ಪೆರೋಲ್ ಪಡೆದು ಬಿಡುಗಡೆಯಾಗಿದ್ದ ಕೈದಿಗಳು ವಾಪಸ್ ಜೈಲುಗಳತ್ತ

Update: 2020-11-27 15:36 GMT

ಬೆಂಗಳೂರು, ನ.27: ಕೊರೋನ ಕಾರಣದಿಂದಾಗಿ ಜೈಲಿನಲ್ಲಿದ್ದವರು ಪೆರೋಲ್ ಮೇಲೆ ಬಿಡುಗಡೆಯಾಗಿದ್ದ ಕೈದಿಗಳು ಇದೀಗ ವಾಪಸ್ ಜೈಲುಗಳತ್ತ ಮುಖ ಮಾಡಿದ್ದು, ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಕೋವಿಡ್ ಸೋಂಕು ವ್ಯಾಪಕವಾಗಿ ಹರಡುತ್ತಿದ್ದ ಹಿನ್ನೆಲೆಯಲ್ಲಿ ರಾಜ್ಯದ ಜೈಲುಗಳಲ್ಲಿ ಎಲ್ಲಾ ರೀತಿಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಜೊತೆಗೆ ರಾಜ್ಯ ಸರಕಾರದ ನಿರ್ದೇಶನದ ಮೇರೆಗೆ ಕೈದಿಗಳನ್ನು ಪೆರೋಲ್ ಮೇಲೆ ಬಿಡುಗಡೆ ಮಾಡಲಾಗಿತ್ತು.

ಕೊರೋನ ಬಳಿಕ ಜೈಲಲ್ಲಿರುವ ಕೈದಿಗಳಿಗೆ ಯಾವುದೇ ತೊಂದರೆಯಾಗಬಾರದೆಂದು ಕೈದಿಗಳಿಗೆ ತಾತ್ಕಾಲಿಕ ಪೆರೋಲ್ ನೀಡುವಂತೆ ಸರಕಾರ ಸೂಚನೆ ನೀಡಿತ್ತು. ಈ ಹಿನ್ನೆಲೆ ಜೈಲಾಧಿಕಾರಿಗಳು ಸನ್ನಡತೆ ಹೊಂದಿರುವ ಕೈದಿಗಳನ್ನು ಮನೆಗೆ ಕಳುಹಿಸಿದ್ದರು.

ರಾಜ್ಯದಲ್ಲಿ ಒಟ್ಟು 47 ಕಾರಾಗೃಹಗಳಿದ್ದು, ಅವುಗಳಲ್ಲಿ 9 ಕೇಂದ್ರ ಕಾರಾಗೃಹ, 21 ಜಿಲ್ಲಾ ಕಾರಾಗೃಹ, 1 ಬಯಲು ಕಾರಾಗೃಹ ಹಾಗೂ 13 ತಾಲೂಕು ಹಾಗೂ 3 ಕಂದಾಯ ಕಾರಾಗೃಹಗಳಿವೆ. ಸದ್ಯ ರಾಜ್ಯ ಕಾರಾಗೃಹಗಳಲ್ಲಿ ಒಟ್ಟು 15,300 ಕೈದಿಗಳು ಇದ್ದು, ಅದರಲ್ಲಿ ವಿಚಾರಣಾಧೀನ ಕೈದಿಗಳು 11,889, ಸಜಾ ಕೈದಿಗಳು 3,904 ಮಂದಿ ಇದ್ದಾರೆ. ಇದರಲ್ಲಿ ಪುರುಷ ಕೈದಿಗಳು 13,885 ಮಂದಿ ಹಾಗೂ 688 ಮಹಿಳಾ ಕೈದಿಗಳಿದ್ದಾರೆ.

ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೇವಲ 3,500 ಕೈದಿಗಳನ್ನು ಇರಿಸಲು ಸಾಧ್ಯವಿದೆ. ಆದರೆ ಸದ್ಯ 4,953 ಪುರುಷರು, 205 ಮಹಿಳೆಯರು ಸೇರಿದಂತೆ ಸುಮಾರು ಐದು ಸಾವಿರಕ್ಕೂ ಹೆಚ್ಚು ಕೈದಿಗಳನ್ನು ಜೈಲಿನಲ್ಲಿಡಲಾಗಿದೆ. ಇನ್ನು ಪರಪ್ಪನ ಅಗ್ರಹಾರದಿಂದ ಒಟ್ಟು 99 ಮಂದಿ ಪೆರೋಲ್ ಪಡೆದಿದ್ದರು. ಇದೀಗ ಅವರೆಲ್ಲರೂ ಜೈಲುಗಳತ್ತ ಮುಖ ಮಾಡಿದ್ದಾರೆ.

ಬೆಳಗಾವಿಯ ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಜೀವಾವಧಿ ಶಿಕ್ಷೆಗೆ ಒಳಗಾದ 84 ಕೈದಿಗಳನ್ನು ಪೆರೋಲ್ ಮೇಲೆ ಬಿಡುಗಡೆ ಮಾಡಲಾಗಿತ್ತು. ಇದೀಗ ಅವಧಿ ಮುಗಿದ ಕಾರಣ ಪೆರೋಲ್ ಮೇಲೆ ತೆರಳಿದ್ದ ಕೈದಿಗಳು ಜೈಲಿಗೆ ಮರಳಿದ್ದಾರೆ. ಒಂದು ಸಾವಿರ ಕೈದಿಗಳ ಸಾಮರ್ಥ್ಯ ಹೊಂದಿರುವ ಹಿಂಡಲಗಾ ಜೈಲಿನಲ್ಲಿ ಈಗ 884 ಕೈದಿಗಳಿದ್ದಾರೆ.

ಪೆರೋಲ್ ಪಡೆದವರು ಆರೋಗ್ಯ ತಪಾಸಣೆಗೆ ಒಳಗಾಗಿ ಪ್ರಮಾಣ ಪತ್ರದ ಜತೆಗೆ ಬಂದರೆ ಜೈಲಿನೊಳಗೆ ಸೇರಿಸಿಕೊಳ್ಳಲಾಗುತ್ತಿದೆ. ಹೀಗೆ ಹೊಸದಾಗಿ ಜೈಲು ಪ್ರವೇಶಿಸುವ ಕೈದಿಗಳಿಗೆ 20 ದಿನಗಳ ಕಾಲ ಕ್ವಾರಂಟೈನ್ ಕಡ್ಡಾಯಗೊಳಿಸಲಾಗಿದೆ. ಅಲ್ಲದೆ ಜೈಲಿನಲ್ಲಿ ಕೈದಿಗಳಿಗೆ ಪ್ರತಿ ವಾರಕ್ಕೊಮ್ಮೆ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News