ಜೂನ್ ವೇಳೆ ವಸತಿ ಇಲಾಖೆಯ ಎಲ್ಲ ಮನೆಗಳು ಪೂರ್ಣ: ಸಚಿವ ವಿ.ಸೋಮಣ್ಣ

Update: 2020-11-27 14:57 GMT

ಬೆಂಗಳೂರು, ನ. 27: ವಸತಿ ಇಲಾಖೆಯಿಂದ ನಿರ್ಮಿಸುತ್ತಿರುವ ಎಲ್ಲ ಮನೆಗಳನ್ನು 2021ರ ಜೂನ್ ಅಥವಾ ಜುಲೈ ಅಂತ್ಯದ ವೇಳೆ ಪೂರ್ಣಗೊಳಿಸಲಾಗುವುದು. ಈ ಸಂಬಂಧ ಏನೇ ಸಮಸ್ಯೆಗಳಿದ್ದರೂ ಅವುಗಳನ್ನು ಇನ್ನು ಹದಿನೈದು ಇಪ್ಪತ್ತು ದಿನಗಳ ಒಳಗೆ ಪರಿಹರಿಸಲಾಗುವುದು ಎಂದು ವಸತಿ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.

ಶುಕ್ರವಾರ ವಿಕಾಸಸೌಧದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ಕರ್ನಾಟಕ ಗೃಹ ಮಂಡಳಿ(ಕೆಎಚ್‍ಬಿ)ಯಿಂದ 1.04 ಲಕ್ಷ ನಿವೇಶನಗಳನ್ನು ಮಾಡಲು ಅನುಮೋದನೆ ನೀಡಿದ್ದು, ಒಟ್ಟು 334 ಎಕರೆ ಪ್ರದೇಶದಲ್ಲಿ ಮನೆಗಳ ನಿರ್ಮಾಣಕ್ಕೆ ಕಾರ್ಯಾದೇಶ ನೀಡಲಾಗಿದೆ ಎಂದರು.

ಒಟ್ಟು 4,475 ಕೋಟಿ ರೂಪಾಯಿಗಳ ವೆಚ್ಚದಲ್ಲಿ 46,490 ಮನೆಗಳ ಪೈಕಿ ಈಗಾಗಲೇ 31,382 ಮನೆಗಳ ನಿರ್ಮಾಣಕ್ಕೆ ಭೂಮಿಪೂಜೆ ಮಾಡಲಾಗಿದೆ ಎಂದ ಅವರು, ಎಲ್ಲ ಯೋಜನೆಗಳ ಅನುಷ್ಠಾನ ಮತ್ತು ಫಲಾನುಭವಿಗಳ ಆಯ್ಕೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲಾಗುವುದು ಎಂದರು.

ಫಲಾನುಭವಿಗಳ ಆಯ್ಕೆಯಲ್ಲಿ ಶೇ.50 ರಷ್ಟನ್ನು ಶಾಸಕರು ಮತ್ತು ಸಂಸದರ ಶಿಫಾರಸ್ಸು ಮಾಡಿದವರಿಗೆ ಹಾಗೂ ಉಳಿದ ಶೇ.50ರಷ್ಟನ್ನು ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಿರುವ ಬಡ ಹಾಗೂ ಮಧ್ಯಮ ವರ್ಗದವರಿಗೆ ನೀಡಲಾಗುತ್ತದೆ. ಅವರಿಗೂ ಸಹ ಸ್ಥಳ ತೋರಿಸಿ ಅವರು ಇಚ್ಛೆಪಟ್ಟ ಸ್ಥಳದಲ್ಲೇ ಮಂಜೂರು ಮಾಡಲಾಗುವುದು ಎಂದರು.

ಮಾಹಿತಿ ಪಡೆದಿದ್ದಾರೆ: ವೀರಶೈವ-ಲಿಂಗಾಯತ ಸಮುದಾಯವನ್ನು ಕೇಂದ್ರ ಒಬಿಸಿ ಪಟ್ಟಿಗೆ ಸೇರ್ಪಡೆ ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಯಡಿಯೂರಪ್ಪನವರ ಮಾಹಿತಿ ಪಡೆದಿದ್ದಾರೆ. ಈ ಸಂಬಂಧ ಮತ್ತಷ್ಟು ಪೂರಕ ಮಾಹಿತಿ ಸಂಗ್ರಹಿಸಿದ ಬಳಿಕ ಕೇಂದ್ರಕ್ಕೆ ಶಿಫಾರಸ್ಸು ಮಾಡುವ ಉದ್ದೇಶದಿಂದ ತಾತ್ಕಾಲಿಕವಾಗಿ ಮುಂದೂಡಲಾಗಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News