ಬೆಂಗಳೂರು: ಶೇ.50ರಷ್ಟು ಪಾಲಿಕೆ ಆರೋಗ್ಯ ಸಿಬ್ಬಂದಿಗೆ ಪಿಪಿಇ ಕಿಟ್ ಇಲ್ಲ !

Update: 2020-11-27 16:00 GMT

ಬೆಂಗಳೂರು, ನ.27: ನಗರದಲ್ಲಿ ಪಾಲಿಕೆ ವತಿಯಿಂದ ಕೈಗೊಳ್ಳುವ ಕೊರೋನ ಪರೀಕ್ಷೆ ಮತ್ತು ಆರೋಗ್ಯ ತಪಾಸಣೆ ಶಿಬಿರಗಳಲ್ಲಿ ಪಿಪಿಇ ಕಿಟ್ ಬಳಕೆ ಪ್ರಮಾಣ ಶೇ.50 ಕಡಿಮೆಯಾಗಿದೆ. ಆದುದರಿಂದಾಗಿ ಆರೋಗ್ಯ ಸಿಬ್ಬಂದಿಗೆ ಕೊರೋನ ಸೋಂಕು ಹರಡುವ ಭೀತಿ ಎದುರಾಗಿದೆ.

ರಾಜ್ಯದ ಕೊರೋನ ಸೋಂಕಿತರಲ್ಲಿ ಶೇ.45 ಕ್ಕೂ ಅಧಿಕ ಪ್ರಕರಣಗಳು ರಾಜಧಾನಿಯಲ್ಲಿ ಕಂಡು ಬರುತ್ತಿದೆ. ನಗರದಲ್ಲಿ ಪ್ರತಿನಿತ್ಯ 50 ಸಾವಿರಕ್ಕೂ ಅಧಿಕ ಸೋಂಕು ಪರೀಕ್ಷೆ ಮಾಡುವ ಗುರಿಯನ್ನು ಬಿಬಿಎಂಪಿ ಪಾಲಿಸುತ್ತಿದೆ. ಈ ಗುರಿ ತಲುಪಲು 141 ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು 450 ಕ್ಕೂ ಅಧಿಕ ಮೊಬೈಲ್ ಘಟಕದ ಮೂಲಕ ಕೋವಿಡ್ ಪರೀಕ್ಷೆ ಕೈಗೊಳ್ಳಲಾಗುತ್ತಿದೆ. ಆದರೆ, ಅಲ್ಲಿ ಕೆಲಸ ಮಾಡುವ 1,500 ಕ್ಕೂ ಅಧಿಕ ಆರೋಗ್ಯ ಸಿಬ್ಬಂದಿಗಳಲ್ಲಿ ಶೇ.60 ಮಂದಿ ಪಿಪಿಇ ಕಿಟ್ ಧರಿಸದೇ ಕೊರೋನ ಪರೀಕ್ಷಾ ಕಾರ್ಯದಲ್ಲಿ ಭಾಗಿಯಾಗಿದ್ದಾರೆ.

ಸೋಂಕು ಭೀತಿ: ಪ್ರತಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ 10 ತಂಡಗಳನ್ನು ರಚಿಸಿ ಗಂಟಲು ದ್ರವ ಸಂಗ್ರಹ ಗುರಿ ನೀಡಲಾಗುತ್ತದೆ. ಈ 10 ಮಂದಿಯಲ್ಲಿ ತಲಾ ಒಬ್ಬ ಸ್ವಾಬ್ ಕಲೆಕ್ಟರ್ ಹಾಗೂ ದತ್ತಾಂಶ ಸಂಗ್ರಹಣೆ ಸಿಬ್ಬಂದಿ ಒಳಗೊಂಡ ಇಬ್ಬರ ತಂಡ ರಚಿಸಿ ಸ್ವಾಬ್ ಸಂಗ್ರಹಣೆಗೆ ಕಳಿಸಲಾಗುತ್ತದೆ. ಅದರಲ್ಲಿ ಒಬ್ಬರಿಗಷ್ಟೇ ಪಿಪಿಇ ಕಿಟ್ ನೀಡಲಾಗುತ್ತಿದೆ. ಉಳಿದ ಸಿಬ್ಬಂದಿ ನೇರವಾಗಿ ಜನರೊಂದಿಗೆ ಸಂಪರ್ಕ ಹೊಂದುವ ಮೂಲಕ ಸೋಂಕಿಗೆ ಒಳಗಾಗುವ ಸಾಧ್ಯತೆಯಿದೆ ಎಂದು ಆತಂಕ ವ್ಯಕ್ತಪಡಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News