಕ್ಷ ಡಿ.ಶಿವಶಂಕರ್ ಇಂದಿಲ್ಲಿ ಸಲಹೆ ಮಾಡಿದ್ದಾರೆ.

ಗುರುವಾರ ಇಲ್ಲಿನ ಆರ್‌ಸಿ ಕಾಲೇಜಿನಲ್ಲಿ ಏರ್ಪಡಿಸಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಅಂಬೇಡ್ಕರ್ ಅವರು ಸಂವಿಧಾನ ರಚಿಸಿಲ್ಲ ಎಂಬ ಚರ್ಚೆ ನಡೆಯುತ್ತಿದೆ. ಆದರೆ, ಡಾ.ಬಿ.ಆರ್. ಅಂಬೇಡ್ಕರ್ ಅವರು ಎರಡು ವರ್ಷ 11 ತಿಂಗಳು ಮತ್ತು 17 ದಿನಗಳು ಶ್ರಮವಹಿಸಿ ಪ್ರಪಂಚದಲ್ಲೇ ಅತ್ಯಂತ ಉತ್ತಮವಾದ ಸಂವಿಧಾನವನ್ನು ರಚನೆ ಮಾಡಿದ್ದಾರೆ ಎಂದು ಹೇಳಿದರು.

ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರು ಸಂವಿಧಾನವನ್ನು ಸಮಗ್ರವಾಗಿ ಅಧ್ಯಯನ ಮಾಡಿ ಅರಿತುಕೊಳ್ಳಬೇಕು. ಆ ಮೂಲಕ ಸಂವಿಧಾನದ ಚೌಕಟ್ಟಿನಲ್ಲಿ ಕೆಲಸ ಮಾಡಲು ಹೆಚ್ಚು ಅನುಕೂಲವಾಗಲಿದೆ ಎಂದ ಅವರು, ದೇಶದ ಭದ್ರತೆ ಸಂವಿಧಾನದ ಭದ್ರತೆಯಲ್ಲಿ ಅಡಗಿದೆ ಎಂದು ಸಲಹೆ ಮಾಡಿದರು.

ಪ್ರಪಂಚದಲ್ಲೆ ಅತ್ಯಂತ ಶ್ರೇಷ್ಟ ಸಂವಿಧಾನ ನಮ್ಮದು. ಈ ಹೆಗ್ಗಳಿಕೆಗೆ ಹತ್ತು- ಹಲವು ಕಾರಣಗಳಿವೆ. ಇಲ್ಲಿನ ಸಾವಿರಾರು ಜಾತಿ, ನೂರಾರು ಸಂಸ್ಕೃತಿ, ಹತ್ತಾರು ಧರ್ಮಗಳಿದ್ದರೂ ಎಲ್ಲರೂ ಒಗ್ಗಟ್ಟಿನಿಂದ ಬದುಕುತ್ತಿದ್ದೇವೆ ಎಂದರೆ ಅದಕ್ಕೆ ನಮ್ಮ ಸಂವಿಧಾನವೇ ಮೂಲ ಕಾರಣ ಎಂದು ಅವರು ವಿಶ್ಲೇಷಿಸಿದರು.

ಅಂಬೇಡ್ಕರ್ ಅವರಿಗಿದ್ದ ಮುನ್ನೋಟದ ಫಲವಾಗಿಯೇ ಅವರು ಅಂದೇ ರೈತರಿಗೆ ಸಮರ್ಪಕ ವಿದ್ಯುತ್ ಪೂರೈಕೆ, ಅಗತ್ಯ ನೀರಿನ ಪೂರೈಕೆ ದೃಷ್ಟಿಯಿಂದ ಜಲಾಶಯಗಳ ನಿರ್ಮಾಣ ಸೇರಿದಂತೆ ಹಲವು ಯೋಜನೆಗಳನ್ನು ರೂಪಿಸಿ, ಅನುಷ್ಟಾನಕ್ಕೆ ಶ್ರಮಿಸಿದರು ಎಂದು ಶಿವಶಂಕರ್ ನೆನಪು ಮಾಡಿಕೊಂಡರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆರ್‌ಸಿ ಕಾಲೇಜಿನ ಪ್ರಾಂಶುಪಾಲ ಡಾ.ಅಜೀಝ್ ಅಹ್ಮದ್‌ಖಾನ್ ವಹಿಸಿದ್ದರು. ಡಾ.ಎನ್.ನರಸಿಂಹರಾಜು, ಡಾ.ಜಯಲಕ್ಷ್ಮಮ್ಮ, ಪ್ರೊ.ಗೋವಿಂದಪ್ಪ, ಡಾ.ಪ್ರಕಾಶ್, ಪ್ರೊ.ಶಿವಕುಮಾರ್, ಪ್ರೊ.ಚಂದನ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News