ದೇಶದಲ್ಲಿ ಶೇ.6ರಷ್ಟು ಮಂದಿಗೆ ಮಾತ್ರ ಒಡೆದು ಆಳುವ, ದ್ವೇಷದ ಮನೋಭಾವ: ನ್ಯಾಯವಾದಿ ಬಾಲನ್

Update: 2020-11-27 14:28 GMT

ಬೆಂಗಳೂರು, ನ.27: ದೇಶದ ಕೇವಲ ಶೇ.6ರಷ್ಟು ಮಂದಿ ಮಾತ್ರ ಒಡೆದು ಆಳುವ, ದ್ವೇಷದ ಮನೋಭಾವನೆಯನ್ನು ಹೊಂದಿದ್ದಾರೆ. ಆದರೆ, ಶೇ.94ರಷ್ಟು ಮಂದಿ ಹಿಂದು, ಮುಸ್ಲಿಮ್, ಸಿಖ್, ಕ್ರೈಸ್ತ, ಬುದ್ಧ, ಜೈನ, ದಲಿತರು ಹಾಗೂ ಇತರ ವರ್ಗದವರು ದೇಶದಲ್ಲಿ ಶಾಂತಿ, ಸೌಹಾರ್ದತೆ ಹಾಗೂ ನ್ಯಾಯವನ್ನು ಉಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಹೈಕೋರ್ಟ್ ಹಿರಿಯ ನ್ಯಾಯವಾದಿ ಬಾಲನ್ ಹೇಳಿದರು.

ನಗರದ ಖುದ್ದೂಸ್ ಸಾಹೇಬ್ ಈದ್ಗಾ ಬಳಿಯಿರುವ ಖಾದ್ರಿಯಾ ಮಸ್ಜಿದ್‍ನಲ್ಲಿ ಆಲ್ ಇಂಡಿಯಾ ಮಿಲ್ಲಿ ಕೌನ್ಸಿಲ್ ವತಿಯಿಂದ ಆಯೋಜಿಸಲಾಗಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ದುರದೃಷ್ಟವಶಾತ್ ಈ ಶೇ.6ರಷ್ಟು ಮಂದಿ ಇವತ್ತು ದೇಶದ ಚುಕ್ಕಾಣಿ ಹಿಡಿದಿದ್ದಾರೆ. ಆದರೆ, ಇನ್ನುಳಿದ ಶೇ.94ರಷ್ಟು ಮಂದಿ ಅವರ ವಿರುದ್ಧ ಧ್ವನಿ ಎತ್ತಲು ಸಿದ್ಧವಾಗಿಲ್ಲ ಎಂದರು.

ಭಯದ ವಾತಾವರಣವನ್ನು ಜನಸಾಮಾನ್ಯರ ಮನಸ್ಸಿನಿಂದ ತೆಗೆಯಬೇಕಿದೆ. ಅದಕ್ಕಾಗಿ, ಒಗ್ಗಟ್ಟನ್ನು ಮೂಡಿಸಬೇಕು. ದೇಶ, ಸಂವಿಧಾನವನ್ನು ಉಳಿಸಲು ಎಲ್ಲರೂ ಸೇರಿ ಒಂದು ಚಳವಳಿಯನ್ನು ನಡೆಸಬೇಕಿದೆ ಎಂದು ಬಾಲನ್ ಹೇಳಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಆಲ್ ಇಂಡಿಯಾ ಮಿಲ್ಲಿ ಕೌನ್ಸಿಲ್‍ನ ರಾಜ್ಯಾಧ್ಯಕ್ಷ ಮುಫ್ತಿ ಬಾಖರ್ ಅರ್ಶದ್ ಖಾಸ್ಮಿ ಮಾತನಾಡಿ, ಪ್ರವಾದಿ ಮುಹಮ್ಮದ್(ಸ) ಅವರ ಅಂತಿಮ ಹಜ್ ಯಾತ್ರೆ ವೇಳೆ ಮಾಡಿದ ಪ್ರಧಾನ ಭಾಷಣದಲ್ಲಿ ಪ್ರತಿಯೊಬ್ಬರ ಹಕ್ಕುಗಳ ರಕ್ಷಣೆ ಬಗ್ಗೆ ಪ್ರಸ್ತಾಪ ಮಾಡಿದ್ದರು. ಇವತ್ತು ಇಡೀ ವಿಶ್ವದಲ್ಲಿ ಎಷ್ಟು ಸಂವಿಧಾನಗಳು ರಚನೆಯಾಗಿವೆಯೋ ಅವುಗಳಲ್ಲಿ ಪ್ರಜೆಗಳ ಹಕ್ಕುಗಳ ರಕ್ಷಣೆಗೆ ಒತ್ತು ನೀಡಿರುವುದರ ಹಿಂದಿನ ಪ್ರೇರಣೆ ಪ್ರವಾದಿ ಮುಹಮ್ಮದ್(ಸ) ಆಗಿದ್ದಾರೆ ಎಂದರು.

ನಮ್ಮ ದೇಶದ ಸಂವಿಧಾನದಲ್ಲಿಯೂ ಪ್ರಜೆಗಳ ಹಕ್ಕುಗಳಿಗೆ ರಕ್ಷಣೆ ನೀಡಿರುವ ಪ್ರೇರಣೆ ಅಲ್ಲಿಂದಲೆ ಪಡೆಯಲಾಗಿದೆ. ಈ ಸಂವಿಧಾನ ರಕ್ಷಣೆ ಮಾಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಮುಸ್ಲಿಮರಲ್ಲಿ ಶಿಕ್ಷಣದ ಕೊರತೆಯಿಂದಾಗಿ, ಸಂವಿಧಾನದ ಬಗ್ಗೆಯೂ ತಿಳುವಳಿಕೆ ಕಡಿಮೆಯಿದೆ. ಅಲ್ಲದೆ, ಒಗ್ಗಟ್ಟಿನ ಕೊರತೆಯೂ ಇದೆ. ಆದುದರಿಂದ, ಈ ನಿಟ್ಟಿನಲ್ಲಿ ನಡೆಯಬೇಕಾದ ಚಳವಳಿ ಸರಿಯಾದ ಹಾದಿಯಲ್ಲಿ ಸಾಗುತ್ತಿಲ್ಲ ಎಂದು ಅವರು ಹೇಳಿದರು.

ಸಮುದಾಯದಲ್ಲಿ ಒಗ್ಗಟ್ಟು ಮೂಡಿಸುವುದು, ಶಿಕ್ಷಣಕ್ಕೆ ಒತ್ತು ನೀಡುವ ಸಂಬಂಧ ಆಲ್ ಇಂಡಿಯಾ ಮಿಲ್ಲಿ ಕೌನ್ಸಿಲ್ ಮಿಷನ್ 2050 ಅಡಿಯಲ್ಲಿ ಈ ಪ್ರಯತ್ನ ಮಾಡುತ್ತಿದೆ. ಶಿಕ್ಷಣ ಹಾಗೂ ಒಗ್ಗಟ್ಟು ನಮ್ಮನ್ನು ಸಫಲತೆಯ ಹಾದಿಯಲ್ಲಿ ಕೊಂಡೊಯ್ಯುತ್ತದೆ ಎಂಬುದನ್ನು ನಾವು ಮರೆಯಬಾರದು. ಶಿಕ್ಷಣ ಹಾಗೂ ಒಗ್ಗಟ್ಟಿನ ಕೊರತೆಯಿಂದಾಗಿಯೆ ಇವತ್ತು ಸಮುದಾಯ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದೆ ಎಂದು ಬಾಖರ್ ಅರ್ಶದ್ ಖಾಸ್ಮಿ ತಿಳಿಸಿದರು.

ಸೆಕ್ಯುಲರ್ ಅಡ್ವಕೇಟ್ಸ್ ಫೋರಂ ಅಧ್ಯಕ್ಷ ಸೈಯ್ಯದ್ ಇಶ್ತಿಯಾಕ್ ಅಹ್ಮದ್, ಸಂವಿಧಾನದಲ್ಲಿ ನಾವು ನಮ್ಮ ಹಕ್ಕುಗಳನ್ನು ಯಾವ ರೀತಿ ರಕ್ಷಣೆ ಮಾಡಿಕೊಳ್ಳಬೇಕು ಎಂಬುದರ ಬಗ್ಗೆ ತಿಳಿಸಲಾಗಿದೆ. ಆದರೆ, ಈಗ ಆಡಳಿತ ನಡೆಸುತ್ತಿರುವ ಸರಕಾರವು ಜನರ ಹಕ್ಕುಗಳನ್ನು ದಮನ ಮಾಡಲು ಪ್ರಯತ್ನಿಸುತ್ತಿದೆ. ಕೇವಲ ಮುಸ್ಲಿಮರಷ್ಟೇ ಅಲ್ಲ, ರೈತರು, ದಲಿತರು, ಕಾರ್ಮಿಕರ ವಿರುದ್ಧ ಕಾನೂನುಗಳನ್ನು ಜಾರಿಗೆ ತಂದು ಎಲ್ಲರನ್ನೂ ಸಮಸ್ಯೆಗಳ ಸುಳಿಗೆ ಸಿಲುಕಿಸಲು ಪ್ರಯತ್ನಿಸುತ್ತಿದೆ ಎಂದು ದೂರಿದರು.

ಆಲ್ ಇಂಡಿಯಾ ಮಿಲ್ಲಿ ಕೌನ್ಸಿಲ್ ರಾಜ್ಯ ಉಪಾಧ್ಯಕ್ಷ ಸುಲೇಮಾನ್ ಖಾನ್, ಕಾರ್ಯದರ್ಶಿ ಸೈಯದ್ ಶಫಿವುಲ್ಲಾ, ಕೇಂದ್ರ ಸಮಿತಿ ಸದಸ್ಯ ಅಡ್ವಕೇಟ್ ಮನ್ಝೂರ್ ಅಹ್ಮದ್ ಶರೀಫ್, ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯ ಸೈಯ್ಯದ್ ರೋಷನ್ ಅಬ್ಬಾಸ್, ಖಜಾಂಚಿ ಆಸಿಮ್ ಅಫ್ರೋಝ್ ಸೇಠ್, ಖಾಝಿ ಮುಝಫ್ಫರ್ ಉಮ್ರಿ, ಮೌಲಾನ ಅಬ್ದುಲ್ಲಾ ಉಮ್ರಿ, ಮೌಲಾನ ಹಸನ್ ಆಮಿರಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News