ಸರಕಾರದ್ದು ಸೇರಿ 30ಕ್ಕೂ ಹೆಚ್ಚು ವೆಬ್‍ಸೈಟ್‍ಗಳನ್ನು ಹ್ಯಾಕ್ ಮಾಡಿದ್ದ ಶ್ರೀಕೃಷ್ಣ

Update: 2020-11-26 17:44 GMT

ಬೆಂಗಳೂರು, ನ.26: ಇಲ್ಲಿನ ಕೆಂಪೇಗೌಡ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಡ್ರಗ್ಸ್ ಪ್ರಕರಣದಲ್ಲಿ ಬಂಧನವಾಗಿರುವ ಆರೋಪಿ ಶ್ರೀಕೃಷ್ಣ, ರಾಜ್ಯ ಸರಕಾರದ ವೆಬ್‍ಸೈಟ್ ಸೇರಿದಂತೆ ಇದುವರೆಗೂ 30ಕ್ಕೂ ಹೆಚ್ಚು ವೆಬ್‍ಸೈಟ್‍ಗಳನ್ನು ಹ್ಯಾಕ್ ಮಾಡಿರುವ ಮಾಹಿತಿ ಸಿಸಿಬಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಗುರುವಾರ ಪ್ರಕರಣ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ನಗರ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್, ಆರೋಪಿ ಶ್ರೀಕೃಷ್ಣ ಎಂಬಾತನನ್ನು ಬಂಧಿಸಿ ಡಿ. 1ರವರೆಗೂ ಪೊಲೀಸ್ ಕಸ್ಟಡಿಗೆ ತೆಗೆದುಕೊಂಡು ವಿಚಾರಣೆ ನಡೆಸಿದ್ದೇವೆ. ತನಿಖೆ ವೇಳೆ ಈತ 30 ವೆಬ್‍ಸೈಟ್‍ಗಳನ್ನು ಹ್ಯಾಕ್ ಮಾಡಿದ್ದಾನೆ ಎಂದರು.

ಇನ್ನು, ಈ ಪ್ರಕರಣದ ಇತರೆ ಆರೋಪಿಗಳಾದ ಸುನೀಶ್, ಹೇಮಂತ್, ಪ್ರಸಿದ್ ಶೆಟ್ಟಿ ಎಂಬುವರು ಈತನ ಕೃತ್ಯಗಳಿಗೆ ಸಹಾಯ ಮಾಡಿದ್ದಾರೆ. ಪ್ರಮುಖವಾಗಿ ಅಂತರ್‍ರಾಷ್ಟ್ರೀಯ ವೆಬ್‍ಸೈಟ್‍ಗಳನ್ನು ಹ್ಯಾಕ್ ಮಾಡಿದ್ದು, ಇದಕ್ಕೆ ಸಂಬಂಧಿಸಿದಂತೆ ತಾಂತ್ರಿಕ ಸಾಕ್ಷಿಗಳನ್ನು ಸಂಗ್ರಹಿಸುತ್ತಿದ್ದೇವೆ ಅವರು ತಿಳಿಸಿದರು.

ಪಿಯುಸಿ ವ್ಯಾಸಂಗ ಮಾಡಿರುವ ಶ್ರೀಕೃಷ್ಣ, ವಿದೇಶದಲ್ಲಿ ಬಿಎಸ್ಸಿ ಕಂಪ್ಯೂಟರ್ ಸೈನ್ಸ್ ಪದವಿ ಪಡೆದು ಸ್ವದೇಶಕ್ಕೆ ವಾಪಸಾಗಿದ್ದ. ತಾಂತ್ರಿಕವಾಗಿ ಪರಿಣಿತಿ ಹೊಂದಿದ್ದ ಈತ ಡ್ರಗ್ಸ್ ಪ್ರಕರಣದಲ್ಲಿ ಕೆಂಪೇಗೌಡ ನಗರ ಪೊಲೀಸರಿಂದ ಬಂಧಿತರಾಗಿದ್ದ ಆರೋಪಿಗಳಾದ ಸುನೀಶ್ ಹೆಗ್ಡೆ, ಪ್ರಸಿದ್ದ್ ಶೆಟ್ಟಿ, ಹೇಮಂತ್ ಜತೆ ಗುಂಪು ಕಟ್ಟಿಕೊಂಡು ದಂಧೆ ನಡೆಸುತ್ತಿದ್ದ.

ಅಷ್ಟೇ ಅಲ್ಲದೆ, ಆರೋಪಿಗಳು ಶ್ರೀಕೃಷ್ಣನ ಮೂಲಕ ಡಾರ್ಕ್ ವೆಬ್‍ನಲ್ಲಿ ಹೈಡ್ರೋ ಗಾಂಜಾ ಆಮದು ಮಾಡಿಕೊಂಡು ಬಿಟ್ ಕಾಯಿನ್ ಮೂಲಕ ಹಣ ವರ್ಗಾವಣೆ ಮಾಡಿಸಿಕೊಳ್ಳುತ್ತಿದ್ದರು. ಬಳಿಕ ಸಂಜಯನಗರ, ಚಿಕ್ಕಮಗಳೂರು, ದೇವನಹಳ್ಳಿ ಸೇರಿದಂತೆ ಹಲವು ಫ್ಲ್ಯಾಟ್‍ಗಳಲ್ಲಿ ಡ್ರಗ್ಸ್ ಪಾರ್ಟಿ ಮಾಡುತ್ತಿದ್ದರು ಎನ್ನುವ ಮಾಹಿತಿ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ.

ಹಿಂದಿನ ವರ್ಷ ಕರ್ನಾಟಕ ಸರಕಾರದ ಇ-ಪ್ರೊಕ್ಯೂರ್‍ಮೆಂಟ್ ವೆಬ್‍ಸೈಟ್ ಹ್ಯಾಕ್ ಮಾಡಿದ್ದ. ಜತೆಗೆ, ಗೇಮಿಂಗ್ ವೆಬ್‍ಸೈಟ್‍ಗಳನ್ನು ಹ್ಯಾಕ್ ಮಾಡಿಸಿ ದತ್ತಾಂಶ ಕದ್ದು ಮಾಲಕರಿಗೆ ಬೆದರಿಸಿ ಅಕ್ರಮ ಹಣ ಸಂಪಾದನೆ ಮಾಡುತ್ತಿದ್ದ ಆರೋಪಗಳು ಕೇಳಿಬಂದಿವೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News