'SBI ನೋ 1 ಬಿಲಿಯನ್ ಡಾಲರ್ ಅದಾನಿ ಲೋನ್' ಭಿತ್ತಿಪತ್ರ ಹಿಡಿದು ಮೈದಾನಕ್ಕೆ ನುಗ್ಗಿದ ಪ್ರತಿಭಟನಕಾರರು

Update: 2020-11-27 15:37 GMT

ಸಿಡ್ನಿ: ಕೊರೋನ ವೈರಸ್‌ನ ಹೊರತಾಗಿಯೂ ಕ್ರಿಕೆಟ್ ಸ್ಟೇಡಿಯಂಗಳಲ್ಲಿ ಪ್ರೇಕ್ಷಕರು ಮತ್ತೆ ಕಾಣಿಸಿಕೊಂಡಿರುವುದು ಉತ್ತಮ ಬೆಳವಣಿಗೆಯಾಗಿದ್ದರೂ ಕೆಲವರು ಮೈದಾನದೊಳಗೆ ನುಸುಳಿ ಆಟವನ್ನು ಸ್ಥಗಿತಗೊಳಿಸುವುದು ನಿಜಕ್ಕೂ ಅಪಾಯಕಾರಿಯಾಗಿದೆ.

 ಇಂತಹ ದೃಶ್ಯವೊಂದು ಭಾರತ ಹಾಗೂ ಆಸ್ಟ್ರೇಲಿಯ ನಡುವೆ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಶುಕ್ರವಾರ ನಡೆದ ಮೊದಲ ಏಕದಿನ ಪಂದ್ಯದ ವೇಳೆ ಕಂಡುಬಂತು. ಆಸ್ಟ್ರೇಲಿಯ ಇನಿಂಗ್ಸ್‌ನಲ್ಲಿ ಆರು ಓವರ್‌ಗಳ ಆಟ ಮುಗಿದ ಬಳಿಕ ಇಬ್ಬರು ಪ್ರತಿಭಟನಕಾರರು ಮೈದಾನದೊಳಗೆ ನುಸುಳಿದರು. ಇವರು ನೋ 1 ಬಿಲಿಯನ್ ಡಾಲರ್ ಅದಾನಿ ಲೋನ್ಸ್ ಎಂದು ಬರೆದಿದ್ದ ಭಿತ್ತಿಪತ್ರವನ್ನು ಹಿಡಿದಿದ್ದರು.

ಭದ್ರತಾ ಸಿಬ್ಬಂದಿ ತಕ್ಷಣವೇ ಪ್ರತಿಭಟನಾಕಾರರನ್ನು ಮೈದಾನದಿಂದ ಹೊರಗೆ ಕರೆದೊಯ್ದರು. ಪ್ರತಿಭಟನಕಾರರು ಧರಿಸಿದ್ದ ಟೀಶರ್ಟ್‌ನ ಎದುರು ಭಾಗದಲ್ಲಿ ಸ್ಟಾಪ್ ಅದಾನಿ ಎಂದು ಬರೆದಿತ್ತು. ಹಿಂಭಾಗದಲ್ಲಿ ಸ್ಟಾಪ್ ಕೋಲ್, ಸ್ಟಾಪ್ ಅದಾನಿ, ಟೇಕ್ ಆ್ಯಕ್ಷನ್ ಎಂದು ಬರೆದಿತ್ತು.

ಶುಕ್ರವಾರ ಪತ್ರಿಕಾಪ್ರಕಟನೆ ಹೊರಡಿಸಿದ್ದ ಸ್ಟಾಪ್ ಅದಾನಿ ಗುಂಪು, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅದಾನಿಗೆ 1 ಬಿಲಿಯನ್ ಆಸ್ಟ್ರೇಲಿಯಾ ಡಾಲರ್ ಸಾಲವನ್ನು ಅನುಮೋದಿಸಬಾರದು ಎಂದು ಒತ್ತಾಯಿಸಿತ್ತು. ಈ ವರ್ಷದ ಸೆಪ್ಟಂಬರ್‌ನಲ್ಲಿ ಆಸ್ಟ್ರೇಲಿಯದ ವಿವಾದಾತ್ಮಕ ಹಾಗೂ ಕುಖ್ಯಾತ ಅದಾನಿ ಕಲ್ಲಿದ್ದಲು ಗಣಿ ಪರಿಸರ ಕಾರ್ಯಕರ್ತರ ವಿರುದ್ಧ ಜಯ ಸಾಧಿಸಿತ್ತು. ಕ್ವೀನ್ಸ್‌ಲ್ಯಾಂಡ್ ರಾಜ್ಯದ ಜನರಿಗೆ ಅದಾನಿ ಕಂಪೆನಿ 1500ಕ್ಕೂ ಅಧಿಕ ಉದ್ಯೋಗದ ಭರವಸೆ ನೀಡಿದೆ ಎಂದು ಗ್ರೂಪ್ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News